ಆಲೂರು: ಗೃಹಬಳಕೆ ಎಲ್‌ಪಿಜಿ ಬಳಕೆದಾರರು ಡಿ. 31ರೊಳಗೆ ಇ–ಕೆವೈಸಿ ಮಾಡಿಸುವುದು ಕಡ್ಡಾಯ ಎಂಬ ವದಂತಿ ನಂಬಿದ ಜನರು, ಬುಧವಾರ ಪಟ್ಟಣದ ಗ್ಯಾಸ್ ಏಜೆನ್ಸಿಗಳ ಎದುರು ಸರತಿ ಸಾಲಿನಲ್ಲಿ ನಿಂತಿದ್ದರು.
ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿ ಕಚೇರಿ ಎದುರು ನೂರಾರು ಜನರು ಆಧಾರ್ ಕಾರ್ಡ್ ಹಿಡಿದು ಸರದಿಯಲ್ಲಿ ನಿಂತಿದ್ದರು. ಸರದಿ ಸಾಲು ಬಿಕ್ಕೋಡು ರಸ್ತೆವರೆಗೆ ಆವರಿಸಿತ್ತು. ಜನರನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಮಾಡುವಂತಾಯಿತು.
‘ಇ–ಕೆವೈಸಿ ಪ್ರಕ್ರಿಯೆಗೆ ನಾಲ್ಕು ದಿನಗಳ ಗಡುವು ಬಾಕಿ ಇದೆ. ಅಷ್ಟರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎನ್ನುತ್ತ ಧಾವಂತದಲ್ಲಿಯೇ ಜನರು ನುಗ್ಗುತ್ತಿದ್ದ ದೃಶ್ಯಗಳು ಕಾಣಿಸುತ್ತಿದ್ದವು. ಜನರ ಧಾವಂತಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವದಂತಿಯೇ ಕಾರಣ ಎಂದು ಗ್ಯಾಸ್ ಏಜೆನ್ಸಿ ಪ್ರತಿನಿಧಿಗಳು ಪ್ರತಿಕ್ರಿಯಿಸಿದರು.
‘ಇ–ಕೆವೈಸಿ ಮಾಡಿಸಿದರೆ ಪ್ರತಿ ಸಿಲಿಂಡರ್ ₹ 903ರ ಬದಲಾಗಿ ₹ 500 ಬೆಲೆಗೆ ಸಿಗುತ್ತದೆ. ಪ್ರತಿ ಖಾತೆಗೆ ₹ 400 ಸಬ್ಸಿಡಿ ಮೊತ್ತ ಜಮಾ ಆಗುತ್ತದೆ. ಡಿ. 31ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸಬ್ಸಿಡಿ ರದ್ದುಗೊಳ್ಳುವುದಲ್ಲದೇ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ ಎಂದು ಸುಳ್ಳು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದನ್ನು ನಂಬಿ ಜನರು ಇ–ಕೆವೈಸಿ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಗ್ಯಾಸ್ ಏಜೆನ್ಸಿಯೊಂದರ ಪ್ರತಿನಿಧಿ ಪ್ರತಿಕ್ರಿಯಿಸಿದರು.
‘ಗೃಹಬಳಕೆ ಎಲ್.ಪಿ.ಜಿ. ಬಳಕೆದಾರರಿಗೆ ಇ–ಕೆವೈಸಿ ಮಾಡಿಸಲು ಸೂಚನೆ ಬಂದಿದ್ದು ನಿಜ. ಆದರೆ ಸಬ್ಸಿಡಿ ಉದ್ದೇಶಕ್ಕೆ ಎಂಬ ಮಾಹಿತಿ ಇಲ್ಲ. ಇದಕ್ಕಾಗಿ ನಿರ್ದಿಷ್ಟ ಅವಧಿಯನ್ನೂ ನಿಗದಿಪಡಿಸಿಲ್ಲ. ಜನರು ತರಾತುರಿಯಲ್ಲಿ ಇ–ಕೆವೈಸಿ ಮಾಡಿಸಬೇಕೆಂದೂ ಇಲ್ಲ. ಈಗಾಗಲೇ ನಮ್ಮ ಸಿಬ್ಬಂದಿಗೆ ಇ-ಕೆವೈಸಿ ಬಗ್ಗೆ ತರಬೇತಿ ನೀಡಲಾಗಿದೆ. ಗ್ರಾಹಕರು ಅತಂಕಪಡುವ ಅವಶ್ಯಕತೆ ಇಲ್ಲ. ದೂರದೂರಿಂದ ತಮ್ಮ ಕೆಲಸ ಕಾರ್ಯ ಬಿಟ್ಟು ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲುವ ಅವಶ್ಯಕತೆ ಇಲ್ಲ. ನಮ್ಮ ಸಿಬ್ಬಂದಿ ಮನೆಗಳಿಗೆ ಸಿಲಿಂಡರ್ ಸರಬರಾಜು ಮಾಡಲು ಬಂದ ಸಂದರ್ಭದಲ್ಲಿ ಅವರಿಗೆ ಮಾಹಿತಿ ತಿಳಿಸಿದರೇ ಸಾಕು . ಸ್ಥಳದಲ್ಲಿಯೇ ಇ-ಕೆವೈಸಿ ಮಾಡಿಕೊಡಲಿದ್ದಾರೆ’ ಎಂದು ವಿಜಯಲಕ್ಷ್ಮೀ ಗ್ಯಾಸ್ ಏಜೆನ್ಸಿಯ ಮಾಲೀಕ ಮಂಜುನಾಥ್ ತಿಳಿಸಿದರು.
ಡಿ.31ರ ಗಡುವು ಇಲ್ಲ
‘ಎಲ್‌ಪಿಜಿ ಬಳಕೆದಾರರು ಇ–ಕೆವೈಸಿ ಮಾಡಿಸಲು ಡಿ. 31ರ ಗಡುವು ನಿಗದಿಪಡಿಸಿಲ್ಲ. ಜನರು ಅನಗತ್ಯ ಸಂದೇಶ ನಂಬಿ ಗ್ಯಾಸ್ ಏಜೆನ್ಸಿಗಳ ಎದುರು ಸರತಿಯಲ್ಲಿ ನಿಂತು ಇ–ಕೆವೈಸಿ ಮಾಡಿಸುವ ಅಗತ್ಯವಿಲ್ಲ. ತೊಂದರೆಗಳಿದ್ದ ಪ್ರದೇಶ ಹೊರತುಪಡಿಸಿ ಉಳಿದ ಕಡೆ ಮನೆ ಮನೆಗೆ ಸಿಲಿಂಡರ್ ನೀಡುವ ವೇಳೆಯಲ್ಲಿಯೂ ಇ–ಕೆವೈಸಿ ಮಾಡಿಸುವ ಕುರಿತು ಸೂಚನೆ ನೀಡಲಾಗಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಹಾರ ನಿರೀಕ್ಷಕ ಮೋಹನ್ ಕುಮಾರ್ ತಿಳಿಸಿದ್ದಾರೆ.
ಗಂಡಸಿಯಲ್ಲೂ ಸರದಿ ಸಾಲು ಗಂಡಸಿ
ಡಿ. 31 ಒಳಗೆ ಸಮೀಪದ ಗ್ಯಾಸ್ ಏಜೆನ್ಸಿಯಲ್ಲಿ ಇ - ಕೆವೈಸಿ ಮಾಡಿಸದಿದ್ದರೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ ₹ 903 ಬದಲು ₹1400 ಆಗಲಿದೆ. ಜ.1 ರಿಂದ ಇ - ಕೆವೈಸಿ ಮಾಡಿಸಿ ಗ್ಯಾಸ್ ಇರುವ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಸಹಾಯಧನ ಸಿಗಲಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ ಗ್ರಾಹಕರು ಇಲ್ಲಿನ ಗ್ಯಾಸ್ ಏಜೆನ್ಸಿ ಎದುರು ನಿತ್ಯ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಕೆಲಸ ಕಾರ್ಯಗಳು ಬಿಟ್ಟು ಒಂದು ವಾರದಿಂದ ನಿತ್ಯ ಬೆಳಗಿನ ಜಾವ 5 ಗಂಟೆಯಿಂದಲೇ ಗಂಡಸಿಯ ಶ್ರೀ ಸಾಯಿ ಗ್ಯಾಸ್ ಏಜೆನ್ಸಿಯ ಬಳಿ ಸರತಿ ಸಾಲಿನಲ್ಲಿ ಜನ ನಿಲ್ಲುತ್ತಿದ್ದಾರೆ. ‘ಅನಿಲ ಸಂಪರ್ಕ ಹೊಂದಿರುವ ಎಲ್ಲ ಗ್ರಾಹಕರಿಂದ ಇ - ಕೆವೈಸಿ ಮಾಡಿಸಲು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಸೂಚಿಸಿದೆ. ಕೊನೆಯ ದಿನಾಂಕ ನಿಗದಿಯಾಗಿಲ್ಲ ಸಹಾಯಧನದ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿ ಬಂದಿಲ್ಲ’ ಎಂದು ಗ್ಯಾಸ್ ಏಜೆನ್ಸಿಯವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.