ADVERTISEMENT

ಅರಕಲಗೂಡು | ಮಲ್ಲಿಪಟ್ಟಣ ಏತನೀರಾವರಿ ಯೋಜನೆಗೆ ಗ್ರಹಣ

ಪ್ರಾರಂಭವಾಗಿ ಐದು ವರ್ಷ ಕಳೆದರೂ ಮುಗಿಯದ ಕಾಮಗಾರಿ: ಜಮೀನಿಗೆ ನೀರಿಲ್ಲದೇ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:24 IST
Last Updated 12 ಜೂನ್ 2024, 6:24 IST
ಹೇಮಾವತಿ ನದಿ ಬಳಿ ಪೈಪ್ ಲೈನ್ ಅಳವಡಿಸಲು ತೆಗೆದಿರುವ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಹೇಮಾವತಿ ನದಿ ಬಳಿ ಪೈಪ್ ಲೈನ್ ಅಳವಡಿಸಲು ತೆಗೆದಿರುವ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಅರಕಲಗೂಡು: ತಾಲ್ಲೂಕಿನ ಮಹತ್ವಾಕಾಂಕ್ಷೆಯ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆಗೆ ಗ್ರಹಣ ಹಿಡಿದಿದ್ದು, ನೀರಿಗಾಗಿ ರೈತರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಕಟ್ಟೇಪುರದ ಬಳಿ, ಹೇಮಾವತಿ ನದಿಯಿಂದ ನೀರನ್ನು ಎತ್ತಿ ತಾಲ್ಲೂಕಿನ ಕಸಬಾ, ಮಲ್ಲಿಪಟ್ಟಣ, ದೊಡ್ಡಮಗ್ಗೆ, ಕೊಣನೂರು ಹೋಬಳಿಯ ಗ್ರಾಮಗಳ 150 ಕೆರೆಗಳು ಹಾಗೂ 50 ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.

5 ವರ್ಷಗಳ ಹಿಂದೆ ಅಂದಿನ ಶಾಸಕ ಎ.ಟಿ.ರಾಮಸ್ವಾಮಿ ಅವರ ಪ್ರಯತ್ನದ ಫಲವಾಗಿ ಸರ್ಕಾರ ₹190 ಕೋಟಿ ಮೊತ್ತದ ಕಟ್ಟೇಪುರ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಗುತ್ತಿಗೆ ಕರಾರಿನ ಪ್ರಕಾರ ಟೆಂಡರ್ ಪಡೆದ ಗುತ್ತಿಗೆದಾರ 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಿ, ಕೆರೆ, ಕಟ್ಟೆಗಳಿಗೆ ನೀರು ಹರಿಸಬೇಕಿತ್ತು. ಆದರೆ, ಇಂದಿಗೂ ಕಾಮಗಾರಿ ಕುಂಟುತ್ತ ಸಾಗಿದೆ.

ADVERTISEMENT

ಕಟ್ಟೇಪುರದ ಬಳಿ ಹೇಮಾವತಿ ನದಿ ಬಳಿ ಜಾಕ್‌ವೆಲ್ ನಿರ್ಮಿಸಿ, ಮುಸವತ್ತೂರು ಬಳಿ ಬೃಹತ್ ನೀರಿನ ತೊಟ್ಟಿ ನಿರ್ಮಿಸಬೇಕು. ನದಿಯಿಂದ 10 ಕಿ.ಮೀ ದೂರವರೆಗೆ ರೈಸಿಂಗ್ ಮೈನ್ ಪೈಪ್ ಲೈನ್ ಅಳವಡಿಸಿ, ತೊಟ್ಟಿಗೆ ನೀರು ತುಂಬಿಸಬೇಕು. ತೊಟ್ಟಿಗೆ ತುಂಬಿದ ನೀರು 70 ಕಿ.ಮೀ. ದೂರದವರೆಗೆ ಕೆರೆ ಕಟ್ಟೆಗಳಿಗೆ ಹರಿಯಲು ಕೊಳವೆ ಅಳವಡಿಸಬೇಕು. ಆ ಮೂಲಕ ಕೆರೆ ಕಟ್ಟೆಗಳಿಗೆ ತುಂಬಿದ ನೀರನ್ನು, ರೈತರ ಜಮೀನುಗಳಿಗೆ ಹರಿಸುವುದು ಈ ಯೋಜನೆಯ ಉದ್ದೇಶ. ಜೀವ ಸೆಲೆ ಇಲ್ಲದೆ ಬರಡಾಗಿರುವ ಭೂಮಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.

ಆದರೆ ಯೋಜನೆ ಪ್ರಾರಂಭವಾಗಿ ಐದು ವರ್ಷ ಗತಿಸಿದರೂ, ಇಂದಿಗೂ ಹೇಮಾವತಿ ನದಿ ಬಳಿ ಜಾಕ್‌ವೆಲ್ ನಿರ್ಮಿಸುವ ಕಾಮಗಾರಿ ಸಹ ಮುಗಿದಿಲ್ಲ. ಹೇಮಾವತಿ ನದಿಯಿಂದ ನೀರಿನ ತೊಟ್ಟಿವರೆಗೆ 5 ಕಿ.ಮೀ. ಮಾತ್ರ ರೈಸಿಂಗ್ ಮೈನ್ ಪೈಪ್ ಅಳವಡಿಸುವ ಕೆಲಸ ನಡೆಸಿದ್ದು, ಇನ್ನೂ 4 ಕಿ.ಮೀ ಬಾಕಿ ಉಳಿದಿದೆ. ಮುಸವತ್ತೂರು ಬಳಿ ನೀರಿನ ತೊಟ್ಟಿ ನಿರ್ಮಾಣದ ಕಾಮಗಾರಿ ನನೆಗುದಿಗೆ ಬಿದ್ದಿದೆ.

ಗುಣಮಟ್ಟ ಕಳೆದುಕೊಳ್ಳುತ್ತಿರುವ ಪೈಪ್‌ಗಳು: ನೀರಾವರಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆಯಾದ ನಂತರ ಕೆರೆ, ಕಟ್ಟೆಗಳಿಗೆ ಅಳವಡಿಸಲು ಬೃಹತ್ ಗಾತ್ರದ ನೂರಾರು ಕೊಳವೆಗಳನ್ನು ಮುಸವತ್ತೂರು ಬಳಿ ದಾಸ್ತಾನು ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ಐದು ವರ್ಷಗಳಿಂದ ಬಿದ್ದಿರುವ ಪೈಪ್‌ಗಳು ತುಕ್ಕು ಹಿಡಿದಿದ್ದು, ಗುಣಮಟ್ಟ ಕಳೆದುಕೊಳ್ಳುತ್ತಿವೆ.

ಇತ್ತೀಚೆಗಷ್ಟೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದು ಕಾಮಗಾರಿ ಚುರುಕುಗೊಳಿಸಲಾಗಿದೆ. ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ವರ್ಷ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು.
ಎ.ಮಂಜು, ಶಾಸಕ, ಅರಕಲಗೂಡು ಕ್ಷೇತ್ರ

ಸಮುದ್ರದ ನಂಟು ಉಪ್ಪಿಗೆ ಬರ: ತಾಲ್ಲೂಕಿನಲ್ಲಿ ಎರಡು ಜೀವ ನದಿಗಳು ಹಾದು ಹೋಗಿವೆ. ದಕ್ಷಿಣಕ್ಕೆ ಕಾವೇರಿ ಹಾಗೂ ಉತ್ತರಕ್ಕೆ ಹೇಮಾವತಿ ಹೊಳೆ ಹರಿಯುತ್ತಿವೆ. ರೈತರ ಅಚ್ಚುಕಟ್ಟು ಜಮೀನು ವ್ಯಾಪ್ತಿಯಲ್ಲಿ ಸಾವಿರಾರು ಕೆರೆ, ಕಟ್ಟೆಗಳು ನೀರಿನ ಸೆಲೆ ಇಲ್ಲದೆ ಭಣಗುಡುತ್ತಿವೆ. ಹಲವಾರು ದಶಕಗಳು ಕಳೆದರೂ ನೀರಾವರಿ ಸೌಲಭ್ಯ ಇಲ್ಲದೇ ಈ ಭಾಗದ ರೈತರ ಜಮೀನುಗಳಿಗೆ ನೀರು ಇಲ್ಲದಂತಾಗಿದೆ. ಸಮುದ್ರದ ನಂಟು ಉಪ್ಪಿಗೆ ಬರ ಎನ್ನುವಂತಾಗಿದೆ.

ಮಳೆಗಾಲದಲ್ಲಷ್ಟೆ ಕೆರೆ, ಕಟ್ಟೆಗಳಿಗೆ ಒಂದಿಷ್ಟು ನೀರು ಹರಿಯುತ್ತಿದೆ. ಬೇಸಿಗೆ ಶುರುವಾದ ಬಳಿಕ ಕೆರೆ, ಕಟ್ಟೆಗಳ ಒಡಲು ಬರಿದಾಗುತ್ತಿದ್ದು, ಜನ– ಜಾನುವಾರುಗಳಿಗೆ ಕುಡಿಯಲು ಕೂಡ ನೀರಿಲ್ಲದೇ ಪರಿತಪಿಸುವುದು ತಪ್ಪಿಲ್ಲ. ಎರಡು ಜೀವ ನದಿಗಳನ್ನು ಹೊಂದಿದ್ದರೂ ಕೃಷಿ ಜಮೀನುಗಳಿಗೆ ನೀರು ಹರಿಯದ ದುಸ್ಥಿತಿ ತಲೆದೋರಿದೆ.

‘ನನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಯ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಿ, ಕೆರೆ, ಕಟ್ಟೆಗಳನ್ನು ತುಂಬಿಸಿ ಜಮೀನುಗಳಿಗೆ ನೀರು ಹರಿಸಬೇಕು. ಯೋಜನೆಗಾಗಿ ಖರೀದಿಸಿರುವ ಪೈಪ್‌ಗಳ ಗುಣಮಟ್ಟ ಪರಿಶೀಲಿಸಿ ಉತ್ತಮವಾದುದನ್ನು ಬಳಕೆ ಮಾಡಿಕೊಳ್ಳಬೇಕು. ಕೂಡಲೇ ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಿ, ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅನ್ನದಾತರ ಆಗ್ರಹವಾಗಿದೆ.

ಅರಕಲಗೂಡು ತಾಲ್ಲೂಕಿನ ಕಟ್ಟೇಪುರ ಏತ ನೀರಾವರಿ ಯೋಜನೆಗೆ ಹೇಮಾವತಿ ನದಿ ಬಳಿ ನಿರ್ಮಿಸುತ್ತಿರುವ ಜಾಕ್ ವೆಲ್ ಕಾಮಗಾರಿ ಕುಂಟುತ್ತಾ ಸಾಗಿರುವುದು

ಸಿಎಂಗೆ ಮನವಿ

‘ತಾಲ್ಲೂಕಿನಲ್ಲಿ ಎರಡು ಜೀವ ನದಿಗಳು ಹರಿಯುತ್ತಿದ್ದರೂ ಸಾವಿರಾರು ಎಕರೆ ಅಚ್ಚುಕಟ್ಟು ಜಮೀನು ನೀರಾವರಿ ಸೌಕರ್ಯದಿಂದ ವಂಚಿತವಾಗಿದೆ. ನನೆಗುದಿಗೆ ಬಿದ್ದಿದ್ದ ಕಟ್ಟೇಪುರ ಏತ ನೀರಾವರಿ ಯೋಜನೆ ಹಾಗೂ ರಂಗೇನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಎಂ.ಟಿ.ಕೃಷ್ಣೇಗೌಡ ತಿಳಿಸಿದ್ದಾರೆ. ‘ಕಟ್ಟೇಪುರ ಏತ ನೀರಾವರಿ ಯೋಜನೆ ಮೊದಲ ಹಂತದ ಕಾಮಗಾರಿಗೆ ₹120 ಕೋಟಿ ಮಂಜೂರಾಗಿದ್ದು ಕೆಲಸ ನಡೆದ ಬಳಿಕ ಎರಡನೇ ಹಂತದ ಕಾಮಗಾರಿಗೆ ₹ 70 ಕೋಟಿ ಮಂಜೂರು ಮಾಡುವ ಭರವಸೆ ದೊರೆತಿದೆ. ಅಧಿಕಾರಿಗಳು ಎಚ್ಚೆತ್ತು ಕಾಮಗಾರಿ ಬೇಗ ಪೂರ್ಣಗೊಳಿಸಿ ಕೆರೆ ಕಟ್ಟೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ಸದ್ಯಕ್ಕೆ ಶೇ 50ರಷ್ಟು ಕಾಮಗಾರಿ ಆಗಿದ್ದು ಜಾಕ್‌ವೆಲ್ ಮುಕ್ತಾಯಗೊಂಡ ನಂತರ ಉಳಿಕೆ ನಾಲ್ಕೂವರೆ ಕಿ.ಮೀ. ರೈಸಿಂಗ್ ಮೈನ್‌ ಪೈಪ್ ಅಳವಡಿಸಿ ಉಳಿಕೆ ಕಾಮಗಾರಿಕೆ ನಡೆಸಲಾಗುವುದು.
ಪುಟ್ಟಸ್ವಾಮಿ ಹಾರಂಗಿ, ಪುನರ್ವಸತಿ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್

ಫಲಾನುಭವಿಗಳಿಗೆ ಸಿಗದ ಪರಿಹಾರ

ಬಹು ನಿರೀಕ್ಷಿತ ನೀರಾವರಿ ಯೋಜನೆಗೆ ಭೂಮಿ ಸ್ವಾಧೀನ ಪಡಿಸಿಕೊಂಡ ಫಲಾನುಭವಿ ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗಿದ್ದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ. ‘ಭೂಸ್ವಾಧೀನ ಪಡೆದ ರೈತರಿಗೆ ಪರಿಹಾರ ನೀಡಲು ಅಗತ್ಯ ಹಣವನ್ನು ಯೋಜನೆಯಲ್ಲಿ ಮೀಸಲಿರಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಫಲಾನುಭವಿ ರೈತರ ದಾಖಲೆಗಳನ್ನು ಸಿದ್ಧಪಡಿಸಿ ಕೊಡುವ ಕಾರ್ಯ ನಡೆಸಿಲ್ಲ. ಯೋಜನೆ ಅನುಷ್ಠಾನಕ್ಕಾಗಿ 12 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಭೂಮಿ ಕಳೆದುಕೊಂಡ 30 ಮಂದಿ ಫಲಾನುಭವಿ ರೈತರಿಗೆ ನಿಯಮಾನುಸಾರ ಸಿಗಬೇಕಾದ ಪರಿಹಾರ ಇನ್ನೂ ಮರೀಚಿಕೆಯಾಗಿದೆ’ ಎಂದು ರೈತರು ಹೇಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.