ಅರಕಲಗೂಡು: ಜಾನುವಾರು ದೇವರು ಎನಿಸಿರುವ ತಾಲ್ಲೂಕಿನ ಕಣಿವೆ ಬಸವೇಶ್ವರ ಜಾತ್ರಾ ಮಹೋತ್ಸವ ಡಿ.11 ರಂದು ನಡೆಯಲಿದೆ.
ಪಟ್ಟಣದಿಂದ ಸುಮಾರು 5 ಕಿ.ಮೀ. ದೂರದ ಕಣಿವೆ ಕಾಡಿನಲ್ಲಿರುವ ಬಸವೇಶ್ವರ ದೇವಾಲಯ ಕಣಿವೆ ಬಸಪ್ಪ ಎಂದೇ ಖ್ಯಾತಿ ಹೊಂದಿದ್ದು, ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಇಲ್ಲಿ ಜಾತ್ರೆ ನಡೆಯುತ್ತದೆ.
ಕೃಷಿ ಕಾರ್ಯಗಳು ಮುಗಿದ ಬಳಿಕ ನಡೆಯುವ ತಾಲ್ಲೂಕಿನ ಮೊದಲ ಜಾತ್ರೆಯೂ ಇದಾಗಿದೆ. ಹಿಂದೆ ಇದು ಜಾನುವಾರು ಜಾತ್ರೆ ಎಂದು ಪ್ರಸಿದ್ದಿ ಹೊಂದಿತ್ತು. ಅಪಾರ ಸಂಖ್ಯೆಯಲ್ಲಿ ಜಾನುವಾರುಗಳು ಸೇರುತ್ತಿದ್ದವು. ಹೆಚ್ಚಿನ ವಹಿವಾಟು ನಡೆಯದಿದ್ದರೂ ಇಲ್ಲಿನ ಬಸವೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ರಾಮನಾಥ ಪುರ ಸೇರಿದಂತೆ ಮುಂದಿನ ಜಾತ್ರೆಗಳಿಗೆ ಜಾನುವಾರುಗಳನ್ನು ರೈತರು ತೆಗೆದುಕೊಂಡು ಹೋಗುತ್ತಿದ್ದುದು ವಾಡಿಕೆಯಾಗಿತ್ತು. ಈಗ ಜಾನುವಾರುಗಳು ಸೇರುತ್ತಿಲ್ಲವಾದರೂ ಶಾಸ್ತ್ರಕ್ಕೆ ಎಂಬಂತೆ ನಾಲ್ಕಾರು ಜೊತೆ ಜಾನುವಾರುಗಳನ್ನು ಸೇರಿಸಲಾಗುತ್ತದೆ.
ಕಣಿವೆ ಬಸವೇಶ್ವರ ಜಾನುವಾರು ದೇವರು ಎಂದೇ ಖ್ಯಾತಿ ಪಡೆದಿದ್ದಾನೆ. ಜಾನುವಾರುಗಳ ರೋಗ, ರುಜಿನಗಳಿಗೆ, ಕರು ಹಾಕುವಲ್ಲಿ ತೊಂದರೆಯಾದರೆ, ರೈತರು ಇಲ್ಲಿಗೆ ಹರಕೆ ಹೇಳಿಕೊಳ್ಳುತ್ತಾರೆ. ತಾಲ್ಲೂಕಿನ ಬಹಳಷ್ಟು ರೈತರ ಮನೆಗಳಲ್ಲಿ ಹಸುಗಳು ಕರು ಹಾಕಿದರೆ ಮೊದಲು ಕರೆದ ಹಾಲು ಇಲ್ಲವೇ ಹಾಲಿನಲ್ಲಿ ಗಿಣ್ಣು ತಯಾರಿಸಿ, ರೊಟ್ಟಿ ಗಿಣ್ಣನ್ನು ಬಸವಣ್ಣನಿಗೆ ಅರ್ಪಿಸುವುದು ಪದ್ಧತಿಯಾಗಿದೆ.
ಜಾನುವಾರುಗಳು ವನ್ಯ ಮೃಗಗಳ ಹಾವಳಿಗೆ ಬಲಿಯಾಗದಂತೆ ಹಾಗೂ ರೋಗ ರುಜಿನಗಳು ಬರದಂತೆ ಬಸವಣ್ಣ ಕಾಪಾಡಿ ತಮ್ಮ ಪಶು ಸಂಪತ್ತನ್ನು ಹೆಚ್ಚಿಸುತ್ತಾನೆ ಎಂಬ ನಂಬಿಕೆ ಜನಪದರಲ್ಲಿ ನೆಲೆಯಾಗಿದೆ.
ಡಿ. 11ರಂದು ನಡೆಯುವ ಜಾತ್ರೆಯಲ್ಲಿ ಬಸವೇಶ್ವರನಿಗೆ ರುದ್ರಾಭೀಷೇಕ, ವಿಶೇಷ ಪೂಜೆ, ದನಗಳ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಉತ್ತಮ ಜಾನುವಾರುಗಳಿಗೆ ಬಹುಮಾನವನ್ನೂ ನೀಡಲಾಗುತ್ತದೆ.
ಪೌರಾಣಿಕ ಕತೆ:
ಈ ಕಣಿವೆ ಕಾಡಿನ ಬಸಣ್ಣನಿಗೆ ಪೌರಾಣಿಕ ಕತೆಯೂ ಇದ್ದು, ಅದು ಜನಪದರ ಬಾಯಲ್ಲಿ ಲಾವಣಿ ರೂಪದಲ್ಲೂ ಚಾಲ್ತಿಯಲ್ಲಿತ್ತು. ಕೈಲಾಸದಲ್ಲಿ ಪರ ಶಿವನ ಸೇವೆಯಲ್ಲಿ ತೊಡಗಿದ್ದ ನಂದಿಕೇಶ್ವರ, ಒಮ್ಮೆ ಶಿವನ ಅಪ್ಪಣೆ ಪಡೆದು ಭೂಲೋಕ ಸಂಚಾರಕ್ಕೆ ಬರುತ್ತಾನೆ. ಸಂಚಾರದ ವೇಳೆ ಕಣಿವೆ ಕಾಡಿಗೆ ಬರುವ ಈತ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮರುಳಾಗಿ ಬಹಳಷ್ಟು ದಿನ ಇಲ್ಲೆ ಉಳಿದು ಬಿಡುತ್ತಾನೆ.
ಎಷ್ಟು ದಿನವಾದರೂ ಕೈಲಾಸಕ್ಕೆ ಮರಳದ ಈತನ ಬಗ್ಗೆ ಕೋಪಗೊಂಡ ಶಿವ, ನೀನು ಸಾಮಾನ್ಯ ನಂದಿಯಂತೆ ಭೂಲೋಕದಲ್ಲೆ ನೆಲೆ ನಿಲ್ಲು ಎಂದು ಶಾಪ ನೀಡುತ್ತಾನೆ. ಕಾಡಿನಲ್ಲಿ ದೊರಕುತ್ತಿದ್ದ ಸಮೃದ್ಧವಾದ ಹಸಿರು ಮೇವನ್ನು ತಿಂದು ದಷ್ಟಪುಷ್ಟವಾಗಿದ್ದ ನಂದಿಯನ್ನು ಕೊಂದು ತಿನ್ನಲು ಹೆಬ್ಬುಲಿಯೊಂದು ಹೊಂಚು ಹಾಕಿರುತ್ತದೆ. ಒಂದೊಮ್ಮೆ ಎರಡೂ ಎದುರಾದಾಗ ನಡೆಯುವ ಕಾಳಗದಲ್ಲಿ ನಂದಿ, ಹುಲಿಯನ್ನು ಕೊಂದು ಹಾಕುತ್ತದೆ. ಜಾನುವಾರುಗಳಿಗೆ ರಕ್ಷಣೆಯಾಗಿ ಶಿಲಾರೂಪದಲ್ಲಿ ನಂದಿ ಇಲ್ಲಿ ನೆಲೆ ನಿಂತಿದ್ದಾನೆ ಎಂಬ ದಂತಕತೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.