ಆಲೂರು: ನ್ಯಾಯಬೆಲೆ ಅಂಗಡಿಗಳ ಪಡಿತರ ವಿತರಣೆಯಲ್ಲಿ ತೂಕದ ವ್ಯತ್ಯಾಸ, ಆಹಾರ ಧಾನ್ಯ ಪರಿಶೀಲನೆ ಮಾಡುವಂತೆ ಗ್ಯಾರಂಟಿ ಯೋಜೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪೃಥ್ವಿಜಯರಾಂ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕೆಲವು ಸಾರಿಗೆ ಬಸ್ಸುಗಳು ಪಟ್ಟಣದೊಳಗೆ ಸಂಚರಿಸದೆ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದರೂ, ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ಅಧಿಕಾರಿಗಳು ಕೂಡಲೇ ಅಂತಹ ಚಾಲಕ, ನಿರ್ವಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಶ್ರೀನಿವಾಸ್ ಅವರು ಮಾತನಾಡಿ, ‘ಸರ್ಕಾರದ ಐದು ಗ್ಯಾರಂಟಿಗಳೂ ಪ್ರತಿಯೊಬ್ಬ ನಾಗರೀಕರಿಗೆ ಸಿಗುವಂತಾಗಬೇಕು. ಯೋಜನೆಗಳ ಬಗ್ಗೆ ಈಗಾಗಲೆ ಅರಿವು ಕಾರ್ಯಕ್ರಮ ಮಾಡಲಾಗಿದೆ’ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಟಿ.ಮಲ್ಲೇಶ್ ಮಾತನಾಡಿ, ‘ಗೃಹಲಕ್ಷ್ಮಿಯೋಜನೆಯಡಿ ತಾಲ್ಲೂಕಿನಲ್ಲಿ 22730 ಅರ್ಹ ಫಲಾನುಭವಿಗಳಿದ್ದು, 21273 ನೋಂದಣಿಯಾಗಿದ್ದಾರೆ. 415 ಫಲಾನುಭವಿಗಳ ರೇಷನ್ ಕಾರ್ಡು ತಿದ್ದುಪಡಿಯಾಗಬೇಕು. 65 ಐಟಿ ಪಾವತಿದಾರರಿದ್ದಾರೆ. 332 ಮರಣ ಹೊಂದಿರುವ ಫಲಾನುಭವಿಗಳಿದ್ದಾರೆ. 314 ಆಧಾರ್ ತಾಂತ್ರಿಕ ಸಮಸ್ಯೆಯಿಂದ ಯೋಜನೆಯಿಂದ ಹೊರಗುಳಿದಿದ್ದಾರೆ. ಶೀಘ್ರದಲ್ಲಿ ತಾಂತ್ರಿಕ ಸಮಸ್ಯೆ ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಸೆಸ್ಕ್ ಎಇಇ ರಾಘವೇಂದ್ರ ಅವರು, ‘ಗೃಹಜ್ಯೋತಿಯಲ್ಲಿ 23296 ನೋಂದಣಿಯಾಗಿದೆ. 23217 ಗ್ರಾಹಕರು ಯೋಜನೆ ಲಾಭ ಪಡೆಯುತ್ತಿದ್ದಾರೆ. 21 ಗ್ರಾಹಕರು ತಾಂತ್ರಿಕ ಕಾರಣದಿಂದ ಹೊರಗುಳಿದಿದ್ದಾರೆ. ಒಟ್ಟಾರೆ ಶೇ 99.91 ಯೋಜನೆ ಪ್ರಗತಿಯಲ್ಲಿದೆ’ ಎಂದರು.
ಆಹಾರ ನಿರೀಕ್ಷಕ ಮೋಹನ್,‘ಅನ್ನಭಾಗ್ಯ ಯೋಜನೆಯಡಿ 23169 ಪಡಿತರ ಚೀಟಿದಾರರಿದ್ದು, ಡಿಪಿಟಿ ಮುಖಾಂತರ 22606 ಕುಟುಂಬಗಳು ಯೋಜನೆ ಲಾಭ ಪಡೆಯುತ್ತಿದ್ದಾರೆ. 208 ಪಡಿತರ ಚೀಟಿದಾರರಿಗೆ ತಾಂತ್ರಿಕ ಕಾರಣದಿಂದ ಯೋಜನೆ ಹಣ ಪಾವತಿಯಾಗಿರುವುದಿಲ್ಲ’ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೌಶಲ ಆಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿಜಯಾ ಮಾತನಾಡಿ,‘ತಾಲ್ಲೂಕಿನಲ್ಲಿ 1199 ಫಲಾನುಭವಿಗಳು ಯುವನಿಧಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. 41 ಪುರುಷರು, 61 ಮಹಿಳಾ ಫಲಾನುಭವಿಗಳು ಯೋಜನೆ ಲಾಭ ಪಡೆಯುತ್ತಿದ್ದಾರೆ’ ಎಂದರು.
ಶಕ್ತಿ ಯೋಜನೆಯಡಿ ಎಲ್ಲ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಶಿವೇಗೌಡ, ಬಿ. ಈ. ಯೋಗೇಶ್, ಶ್ರೀಧರ್, ರುದ್ರಕುಮಾರ್, ರಂಗನಾಥ್, ದರ್ಶನ್, ಭುನೇಶ್, ಯಾಕುಬ್, ಮಧು, ತಾ. ಪಂ. ಸಿಬ್ಬಂದಿ ಅಶೋಕ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.