ಹಳೇಬೀಡು: ಐದಳ್ಳಕಾವಲಿನಲ್ಲಿರುವ ಸರ್ಕಾರಿ ಭೂಮಿಯಲ್ಲಿ ರೈತರು ಕೃಷಿ ಮಾಡಲು ಅವಕಾಶ ಕಲ್ಪಿಸಬೇಕು. ಭೂಮಿಯನ್ನು ಬಗರ್ ಹುಕುಂನಲ್ಲಿ ರೈತರಿಗೆ ಸಕ್ರಮ ಮಾಡಿಕೊಡಬೇಕು ಎಂದು ನ.4 ರಂದು ಅರಸೀಕೆರೆಯಿಂದ ಹೊರಟಿರುವ ರೈತರ ಪಾದಯಾತ್ರೆ ಸೋಮವಾರ ಹಳೇಬೀಡಿಗೆ ಆಗಮಿಸಿತು.
ಐದಳ್ಳಕಾವಲು ಹಳೇಬೀಡಿಗೆ ಸೇರಿರುವುದರಿಂದ ಹಳೇಬೀಡು ನಾಡಕಚೇರಿಗೆ ಪಾದಯಾತ್ರೆಯಲ್ಲಿ ಬಂದ ಮುಖಂಡರು ಮನವಿ ಸಲ್ಲಿಸಿದರು.
‘ಅರಸೀಕೆರೆ ತಹಶೀಲ್ದಾರ್, ಹಾಸನ ಜಿಲ್ಲಾಧಿಕಾರಿ, ಸಕಲೇಶಪುರ ಉಪವಿಭಾಗಾಧಿಕಾರಿ ಹಾಗೂ ಬೇಲೂರು ತಹಶೀಲ್ದಾರ್‌ಗೆ ಮನವಿ ಮಾಡಿದ್ದೇವೆ. ಎಲ್ಲ ಅಧಿಕಾರಿಗಳು ಮನವಿಗೆ ಸ್ಪಂದಿಸಿದ್ದಾರೆ. ಬೇಲೂರು ತಹಶೀಲ್ದಾರ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಮಸ್ಯೆಗೆ ಪರಿಹಾರ ದೊರಕದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ’ ಎಂದು ಪಾದಯಾತ್ರಿಗಳು ತಿಳಿಸಿದರು.
ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.