ಚನ್ನರಾಯಪಟ್ಟಣ: ತಾಲ್ಲೂಕಿನಲ್ಲಿ ರಾಗಿ ಮತ್ತು ಮುಸುಕಿನ ಜೋಳದ ಬಿತ್ತನೆ ಕಾರ್ಯ ಶೇ 85 ರಷ್ಟು ಪೂರ್ಣಗೊಂಡಿದ್ದು, ಇನ್ನೊಂದು ವಾರದಲ್ಲಿ ಮಳೆಯಾಗದಿದ್ದಲ್ಲಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ತಾಲ್ಲೂಕು ಕಚೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ ಮುಂಗಾರು ಹಂಗಾಮಿನ ಮಳೆ, ಬೆಳೆ ಪರಿಸ್ಥಿತಿ ಮತ್ತು ಬೆಳೆವಿಮೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಬೆಳೆ ವಿಮಾ ಯೋಜನೆಯ ಅನುಕೂಲವನ್ನು ರೈತರಿಗೆ ಒದಗಿಸಲು ಕಂದಾಯ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ರಾಗಿ ಬೆಳೆಗೆ ವಿಮೆ ಮಾಡಿಸಲು ಇದೇ ತಿಂಗಳು 16 ಕೊನೆಯ ದಿನಾಂಕವಾಗಿದೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ಹೆಚ್ಚಿನ ಪ್ರಚಾರ ನೀಡುವ ಮೂಲಕ ಬೆಳೆವಿಮೆ ಪಾವತಿಸಲು ರೈತರಿಗೆ ತಿಳಿಹೇಳಬೇಕು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣೆ ಮಾಡಿಸಬೇಕು ಎಂದರು.
ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ ರಾಜಸುಲೋಚನಾ ಮಾತನಾಡಿ, ಪಿಎಂಕಿಸಾನ್ ಯೋಜನೆಯಡಿ ತಾಲ್ಲೂಕಿನಲ್ಲಿ ಇನ್ನೂ 8,996 ರೈತರು ಇ-ಕೆವೈಸಿ ಮಾಡಿಸಲು ಬಾಕಿ ಇದೆ.
ಸಹಾಯಕ ಕೃಷಿನಿರ್ದೇಶಕ ಎಂ.ಎಸ್. ಜನಾರ್ದನ್ ಮಾತನಾಡಿ, ಬೆಳೆಸಮೀಕ್ಷೆ ವರದಿಯು ಬೆಳೆವಿಮೆ ಮತ್ತು ಬೆಂಬಲ ಬೆಲೆಯ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಜಾಗರೂಕತೆಯಿಂದ ಬೆಳೆ ಸಮೀಕ್ಷೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಾಸನ ಉಪವಿಭಾಗದ ಉಪಕೃಷಿ ನಿರ್ದೇಶಕ ಡಾ. ಭಾನುಪ್ರಕಾಶ್ ಮಾತನಾಡಿದರು. ಗ್ರೇಡ್-2 ತಹಶೀಲ್ದಾರ್ ನಾಗರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಶಿರಸ್ತೇದಾರ್ ಪವನ್ ಕುಮಾರ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಫಣೀಂದ್ರ, ತಾಂತ್ರಿಕ ಅಧಿಕಾರಿ ಎಂ. ಪುಟ್ಟಭೈಲಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.