ಆಲೂರು: ರಸ್ತೆ ಬದಿಯಲ್ಲಿರುವ ಕೆಲವು ಮರಗಳು ಹಳೆಯದಾಗಿದ್ದು, ಯಾವ ಸಮಯದಲ್ಲಿ ಮುರಿದು ಬೀಳುತ್ತವೆ ಎಂಬ ಆತಂಕದಲ್ಲಿಯೇ ಚಾಲಕರು ವಾಹನಗಳನ್ನು ಓಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಹಳೆ ಮರಗಳನ್ನು ತೆಗೆದು, ಹೊಸ ಗಿಡಗಳನ್ನು ನೆಡಬೇಕೆಂದು ಒತ್ತಾಯಿಸಿದ್ದಾರೆ.
ಪುರಾತನ ಕಾಲದಲ್ಲಿ ಭೂಮಿಯಲ್ಲಿ ಆಳದಲ್ಲಿ ಬೇರೂರುವಂತಿದ್ದ ಅತ್ತಿ, ಆಲ, ನೇರಳೆ, ಮಾವಿನಂತಹ ಬಹು ವಾರ್ಷಿಕ ಹಾಗೂ ಗಾಳಿ, ಮಳೆಗೆ ಹೆದರದ ಮರಗಳನ್ನು ರಸ್ತೆ ಬದಿಯಲ್ಲಿ ಬೆಳೆಸುತ್ತಿದ್ದರು. ಈ ಮರಗಳು ಜನಸಾಮಾನ್ಯರಿಗೆ ನೆರಳು ನೀಡುತ್ತಿದ್ದವಲ್ಲದೇ ಹಣ್ಣುಗಳನ್ನು ಆಹಾರವಾಗಿ ಬಳಸುತ್ತಿದ್ದರು. ತೀವ್ರ ಹಳೆಯದಾದ ಮರಗಳು ಮಾತ್ರ ಅತಿಯಾದ ಗಾಳಿಗೆ ಸಿಲುಕಿ ನೆಲಕ್ಕುರುಳುತ್ತಿದ್ದವು.
ಜನಸಂಖ್ಯೆ ಬೆಳೆಯುತ್ತಾ ಹೋದಂತೆ ವಾಹನಗಳ ಓಡಾಟ ಸಂಖ್ಯೆ ಜಾಸ್ತಿಯಾಯಿತು. ರಸ್ತೆಗಳನ್ನು ವಿಸ್ತಾರ ಮಾಡುವ ಸಂದರ್ಭದಲ್ಲಿ ಬದಿಯಲ್ಲಿದ್ದ ಭಾರಿ ಗಾತ್ರದ ಮರಗಳನ್ನು ತೆರವುಗೊಳಿಸಲಾಯಿತು. ಈ ಸಂದರ್ಭದಲ್ಲಿ ಹಳೆ ಕಾಲದ ಜಾತಿ ಮರಗಳನ್ನು ನೆಟ್ಟಿದ್ದರೆ, ಇಂದು ಗಟ್ಟಿಯಾದ ಮರಗಳು ರಸ್ತೆಯಂಚಿನಲ್ಲಿ ಇರುತ್ತಿದ್ದವು. ಭೂಮಿಯಲ್ಲಿ ಆಳವಾಗಿ ಬೇರು ಹೋಗದಂತಹ ಕೆಲ ಹೊಸ ಜಾತಿ ಮರಗಳನ್ನು ರಸ್ತೆ ಬದಿ ನೆಟ್ಟಿರುವ ಪರಿಣಾಮ, ಬೇಸಿಗೆ ಕಾಲದಲ್ಲಿಯೂ ಸ್ವಲ್ಪ ಗಾಳಿಗೆ ಮರಗಳು ಧರೆಗುರುಳುತ್ತಿವೆ ಎಂದು ಜನರು ಹೇಳುತ್ತಿದ್ದಾರೆ.
ಎರಡು ದಿನಗಳ ಹಿಂದೆ ಮಗ್ಗೆ ರಸ್ತೆಯಲ್ಲಿ ಹೊಂಕರವಳ್ಳಿ ಸಮೀಪ ಕಾರೊಂದು ರಸ್ತೆಯಲ್ಲಿ ಚಲಿಸುತ್ತಿದ್ದಾಗ ಆಕಸ್ಮಿಕವಾಗಿ ಬೃಹದಾಕಾರದ ಹಳೆ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ, ಕಾರು ಜಖಂ ಆಗಿದೆ. ಚಾಲಕನಿಗೆ ಗಾಯಗಳಾಗಿ ಆಸ್ಪತ್ರೆ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ, ಗಾಳಿ ಬೀಸುವ ಸಂದರ್ಭದಲ್ಲಿ, ಇಂತಹ ಪರಿಸ್ಥಿತಿ ನಿರ್ಮಾಣವಾದರೆ ಜನಸಾಮಾನ್ಯರು ಮತ್ತು ವಾಹನಗಳು ಭಯದಿಂದ ಓಡಾಡಬೇಕಾಬೇಕಾಗುತ್ತದೆ ಎನ್ನುತ್ತಾರೆ ಜನರು.
ಅರಣ್ಯ ಇಲಾಖೆ ಎಚ್ಚೆತ್ತುಕೊಂದು ರಸ್ತೆ ಬದಿಯಲ್ಲಿರುವ ಹಳೆ ಮರಗಳನ್ನು ತೆರವುಗೊಳಿಸಿ, ಮುಂಬರುವ ಮಳೆಗಾಲದಲ್ಲಿ ಪುರಾತನ ಕಾಲದ ಮರಗಳನ್ನು ಬೆಳೆಸಲು ಮುಂದಾಗಬೇಕು. ಇಂತಹ ಮರಗಳನ್ನು ಬೆಳೆಸಿದರೆ ಮಾನವ, ಪ್ರಾಣಿ ಮತ್ತು ಪಕ್ಷಿಗಳಿಗೂ ನೆರವಾಗಲಿದೆ ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಮಗ್ಗೆ ಮತ್ತು ಬಿಕ್ಕೋಡು ಹೆದ್ದಾರಿ ಮಾರ್ಗದಲ್ಲಿ ಕೆಲವು ಮರಗಳು ಒಣಗಿ ಟೊಳ್ಳು ಬಿದ್ದಿವೆ. ವಾಹನ ಚಲಿಸುವಾಗ ಮುರಿದು ಬಿದ್ದು ಈವರೆಗೆ 3–4 ಸಾವು ಸಂಭವಿಸಿವೆ. ಅರಣ್ಯ ಇಲಾಖೆ ಕೂಡಲೇ ತೆರವು ಗೊಳಿಸಬೇಕು-ಚಂದ್ರಶೇಖರ್ ಗ್ರಾ.ಪಂ. ಸದಸ್ಯ
ಹಳೆ ಮರಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಗಮನಕ್ಕೆ ಬಂದರೆ ಅರಣ್ಯ ಇಲಾಖೆಗೆ ತಿಳಿಸಿದಲ್ಲಿ ತಕ್ಷಣ ಅನುಮತಿ ಪಡೆದು ತೆರವುಗೊಳಿಸಲಾಗುವುದು-ಯತೀಶ್ ವಲಯ ಅರಣ್ಯಾಧಿಕಾರಿ ಆಲೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.