ADVERTISEMENT

ಜಾಮೀನು ಕೋರಿ ಇಂದು ಸೂರಜ್‌ ರೇವಣ್ಣ ಅರ್ಜಿ ಸಾಧ್ಯತೆ

ಹಾಸನದ ಸೆನ್‌ ಠಾಣೆಯಲ್ಲಿ ರಾತ್ರಿಯಿಡೀ ವಿಚಾರಣೆ * ಹಿಮ್ಸ್‌ನಲ್ಲಿ ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 20:18 IST
Last Updated 23 ಜೂನ್ 2024, 20:18 IST
ವಿಧಾನಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಅವರನ್ನು ಆರೋಗ್ಯ ತಪಾಸಣೆಗಾಗಿ ಪೊಲೀಸರು ಭಾನುವಾರ ಹಾಸನದ ಹಿಮ್ಸ್‌ಗೆ ಕರೆತಂದರು
ವಿಧಾನಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಅವರನ್ನು ಆರೋಗ್ಯ ತಪಾಸಣೆಗಾಗಿ ಪೊಲೀಸರು ಭಾನುವಾರ ಹಾಸನದ ಹಿಮ್ಸ್‌ಗೆ ಕರೆತಂದರು   

ಹಾಸನ: ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್ ಸದಸ್ಯ ಸೂರಜ್‌ ರೇವಣ್ಣ ಅವರನ್ನು ಭಾನುವಾರ ಪೊಲೀಸರು ಬಂಧಿಸಿದರು. ಶನಿವಾರ ಸಂಜೆ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಸೆನ್‌ ಠಾಣೆಯಲ್ಲಿ ರಾತ್ರಿಯಿಡೀ ವಿಚಾರಣೆಗೆ ಒಳಪಡಿಸಿದರು. ಸಿಐಡಿಗೆ ತನಿಖೆಯನ್ನು ಒಪ್ಪಿಸಲಾಗಿದೆ.

ಪ್ರಕರಣದ ತನಿಖಾಧಿಕಾರಿ, ಸಕಲೇಶಪುರ ಡಿವೈಎಸ್ಪಿ ಪ್ರಮೋದ್‌ಕುಮಾರ್‌ ಅವರು ಸೆನ್‌ ಠಾಣೆಯಲ್ಲಿ ಡಾ.ಸೂರಜ್‌ ಅವರ ವಿಚಾರಣೆ ನಡೆಸಿದರು. ಸಂತ್ರಸ್ತ ಯುವಕ ಮತ್ತು ಡಾ.ಸೂರಜ್ ಆಪ್ತ ನೀಡಿದ್ದ ದೂರುಗಳ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸಿ ಹೇಳಿಕೆ ಪಡೆದರು.

ರಾತ್ರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಹಾಸನ ಎಸ್ಪಿ ಮೊಹಮ್ಮದ್‌ ಸುಜೀತಾ, ಅಧಿಕಾರಿಗಳಿಗೆ ಸೂಚನೆ ನೀಡಿ ತೆರಳಿದ್ದರು.

ADVERTISEMENT

ಈ ಮಧ್ಯೆ ಸಂತ್ರಸ್ತ ಯುವಕನನ್ನು ವೈದ್ಯಕೀಯ ಪರೀಕ್ಷೆಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇತ್ತ ವಿಚಾರಣೆ ಮುಗಿದಂತೆ ಡಿವೈಎಸ್ಪಿ ಪ್ರಮೋದ್‌ ಕುಮಾರ್‌ ಅವರು ಡಾ.ಸೂರಜ್‌ ಅವರನ್ನು ಬಂಧಿಸಿ, ನಗರ ಪೊಲೀಸ್‌ ಠಾಣೆಗೆ ಕರೆದೊಯ್ದರು.

ಆರೋಗ್ಯ ತಪಾಸಣೆ

ನಂತರ ಡಾ.ಸೂರಜ್‌ ಅವರನ್ನು ನಗರದ ಹಿಮ್ಸ್‌ಗೆ ಕರೆದೊಯ್ದು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಅಲ್ಲಿಂದ ಮತ್ತೆ ನಗರ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಸೂರಜ್‌ ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ಕಾನೂನು ತಜ್ಞರ ಸಲಹೆ ಪಡೆದು ಪೊಲೀಸ್‌ ಅಧಿಕಾರಿಗಳು, ಕೋರ್ಟ್‌ಗೆ ಹಾಜರುಪಡಿಸಲು ಬೆಂಗಳೂರಿಗೆ ಕರೆದೊಯ್ದರು.

ಸೂರಜ್‌ ಪರ ವಕೀಲ ಪೂರ್ಣಚಂದ್ರ ಅವರು ಭಾನುವಾರ ಮಧ್ಯಾಹ್ನ ಪೊಲೀಸ್‌ ಠಾಣೆಗೆ ಭೇಟಿ ನೀಡಿ ತನಿಖಾಧಿಕಾರಿ ಜೊತೆ ಚರ್ಚಿಸಿದರು.

ಬಳಿಕ ಅವರು, ‘ಸೂರಜ್‌ ಅವರನ್ನು ಬಂಧಿಸಿರುವುದರಿಂದ ಅವರ ಭೇಟಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಕೋರ್ಟ್ ಅನುಮತಿ ಪಡೆಯಬೇಕು. ತನಿಖಾಧಿಕಾರಿ ಜೊತೆಗೆ ಚರ್ಚಿಸಿದ್ದೇನೆ. ಸೋಮವಾರ ಬೆಂಗಳೂರಿನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಬಿಗಿ ಭದ್ರತೆ: ಸೂರಜ್‌ರನ್ನು ಬಂಧಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಇಲ್ಲಿನ ಸೆನ್‌ ಠಾಣೆಯ ಎದುರು ಬಿಗಿ ಭದ್ರತೆ ಮಾಡಲಾಗಿತ್ತು. ಕೆಎಸ್‌ಆರ್‌ಪಿ ತುಕಡಿ ಒಳಗೊಂಡಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಸೂರಜ್‌ ಅವರನ್ನು ಬೆಂಗಳೂರಿಗೆ ಕರೆದೊಯ್ಯುವಾಗ ರಸ್ತೆಬದಿಯಲ್ಲಿ ನಿಂತಿದ್ದ ಅವರ ಬೆಂಬಲಿಗರು ಜೈಕಾರ ಕೂಗಿದರು.

ಡಾ.ಸೂರಜ್ ರೇವಣ್ಣ

ಸಾಕ್ಷ್ಯ ನೀಡಲು ಠಾಣೆಗೆ ಹೋಗಿದ್ದ ಸೂರಜ್‌

ಪ್ರಕರಣದ ಸಂತ್ರಸ್ತ ಶನಿವಾರ ಸಂಜೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆಯೇ ಸಂತ್ರಸ್ತನಿಂದ ಹಣ ಬೇಡಿಕೆ ಕುರಿತಾದ ಪ್ರಕರಣದ ಬಗ್ಗೆ ಸಾಕ್ಷ್ಯ ನೀಡಲು ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನಿಗಡದ ತೋಟದ ಮನೆಯಿಂದ ಸೂರಜ್‌ ಹಾಸನದತ್ತ ಬರುತ್ತಿದ್ದರು. ಮಾರ್ಗ ಮಧ್ಯದಲ್ಲಿಯೇ ಪೊಲೀಸರು ಸೂರಜ್‌ ರೇವಣ್ಣ ಅವರ ಕಾರನ್ನು ಹತ್ತಿದ್ದು ಅವರನ್ನು ನೇರವಾಗಿ ಹಾಸನದ ಸೆನ್‌ ಠಾಣೆಗೆ ಕರೆತಂದಿದ್ದರು. ರಾತ್ರಿಯಿಡೀ ಅಲ್ಲಿಯೇ ಅವರ ವಿಚಾರಣೆ ನಡೆಸಲಾಯಿತು.

ಪ್ರಕರಣ ಸಿಐಡಿಗೆ ಹಸ್ತಾಂತರ

ಸೂರಜ್‌ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ. ಪ್ರಕರಣದ ವಿವರಗಳನ್ನು ತನಿಖಾಧಿಕಾರಿ ಖುದ್ದಾಗಿ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳುವಂತೆ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆರ್‌.ಹಿತೇಂದ್ರ ಅವರು ಹಾಸನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.