ADVERTISEMENT

ಅರಕಲಗೂಡು: ಮದುವೆ ಖರ್ಚಿನಲ್ಲಿ ಮಕ್ಕಳಿಗೆ ನೀರಿನ ಯಂತ್ರ ಕೊಡುಗೆ ನೀಡಿದ ಎಂಜಿನಿಯರ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:14 IST
Last Updated 12 ನವೆಂಬರ್ 2024, 16:14 IST
ಅರಕಲಗೂಡು ತಾಲ್ಲೂಕಿನ ಕಸಬಾ ಸರ್ಕಾರಿ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಕೊಡುಗೆಯಾಗಿ ನೀಡಿದರು.
ಅರಕಲಗೂಡು ತಾಲ್ಲೂಕಿನ ಕಸಬಾ ಸರ್ಕಾರಿ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಕೊಡುಗೆಯಾಗಿ ನೀಡಿದರು.   

ಅರಕಲಗೂಡು: ಸರಳ ವಿವಾಹ ಆಗುವ ಮೂಲಕ ಮದುವೆಗೆ ಖರ್ಚು ಮಾಡಬೇಕಿದ್ದ ಹಣವನ್ನು ಉಳಿಸಿರುವ ಇಲ್ಲಿನ ಎಂಜಿನಿಯರ್‌ ಒಬ್ಬರು, ಅದೇ ಹಣದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ತಾಲ್ಲೂಕಿನ ಹೊನ್ನವಳ್ಳಿ ಬಿದುರುಮೆಳೆ ಕೊಪ್ಪಲು ಗ್ರಾಮದ ದೇವರಾಜೇಗೌಡ– ರತ್ನಮ್ಮ ದಂಪತಿ ಪುತ್ರ ಶಿವಕುಮಾರ್ ಎಂಜಿನಿಯರ್ ಆಗಿದ್ದು, ಮಂಡ್ಯ ಜಿಲ್ಲೆ ಕೆರೆಗೋಡು ಹಲಗೆರೆ ಗ್ರಾಮದ ಸಂಗೀತಾ ಅವರೊಂದಿಗೆ ನ.11 ರಂದು ಸರಳ ವಿವಾಹವಾದರು.

ತಮ್ಮ ವಿವಾಹದ ನೆನಪಿಗಾಗಿ ಕಸಬಾ ಹೋಬಳಿಯ 26 ಸರ್ಕಾರಿ ಶಾಲೆಗಳಿಗೆ ₹ 5 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ADVERTISEMENT

ರೈತ ಸಂಘದ ಹಿರಿಯ ಹೋರಾಟಗಾರರಾಗಿದ್ದ ದಿವಂಗತ ಹೊ.ತಿ. ಹುಚ್ಚಪ್ಪ ಅವರ ಮೊಮ್ಮಗ ಶಿವಕುಮಾರ್, ತಮ್ಮ ತಾತ ದತ್ತು ಪಡೆದಿರುವ ಹೊನ್ನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ. 9 ರಂದು ನಡೆದ ಕಾರ್ಯಕ್ರಮದಲ್ಲಿ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ‘ಮಕ್ಕಳ ಆರೋಗ್ಯ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ತಮ್ಮ ವಿವಾಹದ ನೆನಪಿಗಾಗಿ 26 ಶಾಲೆಗಳಿಗೆ ಕುಡಿಯುವ ನೀರಿನ ಯಂತ್ರವನ್ನು ಕೊಡುಗೆಯಾಗಿ ನೀಡುತ್ತಿರುವ ಶಿವಕುಮಾರ್ ಅವರು ಪುಣ್ಯದ ಕಾರ್ಯ ಮಾಡುತ್ತಿದ್ದಾರೆ. ಇವರ ವೈವಾಹಿಕ ಜೀವನ ಸುಖಕರವಾಗಿರಲಿ’ ಎಂದು ಹಾರೈಸಿದರು.

ಹೊ.ತಿ. ಹುಚ್ಚಪ್ಪ ಅವರ ಪುತ್ರ ಖಂಡೇಶ್ವರ ಕುಮಾರ್ ಮಾತನಾಡಿ, ‘ತಮ್ಮ ತಂದೆ ರೈತಸಂಘದ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದು, ತಮ್ಮ ಪುತ್ರರಿಗೆ ಸರಳ ವಿವಾಹ ನಡೆಸಿ ಆದರ್ಶ ಮೆರೆದಿದ್ದರು. ಇವರ ಮೊಮ್ಮಗ ಶಿವಕುಮಾರ್ ಇದೇ ಹಾದಿಯಲ್ಲಿ ನಡೆದು ಸರಳ ವಿವಾಹ ಆಗುತ್ತಿದ್ದಾರೆ. ಮದುವೆಗಾಗಿ ದುಂದುವೆಚ್ಚ ಮಾಡದೇ ಅದೇ ಹಣದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಅನುಕೂಲ ಆಗುವಂತೆ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಮೆಚ್ಚುಗೆಯ ಸಂಗತಿ’ ಎಂದರು.

ಶಿಕ್ಷಣ ಸಂಯೋಜಕ ಶಿವಪ್ರಕಾಶ್, ಸಿಆರ್‌ಪಿ ಬಾಲು, ನಯಾಜ್, ಮುಖ್ಯ ಶಿಕ್ಷಕಿ ಲಿಂಗಮ್ಮ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಸರೋಜಮ್ಮ, ರತ್ನಮ್ಮ, ದೇವರಾಜೇಗೌಡ, ಕೆಡಿಪಿ ಮಾಜಿ ಸದಸ್ಯ ಎಚ್.ಎಚ್. ಜನಾರ್ದನ್, ಪುಷ್ಪಾ, ಶಿವಕುಮಾರ್, ಶಿಕ್ಷಕರಾದ ಲತಾಮಣಿ, ಲೀಲಾ, ನಾಗವೇಣಿ, ಲೋಕೇಶ್ ಇದ್ದರು.

₹5 ಲಕ್ಷ ವೆಚ್ಚದಲ್ಲಿ 26 ಶಾಲೆಗಳಿಗೆ ಯಂತ್ರಗಳ ಕೊಡುಗೆ ಶಾಲಾ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಎಂಜಿನಿಯರ್‌ ಕ್ರಮ
ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ನೆರವಿಗೆ ಕೈಜೋಡಿಸುತ್ತಿರುವ ಇವರ ಸೇವೆ ಬದುಕಿನುದ್ದಕ್ಕೂ ಎಲ್ಲರಿಗೂ ದೊರಕುವಂತಾಗಲಿ
ಕೆ.ಪಿ. ನಾರಾಯಣ್ ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.