ADVERTISEMENT

ಕಾವೇರಿ: ತಮಿಳುನಾಡು ವಿರುದ್ಧ ಚಕಾರವೆತ್ತದ ಸರ್ಕಾರದ ನಡೆಗೆ ದೇವೇಗೌಡ ಬೇಸರ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 12:26 IST
Last Updated 21 ಫೆಬ್ರುವರಿ 2021, 12:26 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಹಾಸನ: ತಮಿಳುನಾಡು ಸರ್ಕಾರ ಕೈಗೊಂಡಿರುವ ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರು ಬಳಕೆಯ ಬೃಹತ್‌
ಯೋಜನೆಗೆ ರಾಜ್ಯ ಸರ್ಕಾರ ಚಕಾರವೆತ್ತದಿರುವುದು ಸರಿಯಲ್ಲ. ಇದು ಗಂಭೀರವಾದ ವಿಷಯ ಎಂದು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಹೇಳಿದರು.

ತಾಲ್ಲೂಕಿನ ಉಪ್ಪಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ
ಮಾತನಾಡಿದ ಅವರು, ರಾಜ್ಯದ ಪಾಲಿನ ನೀರು ಕಬಳಿಸಲು ತಮಿಳುನಾಡು ಸರ್ಕಾರ ಪ್ರಧಾನಿ ಮೇಲೆ ಒತ್ತಡ ಹೇರುತ್ತಿದೆ.ರಾಜ್ಯದ ಹಿತ ಕಾಪಾಡುವಲ್ಲಿ ಕಾಂಗ್ರೆಸ್‌, ಬಿಜೆಪಿ ವಿಫಲವಾಗಿವೆ. ಎಐಡಿಎಂಕೆ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಹಲವು ಯೋಜನೆಗಳನ್ನು ಘೋಷಿಸಿದೆ. ರಾಜ್ಯದ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ, ಅಂತಹ ಸಂದರ್ಭ ಬಂದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದರು.

ಹಲವು ಸಮಾಜಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿವೆ. ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಶೇಕಡಾ50ಕ್ಕಿಂತ ಹೆಚ್ಚು ಮೀಸಲಾತಿ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪಇದನ್ನು ಹೇಗೆ ಬಗೆಹರಿಸುತ್ತಾರೋ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಸರ್ಕಾರದ ಶಕ್ತಿ ಬಳಸಿ ಮಣಿಸಲು ಸಾಧ್ಯವಿಲ್ಲ. ಸಂಘರ್ಷದ ಬದಲು ಮಾತುಕತೆ ಮೂಲಕ ಬಗೆಹರಿಸುವಂತೆ ಪ್ರಧಾನಿಗೆ ಸಲಹೆ ನೀಡಿದ್ದೇನೆ. ನನ್ನನ್ನು ಆಹ್ವಾನಿಸಿದರೆ ಸಲಹೆ ನೀಡಲು ಸಿದ್ಧ.ರೈತರ ಮೇಲೆ ಪ್ರಕರಣ ದಾಖಲಿಸುತ್ತಾ ಹೋದರೆ ಅವರಿಗೂ ತೊಂದರೆ ಆಗುತ್ತದೆ. ಸೌಮ್ಯ ಸ್ವಭಾವದ ರೈತರನ್ನು ಕೆಣಕಿದರೆ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.