ADVERTISEMENT

ಹಾಸನ | ಡೆಂಗಿ 205 ಪ್ರಕರಣ: 4 ಶಂಕಿತ ಸಾವು

ಡೆಂಗಿ ಪ್ರಕರಣ ಉಲ್ಬಣ: ಆಸ್ಪತ್ರೆಗೆ ದಾಖಲಾಗುತ್ತಿರುವವ ಸಂಖ್ಯೆ ಹೆಚ್ಚಳ

ಚಿದಂಬರಪ್ರಸಾದ್
Published 3 ಜುಲೈ 2024, 6:13 IST
Last Updated 3 ಜುಲೈ 2024, 6:13 IST
ಸೊಳ್ಳೆಗಳ ನಿಯಂತ್ರಣಕ್ಕಾಗಿ ಹಾಸನದಲ್ಲಿ ಫಾಗಿಂಗ್‌ ಮಾಡುತ್ತಿರುವುದು.
ಸೊಳ್ಳೆಗಳ ನಿಯಂತ್ರಣಕ್ಕಾಗಿ ಹಾಸನದಲ್ಲಿ ಫಾಗಿಂಗ್‌ ಮಾಡುತ್ತಿರುವುದು.   

ಹಾಸನ: ಜಿಲ್ಲೆಯಾದ್ಯಂತ ಮಳೆ ಆರಂಭವಾಗುತ್ತಿದ್ದಂತೆಯೇ ಡೆಂಗಿ ಪ್ರಕರಣಗಳು ಉಲ್ಬಣವಾಗುತ್ತಿದ್ದು, ಪ್ಲೆಟ್‌ಲೆಟ್‌ಗಳ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಎದುರಾಗುತ್ತಿದೆ.

ಚಿಕಿತ್ಸೆಗಾಗಿ ದಿನಕ್ಕೆ ನೂರಾರು ಮಂದಿ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದು, ಆಸ್ಪತ್ರೆ ತುಂಬಿ ತುಳುಕುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ 205 ಡೆಂಗಿ ಪ್ರಕರಣ ಪತ್ತೆಯಾಗಿದ್ದು, ನಾಲ್ವರು ಶಂಕಿತ ಡೆಂಗಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಜನರು ತಾಲ್ಲೂಕು ಆಸ್ಪತ್ರೆಗಳಿಗೆ ತೆರಳದೇ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗಿ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ADVERTISEMENT

ಜೂನ್ 13 ರವರೆಗೂ ಜಿಲ್ಲೆಯಲ್ಲಿ 171 ಡೆಂಗಿ ಪ್ರಕರಣ ಪತ್ತೆಯಾಗಿದ್ದು, 27 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿದ್ದವು. ಜೂನ್‌ 13 ರಿಂದ ಜುಲೈ 1 ರವರೆಗೆ ಮತ್ತೆ 34 ಡೆಂಗಿ ಪ್ರಕರಣಗಳು ಪತ್ತೆಯಾಗಿವೆ.

ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯದೇ ನೇರವಾಗಿ ಜಿಲ್ಲಾ ಆಸ್ಪತ್ರೆಗಳಿಗೆ ರೋಗಿಗಳು ಬರುತ್ತಿರುವುದರಿಂದ ಹಾಸಿಗೆಯ ಕೊರತೆ ಕಾಣುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜನರು ಸೊಳ್ಳೆ ಉತ್ಪತ್ತಿ ನಿಯಂತ್ರಣ ಹಾಗೂ ಇದರಿಂದ ರಕ್ಷಣೆ ಹೊಂದುವ ಸಂಬಂಧ ಅಗತ್ಯ ಜಾಗೃತಿ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಾರೆ.

ನಾಗರಿಕರು ತಮ್ಮ ಮನೆಯ ಆವರಣದಲ್ಲಿನ ಚರಂಡಿ, ನೀರಿನ ತೊಟ್ಟಿ ಹಾಗೂ ಇತರೆ ನೀರು ಸಂಗ್ರಹ ವಸ್ತು ಮತ್ತು ಪ್ರದೇಶವನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು ಯಾವುದೇ ಕಾರಣಕ್ಕೂ ಹೆಚ್ಚು ದಿನ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಸ್ವಾಮಿ ತಿಳಿಸಿದ್ದಾರೆ.

ಲೋಕೋಪಯೋಗಿ, ಶಿಕ್ಷಣ ಇಲಾಖೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಎಲ್ಲ ಸ್ಥಳೀಯ ಆಡಳಿತಗಳು ಒಗ್ಗೂಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಚಾರ ಕಾರ್ಯಕ್ರಮವನ್ನು ಗ್ರಾಮ ಮಟ್ಟದಲ್ಲಿ ಹಾಗೂ ಪಟ್ಟಣ, ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಚಿಕ್ಕಮಕ್ಕಳಲ್ಲಿಯೇ ಹೆಚ್ಚು: ವೃದ್ಧರು ಹಾಗೂ ಚಿಕ್ಕಮಕ್ಕಳಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯಿಂದ ಡೆಂಗಿ ಹರಡುತ್ತಿದ್ದು, ಮನೆಯಲ್ಲಿರುವ ವೃದ್ಧರು ಹಾಗೂ ಮಕ್ಕಳಿಗೆ ಡೆಂಗಿ ಹೆಚ್ಚಾಗಿ ಬಾಧಿಸುತ್ತಿದೆ ಎನ್ನುವುದು ಆರೋಗ್ಯ ಇಲಾಖೆ ಮೂಲಗಳ ಮಾಹಿತಿ

ಪ್ರಚಾರದ ಮಧ್ಯೆಯೂ ಸ್ವಚ್ಛತೆಗೆ ಸಿಗದ ಆದ್ಯತೆ: ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಡೆಂಗಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಹೇಳಲಾಗುತ್ತಿದೆ. ಅದಾಗ್ಯೂ ಜಿಲ್ಲೆಯಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.

ಪ್ರಮುಖವಾಗಿ ಚರಂಡಿಗಳಲ್ಲಿ ನೀರು ನಿಲ್ಲುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿವರ್ತನೆ ಆಗುತ್ತಿವೆ. ಹೀಗಾಗಿ ಡೆಂಗಿ ಜ್ವರ ಹೆಚ್ಚಳವಾಗುತ್ತಿದೆ.

2024 ರಲ್ಲಿ ಡೆಂಗಿ ಪ್ರಕರಣಗಳ ವಿವರ

ತಾಲ್ಲೂಕು; ಪ್ರಕರಣ

ಸಕಲೇಶಪುರ; 8

ಹೊಳೆನರಸೀಪುರ; 13

ಹಾಸನ; 53

ಚನ್ನರಾಯಪಟ್ಟಣ; 26

ಬೇಲೂರು; 18

ಅರಸೀಕೆರೆ; 47

ಅರಕಲಗೂರು; 25

ಆಲೂರು; 15

ಒಟ್ಟು; 205

ಶಂಕಿತ ಸಾವು; 04

ನಾಲ್ಕು ಶಂಕಿತ ಡೆಂಗಿ ಸಾವು ಜಿಲ್ಲೆಯಲ್ಲಿ ಇದುವರೆಗೆ ನಾಲ್ವರು ಡೆಂಗಿನಿಂದ ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಸಮಿತಿಯಿಂದ ಪರಿಶೀಲನೆ ನಡೆಸಲಾಗುತ್ತಿದ್ದು ಸಮಿತಿಯು ವರದಿ ನೀಡಿದ ನಂತರವಷ್ಟೇ ಕಾರಣ ಸ್ಪಷ್ಟವಾಗಲಿದೆ. ಮೃತ ವ್ಯಕ್ತಿಗಳ ರಕ್ತ ಮತ್ತು ಇತರೆ ಮಾದರಿ ಪರೀಕ್ಷೆ ಮಾಡಲಾಗುತ್ತದೆ. ಜಿಲ್ಲಾ ಮಕ್ಕಳ ಆಸ್ಪತ್ರೆಯ ವೈದ್ಯಾಧಿಕಾರಿ ಜಿಲ್ಲಾ ಶಸ್ತ್ರಚಿಕಿತ್ಸಕರು ಔಷಧ ವಿಭಾಗದ ಮುಖ್ಯಸ್ಥರನ್ನು ಒಳಗೊಂಡ ಜಿಲ್ಲಾ ಸಮಿತಿಯ ವರದಿಯನ್ನು ರಾಜ್ಯ ಸಮಿತಿಗೆ ಕಳಿಸಲಾಗುತ್ತದೆ. ಸಮಗ್ರ ಪರೀಕ್ಷೆ ಬಳಿಕ ಅಧಿಕೃತ ವರದಿ ಬರಲಿದ್ದು ನಂತರವಷ್ಟೇ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಲಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಸ್ವಾಮಿ.

ಬಾಲಕಿ ಸಾವು: ಡೆಂಗಿ ಶಂಕೆ ಹಾಸನ ತಾಲ್ಲೂಕಿನ ಬೊಮ್ಮನಾಯಕನ ಹಳ್ಳಿಯಲ್ಲಿ ವಿಪರೀತ ಜ್ವರದಿಂದ 13 ವರ್ಷದ ಬಾಲಕಿ ಮೃತಪಟ್ಟಿದ್ದು ಡೆಂಗಿ ಶಂಕೆ ವ್ಯಕ್ತವಾಗಿದೆ. ನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಅಕ್ಷತಾ (13) ಮೃತಪಟ್ಟ ಬಾಲಕಿ. ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಬಾಲಕಿಯ ತಂದೆ ಅಪ್ಪಣ್ಣಶೆಟ್ಟಿ ತಾಯಿ ಪದ್ಮಾ ಕೂಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಬುಧವಾರ ಜ್ವರ ಕಾಣಿಸಿಕೊಂಡ ಬಾಲಕಿಗೆ ಗ್ರಾಮದ ಖಾಸಗಿ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಅಕ್ಷತಾ ಚೇತರಿಸಿಕೊಳ್ಳದ ಕಾರಣ ಜಿಲ್ಲಾಸ್ಪತ್ರೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ಬಾಲಕಿ ಮೃತಪಟ್ಟಿದ್ದಾಳೆ. ರಕ್ತದ ಮಾದರಿಯ ವರದಿಯನ್ನು ರಾಜ್ಯಮಟ್ಟದ ಸಮಿತಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ವರದಿ ಬಂದ ನಂತರ ಬಾಲಕಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಜಿಲ್ಲಾ ಡೆಂಗ್ಯೂ ನಿಯಂತ್ರಣಾಧಿಕಾರಿ ಡಾ.ನಾಗಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.