ADVERTISEMENT

ಎತ್ತಿಹೊಳೆ ಯೋಜನೆ ಹೆಸರಲ್ಲಿ ಪರಿಸರ ನಾಶ: ನಿರ್ಮಲಾಗೌಡ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 13:59 IST
Last Updated 28 ಜೂನ್ 2024, 13:59 IST
ಹಾಸನದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಶುಕ್ರವಾರ ನಡೆದ  ‘ನದಿಗಳನ್ನು ಕೊಲ್ಲಬೇಕೇ’ ಸಂವಾದ ಕಾರ್ಯಕ್ರಮದಲ್ಲಿ ಪಿಪಿಟಿ ಮೂಲಕ ನಿರ್ಮಲಾಗೌಡ ಪ್ರಾತ್ಯಕ್ಷಿಕೆ ನೀಡಿದರು. ಆಂಜನೇಯ ರೆಡ್ಡಿ, ಆರ್‌.ಪಿ. ವೆಂಕಟೇಶಮೂರ್ತಿ, ಹೆಮ್ಮಿಗೆ ಮೋಹನ್‌, ಡಾ.ಎಚ್‌.ಎಲ್‌. ಮಲ್ಲೇಶಗೌಡ ಪಾಲ್ಗೊಂಡಿದ್ದರು
ಹಾಸನದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಶುಕ್ರವಾರ ನಡೆದ  ‘ನದಿಗಳನ್ನು ಕೊಲ್ಲಬೇಕೇ’ ಸಂವಾದ ಕಾರ್ಯಕ್ರಮದಲ್ಲಿ ಪಿಪಿಟಿ ಮೂಲಕ ನಿರ್ಮಲಾಗೌಡ ಪ್ರಾತ್ಯಕ್ಷಿಕೆ ನೀಡಿದರು. ಆಂಜನೇಯ ರೆಡ್ಡಿ, ಆರ್‌.ಪಿ. ವೆಂಕಟೇಶಮೂರ್ತಿ, ಹೆಮ್ಮಿಗೆ ಮೋಹನ್‌, ಡಾ.ಎಚ್‌.ಎಲ್‌. ಮಲ್ಲೇಶಗೌಡ ಪಾಲ್ಗೊಂಡಿದ್ದರು   

ಹಾಸನ: ‘ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಲಕ್ಷಾಂತರ ಮರಗಿಡಗಳನ್ನು ಕಡಿದು ಪರಿಸರಕ್ಕೆ ದೊಡ್ಡ ಮಟ್ಟದ ಹಾನಿಯನ್ನು ರಾಜ್ಯ ಸರ್ಕಾರ ಮಾಡಿದೆ’ ಎಂದು ಪಾನಿ.ಅರ್ಥ ಸಂಸ್ಥಾಪಕಿ ನಿರ್ಮಲಾಗೌಡ ಹೇಳಿದರು.

ಹಸಿರು ಭೂಮಿ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಭಾರತ ಜ್ಞಾನ ವಿಜ್ಞಾನ ಸಮಿತಿ, ಪರಿಸರಕ್ಕಾಗಿ ನಾವು ಬಳಗ, ಕರ್ನಾಟಕ ಪ್ರಾಂತ ರೈತ ಸಂಘ, ಭಾರತೀಯ ರೆಡ್ ಕ್ರಾಸ್, ಭೂ ಸಿರಿ ವೇದಿಕೆ, ಹಿರಿಯ ನಾಗರಿಕರ ವೇದಿಕೆಗಳ ಆಶ್ರಯದಲ್ಲಿ ಶುಕ್ರವಾರ ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನದಿಗಳನ್ನು ಕೊಲ್ಲಬೇಕೇ’ ಸಂವಾದ ಕಾರ್ಯಕ್ರಮದಲ್ಲಿ ಪಿಪಿಟಿ ಮೂಲಕ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

‘ಮೇಕೆದಾಟು ಬಳಿ ಜಲಾಶಯ ನಿರ್ಮಿಸಲು ಮುಂದಾಗಿರುವುದು ಪರಿಸರ ನಾಶಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರಗಳು ಕೈಗೊಳ್ಳುತ್ತಿರುವ ಯೋಜನೆಗಳು ಭವಿಷ್ಯದಲ್ಲಿ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನ ಇಲ್ಲ’ ಎಂದರು.

ADVERTISEMENT

‘ಬೆಂಗಳೂರಿನ ವೃಷಭಾವತಿ ನದಿಗೆ ನಿತ್ಯ ದಶಲಕ್ಷ ಮೀಟರ್ ಮಲೀನ ನೀರನ್ನು ಬಿಡಲಾಗುತ್ತಿದೆ. ಹಾಸನ ಸಮೀಪದ ಹಾಲುವಾಗಿಲು ಬಳಿ ಯಗಚಿ ನೀರಿಗೂ ನಗರದ ಚರಂಡಿ ಹಾಗೂ ಯುಜಿಡಿ ನೀರನ್ನು ಹರಿ ಬಿಡಲಾಗುತ್ತಿದೆ. ಇದರಿಂದ ನೀರಿನ ಶುದ್ಧತೆ ಹದಗೆಡುತ್ತಿದ್ದು, ಇದೇ ನೀರು ಹೇಮಾವತಿ ಜಲಾಶಯ ಸೇರುತ್ತಿದೆ. ನಗರ ಸೇರಿದಂತೆ ಇತರೆ ತಾಲ್ಲೂಕಿನ ಜನರು ಕುಡಿಯಲು ಇದೇ ನೀರನ್ನು ಬಳಸುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಹಾಸನದ ಹುಣಸಿನಕೆರೆಗೂ ಮಲೀನ ನೀರನ್ನು ಬಿಡಲಾಗುತ್ತಿದ್ದು, ಕೆರೆಯ ಪಕ್ಕದಲ್ಲಿಯೇ ನಗರದ ತ್ಯಾಜ್ಯ ಮತ್ತು ಇನ್ನಿತರ ವಸ್ತುಗಳನ್ನು ಸುರಿಯುತ್ತಿರುವುದು, ಕೆರೆಯು ಕಲುಷಿತವಾಗಲು ಪ್ರಮುಖ ಕಾರಣವಾಗಿದೆ. ಪರಿಸರ ಹಾಳಾದರೆ ಮಳೆಯ ಕೊರತೆ ಉಂಟಾಗುತ್ತದೆ. ಅದರ ನೇರ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಆಗುತ್ತದೆ. ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ. ಇದು ರಾಜಕಾರಣಿಗಳಿಗೆ ತಿಳಿಯುತ್ತಿಲ್ಲ. ಪರಿಸರ ರಕ್ಷಣೆ ಆದ್ಯತೆ ಮೇರೆಗೆ ಗಮನಹರಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಪರಿಸರ ರಕ್ಷಣೆ ಎಂದರೆ ಕೇವಲ ಗಿಡ ನೆಡುವುದಲ್ಲ, ಬಹುಮುಖ್ಯವಾಗಿ ನೀರಿನ ಮೂಲ, ಕೆರೆ, ನದಿ ನೀರನ್ನು ಮಲಿನ ಆಗದಂತೆ ತಡೆಯುವುದೇ ಬಹು ಮುಖ್ಯ. ದೇಶವು ಬೆಳವಣಿಗೆ ಹೊಂದುತ್ತಿರುವ ಜೊತೆಗೆ ಕೈಗಾರಿಕೆ ಸ್ಥಾಪನೆ, ಮಹಾನಗರ ಸೃಷ್ಟಿ ಮೂಲಕ ಬಹುತೇಕ ನದಿಗಳನ್ನು ಮಲಿನ ಮಾಡಲಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆಗೆ ಶುದ್ಧ ನೀರು ಸಿಗುವುದು ಖಂಡಿತವಾಗಿಯೂ ಕಷ್ಟ ಸಾಧ್ಯವಾಗಿದೆ’ ಎಂದು ಎಚ್ಚರಿಸಿದರು.

‘ರಾಜ್ಯದ ಎಲ್ಲ ನದಿಗಳು ಕಲುಷಿತಗೊಂಡಿವೆ ಎಂದು ಸರ್ಕಾರವೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಮುಜುಗರಕ್ಕೆ ಒಳಗಾಗಿದ್ದು, ನಂತರ ತಪ್ಪನ್ನು ಸಮರ್ಥಿಸಿಕೊಂಡಿದೆ. ಇದಕ್ಕೆ ಮೂಲ ಕಾರಣವೇನು, ಪರಿಹಾರವೇನು ಎಂಬುದರ ಕುರಿತು ಗಂಭೀರ ಚರ್ಚೆಯಾಗಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಲ್‌. ಮಲ್ಲೇಶಗೌಡ ಮಾತನಾಡಿ, ‘ಕೆಲ ದಶಕಗಳ ಹಿಂದೆ ಮಣ್ಣಿಗೆ ವಿಶೇಷ ಸ್ಥಾನಮಾನವಿತ್ತು. ಮಕ್ಕಳು, ಗರ್ಭಿಣಿಯರು ತಿನ್ನುವ ಪದಾರ್ಥವಾಗಿತ್ತು. ಆದರೆ ಇಂದು ಬರಿಕಾಲಿನಲ್ಲಿ ಮಣ್ಣಿನಲ್ಲಿ ನಡೆದರೂ ಭಯವಾಗುವಷ್ಟು ಹದಗೆಟ್ಟಿದ್ದು, ಚಪ್ಪಲಿ ಧರಿಸಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಆಧುನಿಕತೆ ಕಾರಣ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ. ಭವಿಷ್ಯದಲ್ಲಿ ಮಣ್ಣನ್ನು ಕಂಡರೆ ಅಸಹ್ಯ ಪಡುವ ಕಾಲ ದೂರವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ. ವೆಂಕಟೇಶಮೂರ್ತಿ, ಹೆಮ್ಮಿಗೆ ಮೋಹನ್, ಅಂತೋಣಿ, ಸೌಭಾಗ್ಯ, ಅಪ್ಪಾಜಿಗೌಡ, ಭೀಮನಗೌಡ, ಎಂ.ಸಿ. ಡೊಂಗ್ರೆ, ಆನಂದ್ ಸಿಂಗ್, ಅನಂತ್ ರಾಜ್ ಅರಸು, ಧರ್ಮೇಶ್, ಸೈಯದ್ ತಾಜ್ ಇತರರು ಇದ್ದರು.

‘ವೃಷಭಾವತಿ ನದಿಯಿಲ್ಲ ಎಂದಿದ್ದ ಸರ್ಕಾರ’
‘ಬೆಂಗಳೂರು ಮಹಾನಗರದ ಚರಂಡಿ ಒಳಚರಂಡಿ ನೀರನ್ನು ಸಾಗಿಸುವ ಕೆಂಗೇರಿ ಮೋರಿ ಮೂಲ ವೃಷಭಾವತಿ ನದಿಯಾಗಿದೆ. ನದಿ ಸಂಪೂರ್ಣ ಕಲುಷಿತಗೊಂಡಿದೆ ಎಂದು ಕೋರ್ಟ್‌ನಲ್ಲಿ ದಾವೆ ಹೂಡಿದಾಗ ಸರ್ಕಾರ ಅಲ್ಲಿ ನದಿಯೇ ಇಲ್ಲ ಎಂದು ವಾದಿಸಿತ್ತು. ನಂತರ ನಾವು ದಾಖಲೆ ಸಮೇತ ವೃಷಭಾವತಿಯ ಮಾಹಿತಿ ನೀಡಿದಾಗ ಸರ್ಕಾರ ತಪ್ಪೊಪ್ಪಿಕೊಂಡಿತು’ ಎಂದು ನಿರ್ಮಲಾಗೌಡ ಹೇಳಿದರು. ‘ಮುಂದಿನ ಕೆಲವೇ ದಿನಗಳಲ್ಲಿ ಹಾಸನ ಜಿಲ್ಲೆಯ ಯಗಚಿ ನದಿ ಕೂಡ ಮತ್ತೊಂದು ಮೋರಿ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಕಲುಷಿತ ನೀರಿನ ಸೇರ್ಪಡೆಯಿಂದ ಹೇಮಾವತಿ ಯಗಚಿ ಕಾವೇರಿ ಸೇರಿ ರಾಜ್ಯದ ಬಹುತೇಕ ನದಿಗಳು ಮೋರಿಗಳಾಗಿ ಪರಿವರ್ತನೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಮಾಲಿನ್ಯಕ್ಕೆ ಅಧಿಕಾರಿಗಳೂ ಕಾರಣ
‘ಇತ್ತೀಚಿನ ದಿನಗಳಲ್ಲಿ ಕೆರೆ ಹಾಗೂ ಇನ್ನಿತರ ನೈಸರ್ಗಿಕ ಸಂಪನ್ಮೂಲ ಮಲಿನ ಮಾಡಲು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ. ಮಲೀನ ಮಾಡುವವರಿಂದ ಲಂಚ ಪಡೆದು ಸಹಕಾರ ನೀಡುತ್ತಿದ್ದಾರೆ. ಇದರಿಂದ ಪರಿಸರ ಮತ್ತಷ್ಟು  ಹದಗೆಡುತ್ತಿದೆ’ ಎಂದು ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯ ರೆಡ್ಡಿ ದೂರಿದರು. ‘ನಮ್ಮ ಸುತ್ತಲಿನ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಯುವ ಸಮುದಾಯ ಹಾಗೂ ನಾಗರಿಕರು ಕೈಜೋಡಿಸಬೇಕಿದೆ. ನಮ್ಮ ಕಣ್ಣಿಗೆ ಯಾವುದೇ ಇಂತಹ ಸನ್ನಿವೇಶ ಕಂಡರೆ ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಬೇಕು. ಅಲ್ಲಿನ ಅಧಿಕಾರಿಗಳು ಕ್ರಮ ವಹಿಸದಿದ್ದರೆ ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು. ‘40 ವರ್ಷಗಳ ಈಚೆಗೆ ಮಣ್ಣಿನ ವಿಪರೀತ ಶೋಷಣೆ ನಡೆಯುತ್ತಿದೆ. ಕ್ರಿಮಿನಾಶಕ ಬಳಕೆಯಿಂದ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ 40 ವರ್ಷಗಳಲ್ಲಿ ಭೂಮಿಯ ಸ್ಥಿತಿ ಭಯಾನಕವಾಗಿರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.