ADVERTISEMENT

ಹಾಸನ | ಪ್ರಾಣಿ ವಧೆ ತಡೆಗೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2024, 13:19 IST
Last Updated 21 ನವೆಂಬರ್ 2024, 13:19 IST
<div class="paragraphs"><p>ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯಲ್ಲಿ ಜಾನುವಾರು ಗಣತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.  </p></div>

ಹಾಸನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯಲ್ಲಿ ಜಾನುವಾರು ಗಣತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.

   

ಹಾಸನ: ಪ್ರಾಣಿ ವಧೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಮಾಹಿತಿ ಬಂದಲ್ಲಿ ತಕ್ಷಣ ಸ್ಪಂದಿಸಿ ಕಾನೂನು ರೀತಿ ಕ್ರಮಕೈಗೊಳ್ಳುವಂತೆ  ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಾನುವಾರುಗಳನ್ನು ಅಕ್ರಮವಾಗಿ ಸಾಗಣೆ ಮಾಡುವುದನ್ನು ತಡೆಯಬೇಕು. ಜಾನುವಾರುಗಳನ್ನು ಮಾರಾಟ ಮಾಡಲು ಬಂದ ಸಂದರ್ಭದಲ್ಲಿ ಪ್ರತಿಯೊಂದು ಜಾನುವಾರುಗಳಿಗೆ ರಶೀದಿ ನೀಡಲು ಕ್ರಮವಹಿಸುವಂತೆ  ಎ.ಪಿ.ಎಂ.ಸಿ. ಕಾರ್ಯದರ್ಶಿಗೆ ಸೂಚಿಸಿದರು ಹಾಗೂ ಪಶುಪಾಲನೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ನಿಗಾವಹಿಸಲು ನಿರ್ದೇಶನ ನೀಡಿದರು.

ADVERTISEMENT

ಜಾನುವಾರು ಸಾಗಾಟದ ಸಂದರ್ಭದಲ್ಲಿ ಎಲ್ಲಿ ಖರೀದಿಸಿದ್ದಾರೆ ಎಂಬುದಕ್ಕೆ ದಾಖಲೆ ಇರಬೇಕು. ರಶೀದಿ ಇಲ್ಲದೆ ಜಾನುವಾರು ವಾಹನದಲ್ಲಿ ತುಂಬಿ ಸಾಗಿಸುತ್ತಿದ್ದರೆ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಗೋಶಾಲೆಗಳಲ್ಲಿ ಇರುವ ಜಾನುವಾರುಗಳಿಗೆ  ಒಣ ಮೇವು ಖರೀದಿಸಲು ಈಗಾಗಲೇ ಟೆಂಡರ್ ಕರೆದಿದ್ದು, ಮೇವಿನ ಗುಣಮಟ್ಟ ಮತ್ತು ತೂಕದ ಬಗ್ಗೆ ಗಮನಹರಿಸುವಂತೆ ಹಾಗೂ ಪ್ರತಿ ಮೂರು ತಿಂಗಳಿಗೋಮ್ಮೆ  ಪ್ರಾಣಿ ದಯಾ ಸಂಘದ ಸಭೆ ನಡೆಸಲು ಕ್ರಮವಹಿಸಲು ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಕಸ್ತೂರು ಬಾ ಗೋಶಾಲೆಗೆ ರಸ್ತೆ ಸಂಪರ್ಕ ಹಾಗೂ ನೀರಿನ ಸೌಲಭ್ಯ ಕಲ್ಪಿಸಲು  ಕ್ರಮಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅವರಿಗೆ ತಿಳಿಸಿದ ಜಿಲ್ಲಾಧಿಕಾರಿ ಪ್ರತಿ ಹೋಬಳಿ ಮಟ್ಟದಲ್ಲಿ ಪ್ರಾಣಿಮಿತ್ರ ಸಂಘ ರಚನೆಗೆ ಕ್ರಮವಹಿಸಿ. ಕಸಾಯಿಖಾನೆ ಮತ್ತು ಕೋಳಿ ಅಂಗಡಿ ಮಾಲೀಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಬೀದಿ ನಾಯಿಗಳು ಅದನ್ನು ತಿಂದು ಮನುಷ್ಯರ ಮೇಲೆ ದಾಳಿ ಮಾಡುವುದು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ತ್ಯಾಜ್ಯ ವಿಲೇವಾರಿಯನ್ನು ವ್ಯವಸ್ಥಿತವಾಗಿ ಮಾಡಲು ಕ್ರಮ ವಹಿಸುವಂತೆ ನಗರ ಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ನಡೆಯಲಿರುವ ಜಾನುವಾರು ಗಣತಿಯಲ್ಲಿ ಯಾವುದೇ ಜಾನುವಾರು ಬಿಟ್ಟು ಹೋಗದಂತೆ ನಿಗಾವಹಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ಮಾತನಾಡಿ  ಜಾನುವಾರುಗಳು ಮಾರಾಟವಾಗುವ ಸ್ಥಳದಲ್ಲಿಯೆ  ದಾಖಲೆಗಾಗಿ ಮಾರಾಟಗಾರರ  ಮತ್ತು ಖರೀದಿದಾರರ ಪೋಟೋ ಸಂಗ್ರಹಿಸಿದರೆ ಜಾನುವಾರಗಳ ಆಕ್ರಮ ಸಾಗಾಟಕ್ಕೆ ಕಡಿವಾಣ ಹಾಕಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಾನುವಾರು ಗಣತಿ ಪೋಸ್ಟರ್ ಬಿಡುಗಡೆ ಮಾಡಲಾಯಿತು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣ ಮೂರ್ತಿ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ರಮೇಶ್ , ವಿವಿಧ ಅಧಿಕಾರಿಗಳು, ಗೋಶಾಲೆಯ ಮುಖ್ಯಸ್ಥರು ಹಾಗೂ ಪ್ರಾಣಿ ದಯಾ ಸಂಘದ  ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.