ಹಿರೀಸಾವೆ: ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಾನು ವಿರೋಧ ಮಾಡಲ್ಲ. ಆದರೆ ಗ್ಯಾರಂಟಿಗಳಿಗಾಗಿ ನಮಗೆ ಮೋಸ ಮಾಡಬೇಡಿ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಹಿರೀಸಾವೆಯಲ್ಲಿ ಬುಧವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
‘ನನಗೆ ನಿಲ್ಲುವ ಶಕ್ತಿ ಇಲ್ಲ. ಆದರೆ, ಹೋರಾಟ ಮಾಡುವ ಶಕ್ತಿ ಇದೆ. ದೇವರ ಅನುಗ್ರಹ ಇರುವವರೆಗೆ ನಿಮ್ಮ ಪರವಾಗಿ ಹೋರಾಡುತ್ತೇನೆ. ನಮ್ಮ ಪಕ್ಷಕ್ಕೆ ಬೆಂಬಲ ನೀಡಿ’ ಎಂದು ಮನವಿ ಮಾಡಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘15 ವರ್ಷ ಗಿಳಿಯ ಹಾಗೆ ಸಾಕಿದೆ. ಆದರೆ, ಅದು ನನಗೆ ಮೋಸ ಮಾಡಿದೆ. ನಾನು ಸಚಿವನಾಗಿದ್ದಾಗ ಅರಸೀಕೆರೆಗೆ ಎಂಜಿನಿಯರಿಂಗ್ ಕಾಲೇಜು, ವಿದ್ಯುತ್ ಸೌಲಭ್ಯ ಸೇರಿದಂತೆ ಅನೇಕ ಸೌಕರ್ಯಗಳನ್ನು ಒದಗಿಸಿದ್ದೆ. ಆದರೆ, ನಾನು ಏನೂ ಮಾಡಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಜೆಲ್ಲೆಯ ಅಭಿವದ್ಧಿಗೆ ಹೆಚ್ಚು ಶ್ರಮಿಸಿದ್ದೇವೆ. ಜಿಲ್ಲೆಯ ಕೆರೆಗಳಿಗೆ ನೀರು ಹರಿಸದೆ ಪೊಲೀಸರ ಬಂದೋಬಸ್ತ್‌ನಲ್ಲಿ ತುಮಕೂರಿಗೆ ನೀರು ತೆಗೆದುಕೊಂಡು ಹೋದರು. ಈಗ ಜಿಲ್ಲೆಯ ಜನರ ಬಳಿ ಮತವನ್ನು ಹೇಗೆ ಕೇಳುತ್ತಾರೆ? ಜಿಲ್ಲಾ ಮಂತ್ರಿಗೆ ಬುದ್ಧಿ ಕಲಿಸಲು ನಿಮಗೆ ಸರಿಯಾದ ಸಮಯವಿದು’ ಎಂದರು.
ಶಾಸಕ ಸಿ.ಎನ್. ಬಾಲಕೃಷ್ಣ, ಹಾಸನ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಬಿಜೆಪಿ ಮುಖಂಡರಾದ ಆಣತಿ ಆನಂದ್, ಶ್ರೀಕಂಠಪ್ಪ ಮಾತನಾಡಿದರು.
ಬುಧವಾರ ಎಸ್ಎಸ್ಎಲ್‌ಸಿ ಪರೀಕ್ಷೆ ಇದ್ದ ಕಾರಣ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಭೆ ಮೂರು ಗಂಟೆ ತಡವಾಗಿ ಪ್ರಾರಂಭವಾಯಿತು. ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ನಿಗದಿ ಪಡಿಸಲಾಗಿತ್ತು. ಆದರೆ ವೇದಿಕೆ ಪಕ್ಕದಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರ ಇರುವ ಬಗ್ಗೆ ಶಾಸಕ ಬಾಲಕೃಷ್ಣ ಗಮನಕ್ಕೆ ಸ್ಥಳೀಯ ಕಾರ್ಯಕರ್ತರು ತಂದರು. ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂದು ಕಾರ್ಯಕ್ರಮವನ್ನು ತಡವಾಗಿ ಪ್ರಾರಂಭಿಸಿದರು. ಸಭೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.