ADVERTISEMENT

ಹತ್ತು ಕೇಸ್‌ ಹಾಕಿದರೂ ಪಕ್ಷ ಸಂಘಟನೆ ಬಿಡಲ್ಲ: ಶಾಸಕ ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 16:12 IST
Last Updated 17 ಸೆಪ್ಟೆಂಬರ್ 2024, 16:12 IST
ಸಕಲೇಶಪುರದಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಸಮ್ಮುಖದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ನಡೆಯಿತು
ಸಕಲೇಶಪುರದಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಸಮ್ಮುಖದಲ್ಲಿ ಜೆಡಿಎಸ್ ಸದಸ್ಯತ್ವ ಅಭಿಯಾನ ನಡೆಯಿತು   

ಸಕಲೇಶಪುರ: ‘ನನ್ನ ಮೇಲೆ ಒಂದಲ್ಲ ಹತ್ತು ಕೇಸ್‌ ಹಾಕಿದರೂ ಪಕ್ಷ ಸಂಘಟಿಸುವ ಕೆಲಸದಿಂದ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ’ ಎಂದು ಶಾಸಕ ಎಚ್.ಡಿ ರೇವಣ್ಣ ಹೇಳಿದರು.

ಪಟ್ಟಣದ ಲಯನ್ಸ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದರು.

‘ಕಾಂಗ್ರೆಸ್‌ ಪಕ್ಷದ ಆಡಳಿತದಲ್ಲಿ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಹಣ ನೀಡುತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಕಾಂಗ್ರೆಸ್‌ ಸರ್ಕಾರವು ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮ ಕುಟುಂಬ ಹಾಗೂ ಪಕ್ಷವನ್ನು ತುಳಿಯಲು ಪ್ರಯತ್ನಿಸುತ್ತಿದೆ. ಆದರೆ, ಜೆಡಿಎಸ್‌ ಕಾರ್ಯಕರ್ತರಿಗೆ ಇದನ್ನೆಲ್ಲಾ ಎದುರಿಸುವ ಶಕ್ತಿ ಇದೆ. ದೇವೇಗೌಡರು ಅಧಿಕಾರ ಇಲ್ಲದಿದ್ದರೂ ಎದೆಗುಂದದೆ ಈ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಸಾಮಾಜಿಕ ನ್ಯಾಯ ಒದಗಿಸುವ ಸಾಮರ್ಥ್ಯ ಇರುವುದು ಜೆಡಿಎಸ್ ಪಕ್ಷಕ್ಕೆ ಮಾತ್ರ. ಯಾರೊಂದಿಗೂ ಮೈತ್ರಿಯಾದರೂ ತನ್ನ ಜಾತ್ಯತೀತ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿಲ್ಲ’ ಎಂದರು.

‘ಪಕ್ಷವನ್ನು ಸ್ಥಳೀಯವಾಗಿ ಬೂತ್ ಮಟ್ಟದಿಂದಲೇ ಕಟ್ಟಿ ಬೆಳೆಸಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದು, ಮುಂದಿನ ಒಂದು ತಿಂಗಳಿನೊಳಗೆ ಜಿಲ್ಲೆ ಹಾಗೂ ತಾಲ್ಲೂಕಿನ ಎಲ್ಲ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು. ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿ ಪಕ್ಷಕ್ಕೆ ನವ ಚೈತನ್ಯ ನೀಡಲಾಗುವುದು. ಜೆಡಿಎಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿ, ವರ್ಗದವರು ಸೇರಿದಂತೆ ರಾಜ್ಯದ ಅನೇಕ ಸಣ್ಣ ಪುಟ್ಟ ಜಾತಿಯವರನ್ನು ಗುರುತಿಸಿ ಅಧಿಕಾರ ನೀಡಲಾಗಿದೆ’ ಎಂದರು.

ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ‘ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೆ. ಆದರೆ, ನಮ್ಮ ಪಕ್ಷದ ಕೆಲ ಮುಖಂಡರು ಹಾಗೂ ಕಾರ್ಯಕರ್ತರು ನಾವು ಮಾಡಿರುವ ಕೆಲಸವನ್ನು ಕ್ಷೇತ್ರದ ಜನರಿಗೆ ತಿಳಿಸುವಲ್ಲಿ ವಿಫಲವಾಗಿದ್ದರಿಂದ ಕಳೆದ ಚುನಾವಣೆಯಲ್ಲಿ ಸೋಲುವಂತಾಯಿತು. ಕ್ಷೇತ್ರದಲ್ಲಿ ಎಲ್ಲ ರಸ್ತೆಗಳ ಅಭಿವೃದ್ಧಿಯಾಗಿದೆ. ಸರ್ಕಾರಿ ಕಚೇರಿಗಳಲ್ಲಿ ತ್ವರಿತವಾಗಿ ಕೆಲಸ ಕಾರ್ಯಗಳು ಆಗುತ್ತಿದ್ದವು. ಶಾಲಾ ಕಾಲೇಜುಗಳ ಕಟ್ಟಡ, ಬಸ್‌ ನಿಲ್ದಾಣ, ಪುರಸಭಾ ವ್ಯಾಪ್ತಿಯ ರಸ್ತೆಗಳು, ಚರಂಡಿಗಳು ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಲಾಗಿತ್ತು. ಕ್ಷೇತ್ರದ ಜನರಿಗೆ ಈಗಾಗಲೇ ಇದೆಲ್ಲವೂ ತಿಳಿದಿದೆ. ಇನ್ನೇನಿದ್ದರೂ ಪಕ್ಷವನ್ನು ತಳಮಟ್ಟದಿಂದ ಪುನಃ ಸಂಘಟಿಸಿ, ಹಿಂದಿನ ಚುನಾವಣೆಯಲ್ಲಿ ಆಗಿದ್ದಂತಹ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸುಪ್ರದೀಪ್ತ ಯಜಮಾನ್‌, ಮಾಜಿ ಸದಸ್ಯರಾದ ಚಂಚಲ ಕುಮಾರಸ್ವಾಮಿ, ಕೆ.ಎಸ್‌. ಕುಮಾರಸ್ವಾಮಿ, ಉಜ್ಮಾ ರಿಜ್ವಿ, ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್‌ಕುಮಾರ್, ಉಪಾಧ್ಯಕ್ಷೆ ಝರೀನಾ, ಪುರಸಭಾ ಸದಸ್ಯ ಯಾದ್ ಗಾರ್ ಇಬ್ರಾಹಿಂ, ಪಕ್ಷದ ಮುಖಂಡರಾದ ಕೊತ್ನಳ್ಳಿ ತಮ್ಮಣ್ಣ ಗೌಡ, ಸಚ್ಚಿನ್ ಪ್ರಸಾದ್, ಯುವ ಜನತಾದಳದ ಅಧ್ಯಕ್ಷ ಸ.ಬ. ಭಾಸ್ಕರ್, ಜಾತಳ್ಳಿ ಪುಟ್ಟಸ್ವಾಮಿಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.