ADVERTISEMENT

ಹಾಸನಾಂಬೆ ದರ್ಶನ ಇಂದಿನಿಂದ

ಅ.24 ರಿಂದ ನ.3ರವರೆಗೆ ಜಾತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 23:24 IST
Last Updated 23 ಅಕ್ಟೋಬರ್ 2024, 23:24 IST
ಹಾಸನಾಂಬ ದೇಗುಲದಲ್ಲಿ ಬುಧವಾರ ಪುಷ್ಪಾಲಂಕಾರ ಮಾಡಲಾಯಿತು.
ಹಾಸನಾಂಬ ದೇಗುಲದಲ್ಲಿ ಬುಧವಾರ ಪುಷ್ಪಾಲಂಕಾರ ಮಾಡಲಾಯಿತು.   

ಹಾಸನ: ವರ್ಷಕ್ಕೊಮ್ಮೆ ಗರ್ಭಗುಡಿ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರೋತ್ಸವ ಗುರುವಾರ (ಅಕ್ಟೋಬರ್ 24) ಆರಂಭವಾಗಲಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯಲಿದ್ದು, 11 ದಿನಗಳಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ವಿವಿಧೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಉಪಸ್ಥಿತಿಯಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ದೇಗುಲದ ಬಾಗಿಲು ತೆರೆದು ದೇವಿಗೆ ಅಲಂಕಾರ ಮಾಡಲಾಗುತ್ತದೆ. ಮೊದಲ ದಿನ ದರ್ಶನಕ್ಕೆ ಅವಕಾಶವಿರುವುದಿಲ್ಲ.

25ರಂದು ಬೆಳಿಗ್ಗೆ 4ರಿಂದ ಸಂಜೆ 7 ಗಂಟೆಯವರೆಗೆ ದರ್ಶನ ಮಾಡಬಹುದು. 26 ರಿಂದ ನವೆಂಬರ್ 1ರವರೆಗೆ ನಿತ್ಯ ಬೆಳಗಿನ ಜಾವ 4ರಿಂದ ಮಧ್ಯಾಹ್ನ 2ಗಂಟೆವರೆಗೆ ಹಾಗೂ ಮಧ್ಯಾಹ್ನ 3ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ದರ್ಶನಕ್ಕೆ ಅವಕಾಶವಿರುತ್ತದೆ. ನವೆಂಬರ್ 2ರಂದು ಬೆಳಗಿನ ಜಾವ 4 ರಿಂದ ಸಂಜೆ 5 ಗಂಟೆ ಹಾಗೂ ರಾತ್ರಿ 8 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ದರ್ಶನ ಮಾಡಬಹುದು. ನವೆಂಬರ್ 3ರಂದು ಬಾಗಿಲು ಮುಚ್ಚಲಿದ್ದು, ಸಾರ್ವಜನಿಕ ದರ್ಶನವಿರುವುದಿಲ್ಲ.

ADVERTISEMENT

ಈ ಬಾರಿ ವಿಶೇಷವಾಗಿ ಲಾಡು ಪ್ರಸಾದ ವಿತರಿಸಲಾಗುತ್ತಿದ್ದು, ಇಸ್ಕಾನ್‌ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿಯೇ ತಯಾರಿಸಲಾಗುತ್ತಿದೆ. ₹1 ಸಾವಿರ ಮೌಲ್ಯದ ವಿಶೇಷ ದರ್ಶನದ ಟಿಕೆಟ್‌ಗೆ ಎರಡು ಹಾಗೂ ₹300 ಮೌಲ್ಯದ ಟಿಕೆಟ್‌ಗೆ ಒಂದು ಲಡ್ಡು ಉಚಿತವಾಗಿ ವಿತರಿಸಲಾಗುವುದು. ಎರಡು ಲಾಡುಗಳ ಪೊಟ್ಟಣವನ್ನು ಭಕ್ತಾದಿಗಳು ₹60 ನೀಡಿ ಖರೀದಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.