ADVERTISEMENT

ಹಾಸನ: ಪಶ್ಚಿಮ ಘಟ್ಟದಲ್ಲಿ ಗ್ರಾನೈಟ್ ಗಣಿಗಾರಿಕೆ ಸ್ಥಗಿತಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 13:17 IST
Last Updated 29 ಜನವರಿ 2024, 13:17 IST
<div class="paragraphs"><p> ಗಣಿಗಾರಿಕೆ</p></div>

ಗಣಿಗಾರಿಕೆ

   

ಹಾಸನ: ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದ ಆರಾಧನಾ ಎಸ್ಟೇಟ್‌ನಲ್ಲಿ ಗ್ರಾನೈಟ್ ಗಣಿಗಾರಿಕೆ ನಿಷೇಧಿಸುವಂತೆ ಹೇಮಾವತಿ ಸೇನೆಯ ಎಚ್.ಕೆ. ರಮೇಶ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದೇ ಸ್ಥಳದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿತ್ತು. ಪಶ್ಚಿಮ ಘಟ್ಟಗಳ ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧ ಇರುವ ಕಾರಣ ಸ್ಥಗಿತಕ್ಕೆ ಆದೇಶ ಮಾಡಲಾಗಿತ್ತು. ಆದರೆ ಮತ್ತೊಮ್ಮೆ ಗಣಿಗಾರಿಕೆ ಆರಂಭಿಸಿರುವುದು ಗಮನಕ್ಕೆ ಬಂದಿದೆ ಎಂದರು.

ADVERTISEMENT

ಈ ವಿಚಾರವಾಗಿ ಸ್ಥಳೀಯ ಶಾಸಕರಿಗೂ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿಗೆ ತಿಳಿಸಿದಾಗ ದೂರು ನೀಡುವಂತೆ ಹೇಳಿದ್ದಾರೆ. ಗಣಿಗಾರಿಕೆ ನಡೆಸಲು ಅಗತ್ಯ ಅನುಮತಿ ಕುರಿತಂತೆ ಸ್ಥಳೀಯ ಗ್ರಾಮ ಲೆಕ್ಕಿಗರು ಹಾಗೂ ಶಿರಸ್ತೇದಾರರಿಗೂ ಮಾಹಿತಿ ಇಲ್ಲ ಎಂದು ಹೇಳಿದರು.

ಇಲ್ಲಿ ಮತ್ತೊಮ್ಮೆ ಗ್ರಾನೈಟ್ ಗಣಿಗಾರಿಕೆ ಆರಂಭಿಸಿದರೆ ಅಂತರ್ಜಲ ಕುಸಿಯಲಿದ್ದು, ಬೆಟ್ಟ– ಗುಡ್ಡಗಳು, ಮರ– ಗಿಡಗಳಿಗೆ ಹಾನಿ ಆಗಲಿದೆ. ಬೆಟ್ಟಗುಡ್ಡದಲ್ಲಿ ಮಳೆಗಾಲದಲ್ಲಿ ಯಥೇಚ್ಛವಾಗಿ ನೀರು ಸಂಗ್ರಹವಾಗುತ್ತಿದ್ದು, ನದಿ ಮೂಲಗಳಿಗೆ ಅಂತರ್ಜಲ ವೃದ್ಧಿ ಆಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ಆರಂಭಿಸಿದರೆ ಪರಿಸರಕ್ಕೆ ಧಕ್ಕೆಯಾಗಲಿದೆ. ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ ಎಂದರು.

ಗಣಿಗಾರಿಕೆ ಮುಂದುವರಿದರೆ ವನ್ಯಜೀವಿಗಳ ಆವಾಸಸ್ಥಾನಕ್ಕೂ ಧಕ್ಕೆಯಾಗಲಿದೆ. ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ಹೋರಾಟದ ಮೂಲಕ ಗಣಿಗಾರಿಕೆ ಸ್ಥಗಿತಕ್ಕೆ ಮುಂದಾಗುವುದಾಗಿ ರಮೇಶ್ ತಿಳಿಸಿದರು. ರವಿ ಚಂಗಪ್ಪ, ಪುಟ್ಟಸ್ವಾಮಿಗೌಡ, ಎಚ್.ಕೆ. ಗಣೇಶ್, ಟಿ.ಎನ್. ಹರೀಶ್, ಶಶಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.