ಸಕಲೇಶಪುರ: ‘ಅರ್ಜುನ ಆನೆ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಹೆಸರಿನಲ್ಲಿ ಕಾನೂನು ಬಾಹಿರವಾಗಿ ವ್ಯಕ್ತಿಯೊಬ್ಬ ಹಣ ವಸೂಲಿ ಮಾಡುತ್ತಿದ್ದು, ಆತನ ವಿರುದ್ಧ ಅರಣ್ಯ ಹಾಗೂ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ನವೀನ್ ಎಂಬ ವ್ಯಕ್ತಿ ವಾಟ್ಸಾಪ್ ಗ್ರೂಪ್ ಹಾಗೂ ನವೀನ್ ಬೆಳ್ಳಿ ಎಂಬ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿ ಎಂದು ಕೇಳಿಕೊಂಡಿದ್ದಾರೆ. ಇವನ ಖಾತೆಗೆ ಹಲವರು ಹಣ ವರ್ಗಾವಣೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಯಸಳೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಕಾಯ್ದಿರಿಸಿದ ಅರಣ್ಯದೊಳಗೆ ಖಾಸಗಿ ವ್ಯಕ್ತಿಯೊಬ್ಬ ಪ್ರವೇಶ ಮಾಡುವುದೇ ಕಾನೂನು ಬಾಹಿರ. ಸ್ಮಾರಕ ನಿರ್ಮಾಣ ಮಾಡಲು ಇವನಿಗೆ ಸರ್ಕಾರ ಅನುಮತಿ ನೀಡಿಲ್ಲ. ಅರಣ್ಯ ಕಾಯಿದೆ ಪ್ರಕಾರ ಅನುಮತಿ ನೀಡಲು ಅವಕಾಶವೇ ಇಲ್ಲ. ಈ ನಾಡಿನ ಗೌರವದ ಸಂಕೇತವಾಗಿದ್ದ ಅರ್ಜುನನ ಹೆಸರಿನಲ್ಲಿ ಸುಳ್ಳು ಹೇಳಿಕೊಂಡು ಹಣ ವಸೂಲಿಗೆ ಇಳಿದಿರುವವನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಬೇಕು’ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.