ಹಳೇಬೀಡು: ದ್ವಾರಸಮುದ್ರ ಸೇರಿದಂತೆ ದೊಡ್ಡಕೆರೆಗಳಿಗೆ ನೀರು ತುಂಬಿಸುವ ಪ್ರಮುಖ ಹಳ್ಳವಾದ ಕಾಗೇದಹಳ್ಳಕ್ಕೆ, ಹೊಲಬಗೆರೆ ಬಳಿ ರಸ್ತೆಗೆ ಅಡ್ಡಲಾಗಿ ಸೇತುವೆ ಇಲ್ಲದಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಇಲ್ಲಿಯ ಜನರು ಕಷ್ಟ ಅನುಭವಿಸುವಂತಾಗಿದೆ.
ಮಳೆಗಾಲದಲ್ಲಿ ಹಳ್ಳದಲ್ಲಿ ಭೋರ್ಗರೆಯುತ್ತಿದ್ದು, ಹಳ್ಳದ ಬಳಿ ಎತ್ತಿನಹೊಳೆ ನಾಲೆ ಕಾಮಗಾರಿ ನಡೆಯುತ್ತಿದೆ. ನಿರ್ಮಾಣ ಹಂತದ ಎತ್ತಿಹೊಳೆ ನಾಲೆಯಲ್ಲಿ ಮಳೆ ನೀರು ನಿಂತು, ಕಾಮಗಾರಿಗೆ ತೊಡಕಾದಾಗ ಹಳ್ಳಕ್ಕೆ ಬಿಡಲಾಗುತ್ತದೆ. ಇದರಿಂದ ಈ ಭಾಗದ ಜನರು, ಹಳ್ಳ ದಾಟಿಕೊಂಡು ನಗರ ಪಟ್ಟಣಗಳಿಗೆ ಹೋಗಿ ಬರಲು ಜಲಸಾಹಸ ಮಾಡುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಇಲ್ಲಿಯ ರೈತರು.
ರಭಸದ ಮಳೆ ಬಂದರೆ ಹಳ್ಳ ತುಂಬಿ ಹರಿಯುತ್ತಿದ್ದು, ಹೊಲಬಗೆರೆ ಗ್ರಾಮ ದ್ವೀಪದಂತಾಗುತ್ತದೆ. ಗ್ರಾಮದ ಬಹುತೇಕ ಕುಟುಂಬಗಳು ತೋಟದ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಹೊಲಬಗರೆ ಮಾತ್ರವಲ್ಲದೇ ಸವಾಸಿಹಳ್ಳಿ, ಬೆಟ್ಟದಾಲೂರು, ಅಡವಿಬಂಟೇನಹಳ್ಳಿ ಮೊದಲಾದ ಗ್ರಾಮದವರಿಗೂ ಈ ಭಾಗದಲ್ಲಿ ಜಮೀನುಗಳಿವೆ ಎಂದು ರೈತ ವಡ್ಡರಹಳ್ಳಿಯ ಸದಾಶಿವಯ್ಯ ಹೇಳಿದರು.
‘ತೋಟದ ಮನೆಯಲ್ಲಿ ವಾಸವಾಗಿರುವ ಸಾಕಷ್ಟು ಮಂದಿ ಬೈಕ್, ಕಾರು ಮೊದಲಾದ ವಾಹನ ಹೊಂದಿದ್ದೇವೆ. ಹಳ್ಳದಲ್ಲಿ ಹರಿಯುವ ನೀರಿನ ವೇಗ ಹೆಚ್ಚಾದಾಗ ಸ್ವಂತ ವಾಹನ ಇದ್ದರೂ ಆಸ್ಪತ್ರೆ, ವ್ಯಾಪಾರ ವ್ಯವಹಾರ, ಕಚೇರಿ ಮೊದಲಾದ ಕೆಲಸಗಳಿಗೆ ನಗರಗಳಿಗೆ ಹೋಗಿ ಬರಲು ಪರದಾಡುವಂತಾಗಿದೆ. ಕೃಷಿ ಉತ್ಪನ್ನಗಳನ್ನು ಸಾಗಾಟ ಮಾಡುವುದು ಸುಲಭವಾಗಿಲ್ಲ. ಕೈಗೆ ಫಸಲು ಸಿಕ್ಕಿದರೂ ಒಮ್ಮೊಮ್ಮೆ ಊರಿಗೆ ಬಂದು ಖರೀದಿಸಲು ವರ್ತಕರು ಮುಂದೆ ಬರುವುದಿಲ್ಲ. ನಗರದ ಮಾರುಕಟ್ಟೆಗೆ ನಾವೇ ಸಾಗಿಸುವುದು ಸಹ ಕಷ್ಟವಾಗಿದೆ’ ಎಂದು ರೈತ ಸತೀಶ್ ಹೇಳಿದರು.
‘ಕಾಗೇದಹಳ್ಳ ಭೋರ್ಗರೆಯುವಂತೆ ಹರಿಯುವುದು ಇಂದು, ನಿನ್ನೆಯ ಸಮಸ್ಯೆ ಅಲ್ಲ. ರಸ್ತೆಗೆ ಅಡ್ಡಲಾಗಿ ಹರಿಯುತ್ತಿರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಯಾವ ಇಲಾಖೆಯೂ ಮುಂದಾಗಿಲ್ಲ. ತಾತ, ಮುತ್ತಾತನ ಕಾಲದಿಂದಲೂ ಹಳ್ಳದ ಸಮಸ್ಯೆ ಇದ್ದರೂ, ಜನ ಪ್ರತಿನಿಧಿಗಳಂತೂ ಹಳ್ಳದತ್ತ ಸುಳಿದಿಲ್ಲ’ ಎಂದು ಸುರೇಶ್ ಹೇಳಿದರು.
‘ಹೊಲಬಗೆರೆ ಮೊದಲಾದ ಗ್ರಾಮದವರಿಗೆ ಹತ್ತಿರದ ದೊಡ್ಡ ಗ್ರಾಮ ಹಗರೆ ನಗರ, ಪಟ್ಟಣಗಳ ಸಂಪರ್ಕ ಕೇಂದ್ರವಾಗಿದೆ. ಮಳೆಗಾಲದಲ್ಲಿ ಬೇರೆ ಊರಿಗೆ ಹೋದವರು, ಬಸ್‌ನಲ್ಲಿ ಹಗರೆ ಗ್ರಾಮಕ್ಕೆ ಬಂದಿಳಿದರೆ ಊರಿಗೆ ಹೋಗಲು ಆಟೋದವರು ಬರುವುದಿಲ್ಲ. ಊರು ಸೇರಲು ಪಡಬಾರದ ಕಷ್ಟ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಹೊಲಬಗೆರೆಯ ಗೋವಿಂದನಾಯ್ಕ.
‘ಎತ್ತಿನಹೊಳೆ ನಾಲೆ ಕಾಮಗಾರಿ ಆರಂಭವಾದ ನಂತರ ಸಮಸ್ಯೆ ಮೊದಲಿಗಿಂತ ಹೆಚ್ಚಾಯಿತು’ ಎಂದು ಎಂದು ಸತೀಶ್ ಹೇಳುತ್ತಾರೆ. ‘ಎತ್ತಿನಹೊಳೆ ನಾಲೆಯಲ್ಲಿ ನಿಂತ ನೀರನ್ನು ಹಳ್ಳಕ್ಕೆ ಬಿಡುವ ಪ್ರಕ್ರಿಯೆ ಆರಂಭವಾಯಿತು. ಹೀಗಾಗಿ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡುವ ಹೊಣೆ ಎತ್ತಿನಹೊಳೆ ಯೋಜನೆಗೆ ಬಂತು. ಒಂದು ವರ್ಷದಿಂದ ಎತ್ತಿಹೊಳೆ ಯೋಜನೆ ಅಧಿಕಾರಿಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ’ ಎಂದು ತಿಳಿಸಿದರು.
‘ಹಳ್ಳದಲ್ಲಿ ಒಮ್ಮೊಮ್ಮೆ ಮರಗಳು ಬುಡಸಮೇತ ಹರಿದು ಬರುತ್ತವೆ. ಹೀಗಾಗಿ ದೊಡ್ಡ ಕಿಂಡಿಯ ಸೇತುವೆ ಅಗತ್ಯವಿದೆ. ಆದರೆ ಎಂಜಿನಿಯರ್‌ಗಳು ಪೈಪ್ ಅಳವಡಿಸಲಾಗುವುದು ಎನ್ನುತ್ತಿದ್ದಾರೆ. ಆದರೆ ಕೆಲಸ ಮಾತ್ರ ಕಾರ್ಯಗತವಾಗುತ್ತಿಲ್ಲ. ಕಾಮಗಾರಿ ವಿಳಂಬವಾದಷ್ಟು ರೈತರಿಗೆ ಆಗುವ ನಷ್ಟದ ಮೊತ್ತ ಏರಿಕೆಯಾಗುತ್ತಿದೆ’ ಎಂದು ಸತೀಶ್ ಹೇಳಿದರು.
‘ಕಾಗೇದಹಳ್ಳ ಎತ್ತಿನಹೊಳೆ ಯೋಜನೆಗೆ ಒಳಪಡುವುದಿಲ್ಲ. ಸಮೀಪದಲ್ಲಿಯೇ ಕಾಮಗಾರಿ ನಡೆಯುತ್ತಿದ್ದು ನಾಲೆಯಲ್ಲಿ ತುಂಬಿದ್ದ ನೀರನ್ನು ಹಳ್ಳಕ್ಕೆ ಹೊರಹಾಕಲು ಬಳಕೆ ಮಾಡಿಕೊಂಡಿದ್ದೇವೆ. ಹೀಗಾಗಿ ಎತ್ತಿನಹೊಳೆ ಯೋಜನೆಯಿಂದ ಸೇತುವೆ ನಿರ್ಮಾಣದ ಜವಾಬ್ದಾರಿ ಪಡೆಯಲಾಗಿದೆ’ ಎಂದು ಎಂಜಿನಿಯರ್ ಈರಯ್ಯ ಹೇಳಿದರು.
ಕಾಗೇದಹಳ್ಳಕ್ಕೆ ಸೇತುವೆ ನಿರ್ಮಿಸಲು ಅಂದಾಜು ಸಿದ್ದವಾಗಿದೆ. ಕಾಮಗಾರಿಗೆ ಮಳೆ ಬಿಡುವು ಕೊಡುತ್ತಿಲ್ಲ. ಗುತ್ತಿಗೆದಾರರಿಗೆ ಅನಾರೋಗ್ಯ ಆಗಿರುವುದರಿಂದ ಕಾಮಗಾರಿ ತಡವಾಗಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಕೈಗೊಳ್ಳುತ್ತೇವೆ.-ಈರಯ್ಯ, ಎತ್ತಿನಹೊಳೆ ಯೋಜನೆ ಎಂಜಿನಿಯರ್
ಈ ವರ್ಷ ಭಾರಿ ಪ್ರಮಾಣದ ಮಳೆ ಸುರಿದಿರುವುದರಿಂದ ಹಳ್ಳ ನಿರಂತರವಾಗಿ ಹರಿಯುತ್ತಿದೆ. ಇದು ನಿತ್ಯದ ಸಮಸ್ಯೆ ಆಗಿರುವುದರಿಂದ ಎತ್ತಿನಹೊಳೆ ಯೋಜನೆಯವರು ಬೇಗ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.-ಸದಾಶಿವಯ್ಯ, ವಡ್ಡರಹಳ್ಳಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.