ADVERTISEMENT

ಹಾಸನಾಂಬೆ ದೇವಿ ದರ್ಶನಕ್ಕೆ ಜನವೋ ಜನ

ರಾಜ್ಯದ ವಿವಿಧೆಡೆಗಳಿಂದ ಬರುತ್ತಿರುವ ಭಕ್ತಾದಿಗಳು: ಕಿ.ಮೀ. ಗಟ್ಟಲೆ ಸರದಿ ಸಾಲು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 15:49 IST
Last Updated 28 ಅಕ್ಟೋಬರ್ 2024, 15:49 IST
ಪೌರಕಾರ್ಮಿಕ ಮಹಿಳೆಯರು ಹಾಸನಾಂಬ ದೇಗುಲದ ಎದುರು ಚಿತ್ತಾರದ ರಂಗೋಲಿ ಬಿಡಿಸಿದರು.
ಪೌರಕಾರ್ಮಿಕ ಮಹಿಳೆಯರು ಹಾಸನಾಂಬ ದೇಗುಲದ ಎದುರು ಚಿತ್ತಾರದ ರಂಗೋಲಿ ಬಿಡಿಸಿದರು.   

ಹಾಸನ: ಹಾಸನಾಂಬ ದೇವಿಯ ದರ್ಶನಕ್ಕೆ ನಾಡಿನ ವಿವಿಧೆಡೆಗಳಿಂದ ಭಕ್ತಾದಿಗಳು ಹರಿದು ಬರುತ್ತಿದ್ದು, ಪ್ರತಿಯೊಂದು ಸರದಿ ಸಾಲಿನಲ್ಲೂ ಕಿ.ಮೀ.ಗಟ್ಟಲೆ ಜನರು ನಿಂತಿರುವುದು ಸಾಮಾನ್ಯವಾಗಿತ್ತು.

ಸಾರ್ವಜನಿಕ ದರ್ಶನದ ನಾಲ್ಕನೇ ದಿನವಾದ ಸೋಮವಾರ ಭಾರಿ ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು. ತಡರಾತ್ರಿಯಿಂದಲೂ ಸರತಿ ಸಾಲಿನಲ್ಲಿ ನಿಂತ ಸಾವಿರಾರು ಭಕ್ತರು ದರ್ಶನ ಪಡೆದರು. ವಿವಿಐಪಿ, ವಿಐಪಿ, ಸಾಮಾನ್ಯ ದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿದ್ದವು.

ಸಾಮಾನ್ಯ ಸರತಿಯಲ್ಲಿ ಸಾಗುತ್ತಿರುವ ಜನರು ದೇವಿಯ ದರ್ಶನ ಪಡೆಯಲು 6–7 ಗಂಟೆ ಸಾಗಿ ಬರಬೇಕಿದೆ. ₹1ಸಾವಿರ ಮೌಲ್ಯದ ಟಿಕೆಟ್‌ಗೆ 2–3 ಗಂಟೆ ಹಾಗೂ ವಿವಿಐಪಿ ಪಾಸ್ ಪಡೆದವರು ಸಹ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆಯುವುದು ಅನಿವಾರ್ಯವಾಗಿತ್ತು. ಮಹಿಳೆಯರು, ವೃದ್ದರು, ಮಕ್ಕಳು ಸರದಿಯಲ್ಲಿ ನಿಂತು ಸುಸ್ತಾಗುತ್ತಿರುವುದು ಕಂಡು ಬಂತು.

ADVERTISEMENT

ದರ್ಶನ ಪಡೆದ ಸಚಿವ ಸೋಮಣ್ಣ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕುಟುಂಬ ಸಮೇತರಾಗಿ ಬಂದು ಹಾಸನಾಂಬ ದೇವಿ ದರ್ಶನ ಪಡೆದರು.

ನಂತರ ಮಾತನಾಡಿದ ಅವರು, ಸಾವಿರಾರು ವರ್ಷದ ಇತಿಹಾಸವಿರುವ ಹಾಸನಾಂಬೆ ದೇವಾಲಯವಿದು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಲ್ಲವನಾಗಿದ್ದೇನೆ. ನನ್ನ ಅನುಭವದಲ್ಲಿ ಈ ಬಾರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ದೇವಿ ದರ್ಶನಕ್ಕೆ ಅತ್ಯುತ್ತಮ ವ್ಯವಸ್ಥೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಾನು ಸತತವಾಗಿ 2–3 ಬಾರಿ ದೇವಿ ದರ್ಶನ ಮಾಡಿದ್ದೇನೆ. ಭಾನುವಾರ ಒಂದೇ ದಿನ ಲಕ್ಷಾಂತರ ಜನ ದರ್ಶನ ಪಡೆದಿದ್ದಾರೆ. ಹಾಸನಾಂಬೆ ದೇವಿ ವಿಶ್ವ ಖ್ಯಾತಿ ಗಳಿಸಿದ್ದು, ತಾಯಿಯ ಪವಾಡಗಳು, ಈ ಭಾಗಕ್ಕೆ, ತನ್ನನ್ನು ನಂಬಿರುವ ಭಕ್ತರಿಗೆ ಕೊಡುಗೆಗಳನ್ನು ಕೊಟ್ಟಿದ್ದಾಳೆ. ಅದರಿಂದಾಗಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕಡೆಯ ದಿನ ಹಚ್ಚುವ ದೀಪ, ದೇವರ ಮುಂದೆ ಇಡುವ ಹೂವು ಮುಂದಿನ ವರ್ಷ ಬಾಗಿಲು ತೆಗೆದಾಗಲು ಹಾಗೇ ಇರುತ್ತದೆ ಎಂದರು.

ದುಷ್ಟರನ್ನು ಶಿಕ್ಷಿಸಲಿ, ತನ್ನನ್ನು ನಂಬಿವರಿಗೆ ಒಳ್ಳೆಯದು ಮಾಡಲಿ. ರಾಜ್ಯದಲ್ಲಿ ಕೆಲ ತಿಂಗಳಿಂದಲೂ ಮಳೆಯಿಂದಾದ ಅನಾಹುತಗಳಿಂದ ಜನ ತತ್ತರಿಸಿ ಹೋಗಿದ್ದು, ಅವರಿಗೆ ಶಕ್ತಿ ನೀಡಲಿ ಎಂದು ಹಾಸನಾಂಬ ತಾಯಿಯಲ್ಲಿ ಪ್ರಾರ್ಥಿಸೋಣ. ನಾನು ನಿಂತು ವ್ಯವಸ್ಥೆ ಮಾಡಿದರೂ ಈ ರೀತಿ ಮಾಡುತ್ತಿರಲಿಲ್ಲ ಎಂದರು.

ಬಂಡಿಸಿದ್ದೇಗೌಡರಿಂದ ದರ್ಶನ: ಕುಟುಂಬ ಸಮೇತರಾಗಿ ಬಂದಿದ್ದ ಸೆಸ್ಕಾಂ ಅಧ್ಯಕ್ಷ, ಶಾಸಕ ರಮೇಶ್ ಬಂಡಿಸಿದ್ದೇಗೌಡ, ಹಾಸನಾಂಬ ದೇವಿಯ ದರ್ಶನ ಪಡೆದರು.

ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆ– ಬೆಳೆ ಆಗಲಿ. ರೈತರೇ ದೇಶದ ಬೆನ್ನೆಲುಬು. ಅವರಿಗೆ ಉತ್ತಮ ಆರೋಗ್ಯ ಮತ್ತು ಆರ್ಥಿಕ ಶಕ್ತಿಯನ್ನು ದೇವಿ ಕರುಣಿಸಲಿ ಎಂದು ಪ್ರಾರ್ಥನೆ‌‌ ಮಾಡಿರುವುದಾಗಿ ಹೇಳಿದರು‌.

ರಾಜ್ಯದಲ್ಲಿ ಯಾವುದೇ ವಿದ್ಯುತ್ ಅವಘಡ ಸಂಭವಿಸದೇ ಇರಲಿ. ವಿದ್ಯುತ್ ಇಲಾಖೆ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಬೇಡಿದ್ದೇನೆ. ಕುಟುಂಬ ಸಮೇತನಾಗಿ ದೇವಿಯ ದರ್ಶನ ಪಡೆದಿದ್ದು ಸಂತಸ ನೀಡಿದೆ. ದೇವಿಯ ಆಶೀರ್ವಾದ ಸದಾ ಎಲ್ಲರ ಮೇಲೂ ಇರಲಿ ಎಂದು ಹಾರೈಸಿದರು.

ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಹಾಸನ ನಗರ ಪ್ರವೇಶಿಸುವ ರಸ್ತೆಗಳಲ್ಲಿ ಮಾಡಿರುವ ವಿದ್ಯುತ್‌ ದೀಪಾಲಂಕಾರ
ಹಾಸನಾಂಬೆಯ ದರ್ಶನಕ್ಕೆ ರಾತ್ರಿ ವೇಳೆ ಸರದಿಯಲ್ಲಿ ನಿಂತಿರುವ ಜನರು.

ಸರದಿ ನಿಯಂತ್ರಿಸಲು ಕಾರ್ಯಾಚರಣೆಗೆ ಇಳಿದ ಎಸ್ಪಿ

ಮೊಹಮ್ಮದ್‌ ಸುಜೀತಾ ರಾತ್ರಿಯಿಂದಲೇ ಸರದಿಯಲ್ಲಿ ನಿಲ್ಲುತ್ತಿರುವ ಜನರು: ಬೆಳಗಿನ ಜಾವ ದರ್ಶನ ಈ ಬಾರಿ ಹೆಚ್ಚಿದ ಜನರ ಸಂಖ್ಯೆ: ದರ್ಶನಕ್ಕೆ ಗಂಟೆಗಟ್ಟಲೆ ಸರದಿ

ಣ್ಯರಿಗೆ ಒಂದೆರಡು ದಿನ ಸೀಮಿತ ಮಾಡಿ

ಹಾಸನಾಂಬೆಯ ದರ್ಶನಕ್ಕೆ ಬರುವ ಅತಿ ಗಣ್ಯರನ್ನು ಒಂದು ಅಥವಾ ಎರಡು ದಿನಕ್ಕೆ ಸೀಮಿತ ಮಾಡಬೇಕು. ಸಚಿವರು ಶಾಸಕರು ಗಣ್ಯರು ಯಾರೇ ಬಂದರೂ ಅವರಿಗೆ ಎರಡು ದಿನ ಅವಕಾಶ ಕೊಡಬೇಕು. ಪ್ರತಿದಿನವೂ ಒಬ್ಬೊಬ್ಬರು ಬಂದಾಗ ಅರ್ಧಗಂಟೆ ದರ್ಶನ ಬಂದ್ ಮಾಡುವುದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ಜನರು ಒತ್ತಾಯಿಸಿದರು. ತುರುವೀಕೆರೆಯ ಶೋಭಾ ಮಾತನಾಡಿ ‘ಗಣ್ಯರಿಗೆ ಎಲ್ಲ ದಿನವೂ ಅವಕಾಶ ನೀಡುವುದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಎರಡು ದಿನ ಅವರಿಗೇ ಮೀಸಲಿಡಲಿ. ಆಗ ಸಾಮಾನ್ಯ ಜನರಿಗೆ ಬಿಡುವುದು ಬೇಡ. ಸಾಮಾನ್ಯ ಜನರನ್ನು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಿಸುವುದು ಸರಿಯಲ್ಲ’ ಎಂದು ಹೇಳಿದರು. ವ್ಯವಸ್ಥೆಯನ್ನು ಕಂದಾಯ ಇಲಾಖೆಗೆ ನೀಡಲಾಗಿದೆ. ಅದನ್ನು ಪೊಲೀಸ್ ಇಲಾಖೆಗೆ ನೀಡಬೇಕು. 5–6 ಗಂಟೆ ಸರದಿಯಲ್ಲಿ ನಿಲ್ಲುವುದು ಜನರಿಗೆ ತೊಂದರೆ ಆಗುತ್ತಿದೆ ಎಂದು ಬೆಂಗಳೂರಿನ ರಾಜೇಶ್‌ ಸಲಹೆ ನೀಡಿದರು.

ಕುಸಿದು ಬಿದ್ದ ವ್ಯಕ್ತಿಗೆ ಚಿಕಿತ್ಸೆ

ಹಾಸನಾಂಬ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ ಕಲ್ಯಾಣನಗರದ ವ್ಯಕ್ತಿಯೊಬ್ಬರು ಕಡಿಮೆ ರಕ್ತದೊತ್ತಡದಿಂದ ಕುಸಿದು ಬಿದ್ದ ಘಟನೆ ಸೋಮವಾರ ನಡೆಯಿತು. ಸುಮಾರು 50 ವರ್ಷದ ಈ ವ್ಯಕ್ತಿ ಬಿಸಿಲ ತಾಪ‌ ಮತ್ತು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ನಿತ್ರಾಣಗೊಂಡು ಕುಸಿದು ಬಿದ್ದರು. ತಕ್ಷಣವೇ ಸಮೀಪವಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿ ಗಾಲಿಕುರ್ಚಿಯಲ್ಲಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಬಳಿಕ ತುರ್ತು ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಿದರು. ಅವರ ಆರೋಗ್ಯ ಸುಧಾರಣೆ ಆಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.