ಹಾಸನ: ಎಲ್ಲರ ಕೈಯಲ್ಲೂ ಬಿಳಿ ಹಾಳೆ. ಅದರ ಮೇಲೊಂದು ಒಳ್ಳೆಯ ಚಿತ್ರ ಬಿಡಿಸುವ ಆಲೋಚನೆ. ಬಣ್ಣಗಳಿಗೆ ನೀರು ಹಾಕಿ, ಕುಂಚದಿಂದ ಕೆಲವರು ಚಿತ್ರ ರಚಿಸಿದರೆ, ಇನ್ನೂ ಕೆಲವರು ಕ್ರಿಯಾನ್, ಸ್ಕೆಚ್ ಪೆನ್‌ಗಳನ್ನು ಬಳಸಿ ತಮ್ಮ ಪರಿಕಲ್ಪನೆಗೆ ಚಿತ್ರದ ರೂಪ ಕೊಟ್ಟರು. ವಿಷಯಕ್ಕೆ ಅನುಗುಣವಾಗಿ ಚಿತ್ರಗಳನ್ನು ಬಿಡಿಸುವುದರಲ್ಲಿ ತಲ್ಲೀನರಾಗಿದ್ದರು.
‘ಪ್ರಜಾವಾಣಿ’ ಬಳಗದ ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ ಎಕ್ಸ್‌ಪ್ರೆಷನ್ಸ್ ವತಿಯಿಂದ ವಂಡರ್‌ಲಾ ಹಾಗೂ ಪೂರ್ವಿಕಾ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳ 300ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.
ಮಕ್ಕಳ ಜೊತೆಗೆ ಶಿಕ್ಷಕರು, ಪಾಲಕರೂ ಉತ್ಸಾಹದಿಂದ ಭಾಗವಹಿಸಿದ್ದರು. ಸುಮಾರು ಎರಡು ಗಂಟೆಯಲ್ಲಿ ಅದ್ಭುತ ಚಿತ್ರಗಳನ್ನು ಅನಾವರಣ ಮಾಡಿದರು. ವಿಷಯಗಳು ಒಂದೇ ಆಗಿದ್ದರೂ, ಪ್ರತಿಯೊಂದು ಚಿತ್ರಗಳು ವಿಭಿನ್ನ ಪರಿಕಲ್ಪನೆಯಲ್ಲಿ ಮೂಡಿ ಬಂದಿದ್ದು ವಿಶೇಷವಾಗಿತ್ತು.
3 ರಿಂದ 7 ನೇ ತರಗತಿಯವರೆಗಿನ ಜ್ಯೂನಿಯರ್ ವಿಭಾಗದಲ್ಲಿ ಭಾರತದ ಹಬ್ಬಗಳು, ಭಾರತದ ಧಾರ್ಮಿಕ ಪ್ರದೇಶಗಳು, ಕುಟುಂಬದೊಂದಿಗೆ ಪಿಕ್‌ನಿಕ್ ಎಂಬ ವಿಷಯಗಳನ್ನು ನೀಡಲಾಗಿತ್ತು.
8 ರಿಂದ 10 ನೇ ತರಗತಿಯ ಸಿನಿಯರ್ ವಿಭಾಗದ ವಿದ್ಯಾರ್ಥಿಗಳಿಗೆ ಅಪಾಯದಲ್ಲಿ ಪ್ರಾಣಿಗಳು, ಆತಂಕದಲ್ಲಿ ಆನೆ, ಸಂರಕ್ಷಣೆಯ ಪ್ರಭಾವ ಎಂಬ ವಿಷಯಗಳನ್ನು ಕೊಡಲಾಗಿತ್ತು.
ಕಾರ್ಯಕ್ರಮವನ್ನು ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿದ ಚಿತ್ರ ಕಲಾವಿದ ಬಿ.ಎಸ್. ದೇಸಾಯಿ, ಚಿತ್ರಕಲೆ ಮಗುವಿನ ಮೊದಲ ಭಾಷೆ. ಅಪ್ಪ, ಅಮ್ಮ ಸೇರಿದಂತೆ ಸುತ್ತಲಿನ ಪರಿಸರ, ಸಂಬಂಧಗಳನ್ನು ಗ್ರಹಿಸುವುದು ಚಿತ್ರಕಲೆಯಿಂದಲೆ. ಚಿತ್ರಕಲೆ ವಿಶ್ವಭಾಷೆ. ಭಾಷೆಗೆ ಇತಿಮಿತಿ ಇದೆ. ಆದರೆ ಚಿತ್ರಕ್ಕೆ ಆ ಗೊಡವೆ ಇಲ್ಲ ಎಂದು ಹೇಳಿದರು.
ಮಗುವಿನ ಭಾವನಾ ಪ್ರಪಂಚ ವಿಸ್ತರಿಸುವ ಮಾಧ್ಯಮ ಚಿತ್ರಕಲೆ. ಮಕ್ಕಳನ್ನು ಮಕ್ಕಳ ಹಾಗೆ ನೋಡುವುದೇ ಸೊಗಸು. ಪ್ರಕೃತಿಯ ಮಧ್ಯದಲ್ಲಿ ಜೀವನ ಸಾಗಿಸುವುದು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು ಎಂದರು.
ಭಾವನಾ ಪ್ರಪಂಚದಲ್ಲಿ ಚಿತ್ರಕಲೆಗೆ ಮಹತ್ವದ ಸ್ಥಾನವಿದೆ. ಮಗುವಿನ ಆಂತರಿಕ ಶಕ್ತಿ ವಿಕಸನಕ್ಕೆ ಚಿತ್ರಕಲೆ ಸಹಕಾರಿ. ಪ್ರಕೃತಿ, ಮಕ್ಕಳ ಶಕ್ತಿ ಹಾಗೂ ಚಿತ್ರಕಲೆಯನ್ನು ಒಟ್ಟಿಗೆ ನೋಡುವುದೇ ಅದ್ಭುತ ಎಂದು ಅಭಿಪ್ರಾಯಪಟ್ಟರು.
ಬದಲಾಗುತ್ತಿರುವ ಪ್ರಪಂಚದಲ್ಲಿ ಮಿದುಳಿಗೆ ಮಾತ್ರ ಕೆಲಸ ಕೊಡುತ್ತಿದ್ದೇವೆ. ಆದರೆ ಉಳಿದ ಅಂಗಾಂಗಗಳಿಗೂ ಅಷ್ಟೇ ಅವಕಾಶ ಕೊಡಬೇಕು. ಚಿತ್ರದಲ್ಲಿ ವಿಹಾರ ಮಾಡಬೇಕು. ಮಕ್ಕಳಿಗೆ ಹೆಚ್ಚು ಚಿತ್ರಕಲೆಯನ್ನು ಅಭ್ಯಾಸ ಮಾಡಿಸಬೇಕು. ಮಕ್ಕಳಿಗೆ ಸಾಮಗ್ರಿಗಳನ್ನು ಕೊಟ್ಟು, ಮುಕ್ತ ಅವಕಾಶ ನೀಡಿದರೆ, ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆ ಆಗಲಿದೆ ಎಂದು ಸಲಹೆ ನೀಡಿದರು.
ನಿರ್ಮಲಾ ಫೈನ್ ಆರ್ಟ್ ಕಾಲೇಜಿನ ಪ್ರಾಂಶುಪಾಲ ನಾಗೇಶ್ ನವಿಲೆ ಮಾತನಾಡಿ, ಒಂದು ಚಿತ್ರವು ಚಿತ್ರವಾಗಿ ಕಾಣಲು ಅದರಲ್ಲಿ ಭಾವನೆಗಳು ಇರಬೇಕು. ವಿಷಯಗಳ ಗ್ರಹಿಕೆ ಮಾಡಿದಷ್ಟು ಕಲೆಯಲ್ಲಿ ಪ್ರಬುದ್ಧತೆ ಬರುತ್ತದೆ. ಚಿತ್ರಕಲೆಯು ಭಾವನೆಗಳನ್ನು ಪ್ರವಹಿಸುವ ಮಾಧ್ಯಮವಾಗಿದೆ ಎಂದರು.
ಪ್ರಕೃತಿಯನ್ನು ಆಸ್ವಾದಿಸುವ ಮೂಲಕ ಕಲೆಯನ್ನು ಅಳವಡಿಸಿಕೊಳ್ಳಲು ಸಾಧ್ಯ. ಕಲೆ ಮತ್ತು ಮನುಷ್ಯ ಒಂದೇ ನಾಣ್ಯದ ಎರಡು ಮುಖಗಳು. ಇಂದಿನ ಜಗತ್ತಿನಲ್ಲಿ ನಾವೀನ್ಯತೆ ಬೇಕಾಗಿದೆ. ಹೊಸದನ್ನು ಕಲಿಯುವ, ಹೊಸದನ್ನು ಸೃಷ್ಟಿಸುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಚಿತ್ರಕಲೆ ಅತಿದೊಡ್ಡ ಮಾಧ್ಯಮವಾಗಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ನಾಗೇಶ್ ನವಿಲೆ ಹಾಗೂ ಚಿತ್ರಕಲಾ ಶಿಕ್ಷಕ ಗುರುದೇವ್ ಅವರು, ವಿಜೇತರಿಗೆ ಬಹುಮಾನ ವಿತರಿಸಿದರು. ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್‌ನ ಎಜಿಎಂ ಎಂ.ವಿ. ಸುರೇಶ್ ವೇದಿಕೆಯಲ್ಲಿದ್ದರು.
ಮಕ್ಕಳಿಗೆ ಒಳ್ಳೆಯ ವೇದಿಕೆ ಸಿಕ್ಕಂತಾಯಿತು. ಶಾಲಾ ಪಠ್ಯದ ಜೊತೆಗೆ ಆಗಾಗ ಇಂತಹ ಸ್ಪರ್ಧೆ ನಡೆದರೆ ಮಕ್ಕಳ ಸೃಜನಶೀಲತೆ ಇನ್ನಷ್ಟು ಹೆಚ್ಚಾಗುತ್ತದೆರೇಷ್ಮಾ ಸಫೀರ್ ಯುನೈಟೆಡ್ ಹೈಸ್ಕೂಲ್ ಶಿಕ್ಷಕಿ
ಹಾಸನದ ಮಕ್ಕಳಿಗೆ ಡೆಕ್ಕನ್ ಹೆರಾಲ್ಡ್ ವತಿಯಿಂದ ಇಂಥದ್ದೊಂದು ಅವಕಾಶ ಕಲ್ಪಿಸಿದ್ದು ಅರ್ಥಪೂರ್ಣ. ಸುದ್ದಿಗಳ ಜೊತೆಗೆ ಮಕ್ಕಳ ವಿಕಸನಕ್ಕೂ ಪತ್ರಿಕೆ ಕೆಲಸ ಮಾಡುತ್ತಿದೆ.ಜಯಶ್ರೀ ಮಿಲೇನಿಯಂ ವರ್ಲ್ಡ್ ಶಾಲೆ ಶಿಕ್ಷಕಿ
ಈ ರೀತಿ ಕಾರ್ಯಕ್ರಮ ಆಗಬೇಕು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿರುವುದು ಸಂತಸ ತಂದಿದೆ. ಮಕ್ಕಳೂ ಉತ್ಸಾಹದಿಂದ ಪಾಲ್ಗೊಂಡಿದ್ದರು.ವಕುಮಾರ್ ವಿದ್ಯಾಸೌಧ ಪಬ್ಲಿಕ್ ಶಾಲೆ ಶಿಕ್ಷಕ
ಎಲ್ಲವೂ ಚೆನ್ನಾಗಿತ್ತು. ಸಾಕಷ್ಟು ಸಮಯ ಕೊಟ್ಟಿದ್ದರು. ನಾನು ಫ್ಯಾಮಿಲಿ ಟ್ರಿಪ್ ಚಿತ್ರ ಬಿಡಿಸಿದೆ. ವಿಷಯಗಳೂ ಚೆನ್ನಾಗಿದ್ದವು. ಒಟ್ಟಿನಲ್ಲಿ ಮನಸ್ಸಿಗೆ ಮುದ ನೀಡಿತು.ಮಾನ್ವಿತಾ ಮಿಲೇನಿಯಂ ವರ್ಲ್ಡ್ ಶಾಲೆ ವಿದ್ಯಾರ್ಥಿನಿ
ವಿಷಯಗಳು ಚೆನ್ನಾಗಿದ್ದವು. ಹಿರಿಯರು ಕಿರಿಯರ ವಿಭಾಗಕ್ಕೆ ಅನುಗುಣವಾಗಿ ವಿಷಯ ನೀಡಲಾಗಿತ್ತು. ಚಿತ್ರ ಬಿಡಿಸುವುದು ಒಂದು ರೀತಿ ಖುಷಿಯ ಸಂಗತಿಹೇಮಂತ್ ಕ್ರೈಸ್ಟ್ ಸ್ಕೂಲ್ ವಿದ್ಯಾರ್ಥಿ
ಬಹುಮಾನಕ್ಕಿಂತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಡೆಕ್ಕನ್ ಹೆರಾಲ್ಡ್‌ನಿಂದ ಈ ರೀತಿಯ ಸ್ಪರ್ಧೆ ನಡೆಯುತ್ತಿರುವುದು ಸಂತಸ ಮೂಡಿಸಿದೆ.ಅಸ್ಫಿಯಾ ತಬಸ್ಸುಮ್ ಬೇಗ ಹೋಲಿ ಮೌಂಟ್ ಶಾಲೆ ವಿದ್ಯಾರ್ಥಿನಿ
ವಿಜೇತರ ವಿವರ
ಹಿರಿಯರ ವಿಭಾಗ ಪ್ರಥಮ; ನೂತನ ಎಚ್.ಸಿ. ಯುನೈಟೆಡ್ ಅಕಾಡೆಮಿ ಹಾಸನ ದ್ವಿತೀಯ; ದಿಕ್ಷಿತಾ ವೈ.ಎಂ.; ಜ್ಞಾನಸಾಗರ ಪಬ್ಲಿಕ್ ಸ್ಕೂಲ್ ಚನ್ನರಾಯಪಟ್ಟಣ ತೃತೀಯ; ರಾಶಿ ಎಲ್. ಅರೇಕಲ್: ಪಾಂಡಿತ್ಯ ಯುರೋ ಸ್ಕೂಲ್ ಹಾಸನ ಸಮಾಧಾನಕರ ಬಹುಮಾನ: ದೀಕ್ಷಾ ಎಸ್.ಎ. ತರುಣ್ ಎಸ್. ರೂಪನ್‌ಡೇ ಯಶಸ್ ಎಂ. ಎ.ಹೇಮಂತ್ ಗೌಡ. ಕಿರಿಯರ ವಿಭಾಗ ಪ್ರಥಮ; ಧನಿಕಾ ಅಶೋಕ್ ರಾಯಲ್ ಅಪೋಲೊ ಶಾಲೆ ಹಾಸನ ದ್ವಿತೀಯ; ಯಶ್ವಿನ್ ಎಸ್. ಪೊದ್ದಾರ್ ಸ್ಕೂಲ್ ಹಾಸನ ತೃತೀಯ; ಆರ್ಯನ್ ಗೌಡ ಸಿ.ಡಿ. ಜ್ಞಾನಸಾಗರ ಸ್ಕೂಲ್ ಚನ್ನರಾಯಪಟ್ಟಣ ಸಮಾಧಾನಕರ ಬಹುಮಾನ; ಡಿಂಪಲ್ ವಿ. ಹರ್ಷಿತ ಗೌಡ ಲಿಮಾ ಗೌಡ ವೈಷ್ಣವಿ ಎಚ್.ಎಸ್. ಧನ್ಯಶ್ರೀ ಎಂ. ಗೌಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.