ADVERTISEMENT

ಹಾಸನಾಂಬೆ ದರ್ಶನ: ವಾರಾಂತ್ಯದಲ್ಲೂ ಕ್ಷೀಣಿಸಿದ ಭಕ್ತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 23:30 IST
Last Updated 12 ನವೆಂಬರ್ 2023, 23:30 IST
<div class="paragraphs"><p>ಭಾನುವಾರ ಹಾಸನಾಂಬೆ ದರ್ಶನಕ್ಕೆ ಭಕ್ತರ ಸಂಖ್ಯೆ ಕ್ಷೀಣಿಸಿತ್ತು.</p></div>

ಭಾನುವಾರ ಹಾಸನಾಂಬೆ ದರ್ಶನಕ್ಕೆ ಭಕ್ತರ ಸಂಖ್ಯೆ ಕ್ಷೀಣಿಸಿತ್ತು.

   

ಹಾಸನ: ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನಕ್ಕೆ ಹತ್ತನೆ ದಿನವಾದ ಭಾನುವಾರ ಭಕ್ತರ ಸಂಖ್ಯೆ ಕಡಿಮೆ ಇತ್ತು. ವಾರಾಂತ್ಯ ಇರುವುದರಿಂದ ಜನರ ಸಂಖ್ಯೆ ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ದೀಪಾವಳಿ ಅಮಾವಾಸ್ಯೆ ಮಹಾಲಕ್ಷ್ಮಿ ಪೂಜೆ ಇರುವುದರಿಂದ ಜನರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು.

ಬೆಳಿಗ್ಗೆ 3 ಗಂಟೆಯಿಂದ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ದರ್ಶನದ ಸಾಲುಗಳಲ್ಲಿ ಜನರಿಲ್ಲದೇ ಖಾಲಿಯಾಗಿರುವುದು ಕಂಡು ಬಂತು. ಶನಿವಾರ ಜನಸಂದಣಿ ಹೆಚ್ಚಾಗಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು. ಒಮ್ಮೆಲೆ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಆಹ್ವಾನಿತರೇ ಬಂದಿದ್ದರಿಂದ ಜನಸಂದಣಿ ಸೃಷ್ಟಿಯಾಗಿತ್ತು. ದರ್ಶನದ ವೇಳೆ ಅಧಿಕಾರಿಗಳ ಜೊತೆಗೂ ಭಕ್ತರು ಜಟಾಪಟಿ ನಡೆಸಿದ್ದರು. 

ADVERTISEMENT

ಭಾನುವಾರ ದೇವಾಲಯಕ್ಕೆ ಬಂದಿದ್ದ ಶಾಸಕ ಸ್ವರೂಪ್ ಪ್ರಕಾಶ್, ಸರದಿ ಸಾಲಿನಲ್ಲಿ ನಿಂತಿದ್ದ ಜನರನ್ನು ಮಾತನಾಡಿಸಿದರು. ಸ್ಥಳದಲ್ಲಿದ್ದ ಸಿಬ್ಬಂದಿಗೆ ಸೂಚನೆ ನೀಡುವ ಮೂಲಕ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಇದು ದಾಖಲೆಯಾಗಿದೆ. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹಿಂದೆಂದೂ ನೋಡದಷ್ಟು ಜನರು ಈ ಬಾರಿ ಹಾಸನಾಂಬೆಯ ದರ್ಶನ ಪಡೆಯುತ್ತಿದ್ದಾರೆ. ₹4.5 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇನ್ನೂ ಎರಡು ದಿನ ದರ್ಶನಕ್ಕೆ ಅವಕಾಶವಿದೆ. ಹೆಚ್ಚಿನ ಸಂಖ್ಯೆಯ ಜನರು ಬರುವ ನಿರೀಕ್ಷೆ ಇದೆ ಎಂದು ಸ್ವರೂಪ್‌ ಪ್ರಕಾಶ್‌ ಹೇಳಿದರು.

ಶನಿವಾರ ಒಂದೇ ದಿನ ಒಂದೂವರೆ ಲಕ್ಷ ಜನರು ಬಂದಿದ್ದರು. ಗಣ್ಯರಿಗೆ ಹೆಚ್ಚಿನ ಸಮಯವನ್ನು ನೀಡದೇ, ಜನರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ಇದರಿಂದ ಜನರು ಸುಗಮವಾಗಿ ದರ್ಶನ ಪಡೆಯಲು ಸಾಧ್ಯವಾಗಲಿದೆ. ಇನ್ನೆರಡು ದಿನಗಳಲ್ಲಿ ಬರುವ ಭಕ್ತರಿಗೆ ಸುಗಮ ದರ್ಶನಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಐಜಿಪಿ ಡಾ.ಬೋರಲಿಂಗಯ್ಯ ಭೇಟಿ

ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಭಾನುವಾರ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ಇಲಾಖೆಯಿಂದ ಕೈಗೊಂಡಿರುವ ಕ್ರಮಗಳು, ಧರ್ಮದರ್ಶನ, ವಿಐಪಿ, ವಿವಿಐಪಿ ಗೇಟ್‌ಗಳಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಇತ್ತೀಚಿಗೆ ವಿದ್ಯುತ್ ಆಘಾತ, ನಂತರ ಉಂಟಾದ ನೂಕುನುಗ್ಗಲು ಹಾಗೂ ಕಾಲ್ಕುಳಿತಕ್ಕೆ ಒಳಗಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂದೆ ಈ ರೀತಿ ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ವಹಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎರಡು ದಿನ ದರ್ಶನ

ಅಶ್ವೀಜ ಮಾಸದ ಹುಣ್ಣೆಮಯ ನಂತರ ಬರುವ ಮೊದಲ ಗುರುವಾರ ತೆರೆಯುವ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲು, ಬಲಿಪಾಡ್ಯದ ಮರುದಿನ ಮುಚ್ಚಲಾಗಿದೆ. ಈ ಬಾರಿ ನವೆಂಬರ್‌ 2ರಂದು ತೆರೆದಿರುವ ಬಾಗಿಲನ್ನು ನ.15 ರಂದು ಮುಚ್ಚಲಾಗುತ್ತದೆ. ನ.15 ರಂದು ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ. ಹೀಗಾಗಿ ಸೋಮವಾರ ಹಾಗೂ ಮಂಗಳವಾರ ಮಾತ್ರ ಜನರು ದೇವಿಯ ದರ್ಶನ ಪಡೆಯಬಹುದಾಗಿದೆ. ನವೆಂಬರ್ 14ರಂದು ತಡರಾತ್ರಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಟಿಕೆಟ್-ಲಾಡು ಮಾರಾಟ

₹5 ಕೋಟಿ ಸಂಗ್ರಹ ಈ ಬಾರಿ ಹಾಸನಾಂಬೆ ದರ್ಶನೋತ್ಸವಕ್ಕೆ ನಿರೀಕ್ಷೆಗೂ ಮೀರಿ ಜನರು ಹರಿದು ಬರುತ್ತಿದ್ದು ನ.12 ಬೆಳಿಗ್ಗೆ 6 ಗಂಟೆಯವರಾ ವಿಶೇಷ ದರ್ಶನದ ಟಿಕೆಟ್‌ ಹಾಗೂ ಲಾಡು ಪ್ರಸಾದ ಮಾರಾಟದಿಂದ ₹ 5.08 ಕೋಟಿ ಆದಾಯ ಸಂಗ್ರಹವಾಗಿದೆ. ₹ 1 ಸಾವಿರ ಬೆಲೆಯ 25954 ಟಿಕೆಟ್ ಇದುವರೆಗೂ ಮಾರಾಟವಾಗಿದ್ದು ₹ 25964000 ಸಂಗ್ರಹಿಸಲಾಗಿದೆ. ₹ 300 ಬೆಲೆಯ 66282 ಟಿಕೆಟ್ ಮಾರಾಟದಿಂದ ₹ 19884600 ಸಂಗ್ರಹವಾಗಿದೆ. ಲಾಡು ಪ್ರಸಾದ ಮಾರಾಟದಿಂದ ₹50.12 ಲಕ್ಷ ಆದಾಯ ಬಂದಿದೆ. ದರ್ಶನೋತ್ಸವ ಇತಿಹಾಸದಲ್ಲಿ ಈ ಬಾರಿ ಟಿಕೆಟ್ ಮಾರಾಟದಿಂದ ದಾಖಲೆ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ.

ಹೆಲಿಟೂರಿಸಂಗೂ ಸ್ಪಂದನೆ

ಇದೇ ಮೊದಲ ಬಾರಿಗೆ ಆಯೋಜಿಸಿದ್ದ ಹೆಲಿಟೂರಿಸಂಗೂ ಜನರಿಂದ ಉತ್ತರ ಪ್ರತಿಕ್ರಿಯೆ ವ್ಯಕ್ತವಾಗಿದೆ. 435 ಜನರು ಹೆಲಿಕಾಪ್ಟರ್ ಮೂಲಕ ಆಗಸದಿಂದ ಹಾಸನವನ್ನು ಕಣ್ತುಂಬಿಕೊಂಡಿದ್ದು ₹18 ಲಕ್ಷಕ್ಕೂ ಅಧಿಕ ಆದಾಯ ಬಂದಿದೆ. ಡೆಕ್ಕನ್‌ ಎವಿಯೇಷನ್‌ ಸಂಸ್ಥೆಯಿಂದ ಹೆಲಿಕಾಪ್ಟರ್‌ ಮೂಲಕ ಆಗಸದಿಂದ ಹಾಸನ ವಿಶೇಷ ಪ್ಯಾಕೇಜ್‌ ಮಾಡಲಾಗಿತ್ತು. ದರ್ಶನೋತ್ಸವದ ಆರಂಭದಿಂದ ಆರು ದಿನ ನಡೆದ ಆಗಸದಿಂದ ಹಾಸನ ಕಾರ್ಯಕ್ರಮಕ್ಕೆ ಒಬ್ಬರಿಗೆ ₹4300 ನಿಗದಿ ಮಾಡಲಾಗಿತ್ತು. ಇನ್ನು ಪ್ರವಾಸಿ ಪ್ಯಾಕೇಜ್‌ಗಳಿಗೆ ಜನರಿಂದ ತಕ್ಕಮಟ್ಟಿನ ಪ್ರಕ್ರಿಯೆ ಸಿಕ್ಕಿದೆ. ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ಸಹಯೋಗದಲ್ಲಿ 5 ಪ್ರವಾಸ ಪ್ಯಾಕೇಜ್‌ಗಳನ್ನು ಮಾಡಲಾಗಿತ್ತು. ಹಲವಾರು ಜನರು ಹಳೇಬೀಡು ಬೇಲೂರು ಶ್ರವಣಬೆಳಗೊಳ ಸಕಲೇಶಪುರ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.

ಹಾಸನಾಂಬೆ ದೇಗುಲಕ್ಕೆ ಭಾನುವಾರ ಭೇಟಿ ನೀಡಿದ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಎಸ್ಪಿ ಮೊಹಮ್ಮದ್ ಸುಜೀತಾ ಅವರಿಂದ ಮಾಹಿತಿ ಪಡೆದರು. ಎಎಸ್ಪಿ ತಮ್ಮಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.