ಅರಸೀಕೆರೆ: ‘ನಾನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ನಂಬಿ ರಾಜಕೀಯಕ್ಕೆ ಬಂದವನು, ಅವರು ಹಾಗೂ ಎಚ್.ಡಿ. ಕುಮಾರಸ್ವಾಮಿ ಇಬ್ಬರ ವಿರುದ್ಧ ಉದ್ಧಟತನ ಪ್ರದರ್ಶಿಸುವಷ್ಟು ನಾನು ದೊಡ್ಡವನಲ್ಲ. ಪಕ್ಷಕ್ಕೆ ನಿಷ್ಠನಾಗಿದ್ದೇನೆ, ಹಾಸನದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ನನ್ನ ಹೇಳಿಕೆಗೆ ಅನ್ಯತಾ ಅಪಾರ್ಥ ಕಲ್ಪಿಸುವುದು ಬೇಡ’ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಮನವಿ ಮಾಡಿದರು.
‘ದೇವೇಗೌಡರು ಹಾಸನದಲ್ಲಿ ನಡೆದ ಜೆಡಿಎಸ್ ಸಭೆಗೂ ಮುನ್ನ ವಿಧಾನ ಪರಿಷತ್ ಸದಸ್ಯರ ಚುನಾವಣೆ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದರು. ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಬಗ್ಗೆ ಮಾಧ್ಯಮದವರು ನಿಮಗೆ ಮತದಾನವಿಲ್ಲ ಎಂದು ನೇರವಾಗಿ ಪ್ರಶ್ನಿಸಿದ್ದರ ಪರಿಣಾಮ ಅವರು ಬೇಜಾರಾಗಿರುವುದು ಸಹಜ. ಈ ಬೇಸರದಲ್ಲಿ ನನ್ನ ಬಗ್ಗೆ ಬೇರೆ ರೀತಿ ಪ್ರತಿಕ್ರಿಯಿಸಿರಬಹುದು. ನಾನು ಖುದ್ದಾಗಿ ಭೇಟಿಯಾಗಿ ಅವರ ಜತೆ ಮಾತನಾಡುತ್ತೇನೆ, ಮುಂದೆ ಪಕ್ಷದ ಯಾವುದೇ ಸಭೆಯಲ್ಲಿ ನಾನು ಮಾತನಾಡುವುದೇ ಇಲ್ಲ’ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಹಾಸನದಲ್ಲಿ ನಡೆದ ಪಕ್ಷದ ಸಭೆಗೆ ನನ್ನ ಕ್ಷೇತ್ರದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಹೊರತುಪಡಿಸಿ ಉಳಿದೆಲ್ಲ ತಾಲ್ಲೂಕಿನವರು ಹಾಜರಾಗಿದ್ದರು. ಇದು ನನಗೆ ಸಹಜವಾಗಿ ಬೇಸರ ತರಿಸಿತ್ತು, ಈ ಹಿನ್ನೆಲೆಯಲ್ಲಿ ಶಾಸಕರು ತಮ್ಮ ತಾಲ್ಲೂಕಿನ ಮುಖಂಡರನ್ನು ಸಭೆಗೆ ಕರೆದುಕೊಂಡು ಹೋಗಿಲ್ಲ ಎಂದು ನನ್ನನ್ನು ಪ್ರಶ್ನಿಸಿದರೆ ಏನು ಉತ್ತರ ನೀಡಲಿ? ನನ್ನ ಕ್ಷೇತ್ರದ ಮುಖಂಡರನ್ನು ಗಮನದಲ್ಲಿಟ್ಟುಕೊಂಡು ಆ ರೀತಿ ಮಾತನಾಡಿದ್ದೇನೆಯೇ ಹೊರತು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಯಾವುದೇ ಹೇಳಿಕೆ ನೀಡಿಲ್ಲ, ಅವರ ವಿರುದ್ಧ ಯಾವುದೇ ಬೇಸರವೂ ಇಲ್ಲ’ ಎಂದರು.
ಹಿಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಪಟೇಲ್ ಶಿವರಾಂ ಅವರ ಸೋಲಿಗೆ ನನ್ನನ್ನು ಹೊಣೆ ಮಾಡಿದ್ದರು, ಆ ನಿಟ್ಟಿನಲ್ಲಿ ಸರಿಯಾದ ಮಾಹಿತಿ ನೀಡಿ ಎಂದು ಪ್ರಶ್ನಿಸಿದ್ದು ನಿಜ. ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಕರೆತಂದು ದೊಡ್ಡ ಸಭೆ ನಡೆಸಿ ಮಾಡುವ ಚುನಾವಣೆ ಇದಲ್ಲ, ಇದೇನು ಸಾರ್ವಜನಿಕ ಚುನಾವಣೆಯಲ್ಲ, ಈ ಚುನಾವಣೆಗೆ ಸ್ಥಳೀಯವಾಗಿ ನಾವೇ ಪ್ರಚಾರ ಮಾಡಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು ಎಂಬರ್ಥದಲ್ಲಿ ನಾನು ಮಾತನಾಡಿದ್ದೇನೆಯೇ ಹೊರತು ಪಕ್ಷದ ಹೈಕಮಾಂಡ್ ಬಗ್ಗೆ ಅಸಡ್ಡೆಯಿಂದ ಮಾತನಾಗಿದ್ದಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.