ADVERTISEMENT

ಹಾಸನ: ಆ್ಯಪ್‌ನಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ; 14.96 ಲಕ್ಷ ತಾಕುಗಳ ಗುರಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 5:20 IST
Last Updated 28 ಆಗಸ್ಟ್ 2024, 5:20 IST
ಹೊಳೆನರಸೀಪುರ ತಾಲ್ಲೂಕಿನ ಜಮೀನುಗಳಲ್ಲಿ ಬೆಳೆ ಸಮೀಕ್ಷೆ ನಡೆಸಲು ಸಹಕಾರ ನೀಡುತ್ತಿರುವ ಕೃಷಿ ಅಧಿಕಾರಿಗಳು.
ಹೊಳೆನರಸೀಪುರ ತಾಲ್ಲೂಕಿನ ಜಮೀನುಗಳಲ್ಲಿ ಬೆಳೆ ಸಮೀಕ್ಷೆ ನಡೆಸಲು ಸಹಕಾರ ನೀಡುತ್ತಿರುವ ಕೃಷಿ ಅಧಿಕಾರಿಗಳು.   

ಹಾಸನ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಯೋಜನೆಯಡಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭವಾಗಿದ್ದು, ಒಟ್ಟು 14.96 ಲಕ್ಷ ತಾಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸುವ ಗುರಿ ಹೊಂದಲಾಗಿದೆ.

ಪೂರ್ವ ಮುಂಗಾರು ಹಂಗಾಮಿನಲ್ಲಿ ರೈತರ 7.92 ಲಕ್ಷ ತಾಕುಗಳಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ರೈತರು ಸ್ವತಃ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ದಾಖಲಿಸಬಹುದಾಗಿದ್ದು, ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್-2024-25 ಅನ್ನು ಬಿಡುಗಡೆ ಮಾಡಲಾಗಿದೆ.

ಸದ್ಯಕ್ಕೆ 1.21 ಲಕ್ಷ ತಾಕುಗಳಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ. ಉಳಿದೆಡೆ ಬೆಳೆ ಸಮೀಕ್ಷೆ ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ.

ADVERTISEMENT

ಬೆಳೆ ಸಮೀಕ್ಷೆ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಬೆಳೆ ನಷ್ಟ ಪರಿಹಾರ, ಕನಿಷ್ಠ ಬೆಂಬಲ ಬೆಲೆ ಯೋಜನೆ, ಪಹಣಿಯಲ್ಲಿ ಬೆಳೆ ನಮೂದು ಮಾಡಲು, ಬೆಳೆ ವಿಮಾ ಯೋಜನೆ, ಬೆಳೆ ಸಾಲ ಇತ್ಯಾದಿ ಸೌಲಭ್ಯ ಒದಗಿಸಲು ಬಳಸಲಾಗುತ್ತದೆ.

ಜಿಲ್ಲೆಯ ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕು. ತಮ್ಮ ಜಮೀನಿನಲ್ಲಿ ಬೆಳೆದ ಎಲ್ಲ ಬೆಳೆಗಳ ವಿವರವನ್ನು ಮುಂಗಾರು ಬೆಳೆ ಸಮೀಕ್ಷೆ 2024 ಆ್ಯಪ್‌ ಮೂಲಕ ನಿಗದಿತ ಸಮಯದೊಳಗೆ ಅಪ್‍ಲೋಡ್ ಮಾಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಬೆಳೆ ದಾಖಲು ಮಾಡಲು ರೈತರಿಗೆ ಗೊಂದಲವಿದ್ದಲ್ಲಿ ಆಯಾ ಗ್ರಾಮಕ್ಕೆ ನಿಯೋಜಿಸಿರುವ ಖಾಸಗಿ ನಿವಾಸಿ (ಪಿ.ಆರ್.)ಗಳನ್ನು ಸಂಪರ್ಕಿಸಿ, ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಪಿ.ಆರ್. ಆ್ಯಪ್ ಮೂಲಕ ದಾಖಲಿಸಬಹುದಾಗಿದೆ.

ಆ್ಯಪ್ ಬಳಸುವ ವಿಧಾನ:

ಪ್ಲೇ ಸ್ಟೋರ್‌ನಲ್ಲಿ ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್-2024-25 ಅನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು.

ಇ–ಕೆವೈಸಿ ಮೂಲಕ ಆಧಾರ್ ದೃಢೀಕರಿಸಲು ಆಧಾರ್ ಸಂಖ್ಯೆ ನಮೂದಿಸಬೇಕು. ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ದಾಖಲಿಸಬೇಕು. ನಂತರ ಮೊಬೈಲ್ ಸಂಖ್ಯೆ ನಮೂದಿಸಿ ಆ್ಯಪ್‌ ಅನ್ನು ಸಕ್ರಿಯಗೊಳಿಸಬೇಕು.

ಮೊಬೈಲ್ ಆ್ಯಪ್, ಫೂಟ್ಸ್ ತಂತ್ರಾಂಶಕ್ಕೆ ಸಂಪರ್ಕಗೊಂಡಿದ್ದ ರೈತರ ಗುರುತಿನ ಸಂಖ್ಯೆ (ಎಫ್‌ಐಡಿ) ಯಲ್ಲಿ ಸೇರ್ಪಡೆಯಾದ ಎಲ್ಲ ಪಹಣಿ ವಿವರ, ಪಾಲಿಗಾನ್ ಹಾಗೂ ಜಿ.ಐ.ಎಸ್. ಮ್ಯಾಪ್ ಸ್ವಯಂಚಾಲಿತವಾಗಿ ಡೌನ್‍ಲೋಡ್ ಆಗಲಿದ್ದು, ಎಲ್ಲ ಸರ್ವೆ ನಂಬರ್‌ಗಳ ವಿವರ ಕಾಣಿಸುತ್ತದೆ. ಬೆಳೆ ಸಮೀಕ್ಷೆ ಪ್ರಾರಂಭಿಸಲು ಸರ್ವೆ ನಂಬರ್ ಆಯ್ಕೆ ಮಾಡಿ, ಆ ಸರ್ವೆ ನಂಬರ್ ಗಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಬೇಕು. ತಾವು ಬೆಳೆದ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ ಎರಡು ಫೋಟೊ ತೆಗೆದು ಮಾಹಿತಿ ಸೇರಿಸಬೇಕು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಮುಂಗಾರು; 7.92 ಲಕ್ಷ ತಾಕುಗಳಲ್ಲಿ ಸಮೀಕ್ಷೆ ಪೂರ್ಣ ಮುಂಗಾರ: 14.96 ಲಕ್ಷ ತಾಕುಗಳ ಪೈಕಿ 1.21 ಲಕ್ಷ ತಾಕುಗಳಲ್ಲಿ ಸಮೀಕ್ಷೆ ಅಂತ್ಯ

ಬೆಳೆ ಸಮೀಕ್ಷೆಗೆ ನಿಯೋಜಿಸಿರುವ ಗ್ರಾಮದ ಸ್ಥಳೀಯ ಯುವಕರು ರೈತ ಸಂಪರ್ಕ ಕೇಂದ್ರ ಕಂದಾಯ ತೋಟಗಾರಿಕೆ ಸೇರಿದಂತೆ ಇತರ ಇಲಾಖೆಗಳನ್ನು ಸಂಪರ್ಕಿಸಬಹುದು.
ರಾಜಸುಲೋಚನಾ ಜಂಟಿ ಕೃಷಿ ನಿರ್ದೇಶಕಿ‌

ಸಮೀಕ್ಷೆ ಕೈಗೊಳ್ಳಬೇಕಿರುವ ತಾಕುಗಳು (ತಾಲ್ಲೂಕು; ತಾಕುಗಳು)

ಆಲೂರು; 74456

ಅರಕಲಗೂಡು; 161148

ಅರಸೀಕೆರೆ; 239721

ಬೇಲೂರು; 140191

ಚನ್ನರಾಯಪಟ್ಟಣ; 351151

ಹಾಸನ; 284715

ಹೊಳೆನರಸೀಪುರ; 170130

ಸಕಲೇಶಪುರ; 75141

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.