ಅರಕಲಗೂಡು: ‘ಮಾರುಕಟ್ಟೆ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಗುಣಮಟ್ಟದ ತಂಬಾಕಿಗೆ ಉತ್ತಮ ದರ ದೊರೆಯುತ್ತಿಲ್ಲ. ಕೆಳ ದರ್ಜೆಯ ತಂಬಾಕು ಖರೀದಿ ನಡೆಸುತ್ತಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನ. 18 ರಂದು ತಂಬಾಕು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟಿಸಲಾಗುವುದು’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಸ್. ವಿ.ಯೋಗಣ್ಣ ಎಚ್ಚರಿಸಿದರು.
‘ಉತ್ತಮ ದರ್ಜೆ ಹೊಗೆಸೊಪ್ಪಿಗೆ ಆಂಧ್ರಪ್ರದೇಶದಲ್ಲಿ ಕೆ.ಜಿ.ಗೆ ₹400 ದರ ನೀಡುತ್ತಿದ್ದರೆ, ಇಲ್ಲಿ ₹280 ನೀಡಲಾಗುತ್ತಿದೆ. ಈ ವಾರ ₹260ಕ್ಕೆ ಕುಸಿದಿದೆ’ ಎಂದು ಅವರು ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮಾರುಕಟ್ಟೆ ಪ್ರಾರಂಭವಾಗಿ ತಿಂಗಳು ಕಳೆದರೂ ಕೆಳದರ್ಜೆಯ (ಎನ್ಒಜಿ) ಹಾಗೂ ಕಪ್ಪು ಹೊಗೆಸೊಪ್ಪು (ಬಿಪಿಎಲ್) ಖರೀದಿ ನಡೆಯುತ್ತಿಲ್ಲ. ರಾಜ್ಯದ 50 ಸಾವಿರ ಬೆಳೆಗಾರರು ಕಳೆದ 40 ವರ್ಷಗಳಿಂದ 100 ಮಿಲಿಯನ್ ಗುಣಮಟ್ಟದ ತಂಬಾಕನ್ನು ಬೆಳೆಯುತ್ತಿದ್ದಾರೆ. ವಿದೇಶಗಳಿಗೆ ರಫ್ತಾಗುತ್ತಿರುವುದರಿಂದ ಕೇಂದ್ರ ಸರ್ಕಾರಕ್ಕೆ ₹45 ಸಾವಿರ ಕೋಟಿಯಷ್ಟು ವಿದೇಶಿ ವಿನಿಮಯ ಆಗುತ್ತಿದೆ. ಆದರೆ, ಬೆಳೆಗಾರರು ಬೀದಿಗೆ ಬೀಳುವಂತಾಗಿದೆ. ಈ ಕುರಿತು ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ’ ಎಂದು ಆರೋಪಿಸಿದರು.
‘ತಂಬಾಕು ಬೆಳೆಗಾರರಿಗೆ ಜಿಎಸ್‌ಟಿ ಮತ್ತು ಎಸ್‌ಟಿಎಸ್‌ಸಿ ತೆರಿಗೆ ಹೊರೆ ಹೇರಲಾಗುತ್ತಿದೆ. ಕ್ಷೇಮಾಭಿವೃದ್ಧಿ ನಿಧಿಗೆ ಬೆಳೆಗಾರರ ವಂತಿಗೆ ನೀಡುತ್ತಿದ್ದರೂ ಬೆಳೆಗಾರ ಮೃತಪಟ್ಟಾಗ ಕೇವಲ ₹50 ಸಾವಿರ ನೀಡಲಾಗುತ್ತಿದೆ. ರೈತರ ಬ್ಯಾರನ್ ಮನೆಗಳು ಸುಟ್ಟುಹೋದರೆ ₹2 ಲಕ್ಷ ನಷ್ಟ ಉಂಟಾಗುತ್ತದೆ, ಆದರೆ ನೀಡುವ ಪರಿಹಾರ ಕೇವಲ ₹30 ಸಾವಿರ. ರಾಜ್ಯದಲ್ಲಿ ಸುಮಾರು 25 ಸಾವಿರ ಅನಧಿಕೃತ ಬೆಳೆಗಾರರು ಇದ್ದು ಇವರಿಗೂ ಅಧಿಕೃತ ಬೆಳೆಗಾರರಂತೆ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ರೈತರ ಸಮಸ್ಯೆಗಳ ಕುರಿತು ಸಂಸದ ಶ್ರೇಯಸ್ ಪಟೇಲ್ ಗಮನ ಹರಿಸಿ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಗಮನ ಸೆಳೆಯಬೇಕು’ ಎಂದರು.
ಕ್ರಮಕ್ಕೆ ಆಗ್ರಹ: ಪಟ್ಟಣದ ಸರ್ವೇ ನಂಬರ್ 120 ರಲ್ಲಿ 4.10 ಎಕರೆ ಸರ್ಕಾರಿ ಜಾಗವನ್ನು ಪಹಣಿಯಲ್ಲಿ ವಕ್ಫ್ ಹೆಸರಿಗೆ ನಮೂದಿಸಿರುವ ಕ್ರಮವನ್ನು ರೈತ ಸಂಘ ಖಂಡಿಸುತ್ತದೆ. ಕಂದಾಯ ಇಲಾಖೆ ಕೂಡಲೇ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ನ.15ರ ಶುಕ್ರವಾರ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಬಂದ್ ಮಾಡಿ ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಭುವನೇಶ್, ಜಿಲ್ಲಾ ಸಂಘದ ಉಪಾಧ್ಯಕ್ಷ ಎಚ್.ಸಿ. ಜಗದೀಶ್, ಮುಖಂಡರಾದ ಮುಗಳೂರು ಕೃಷ್ಣೇಗೌಡ, ಮಂಜೇಗೌಡ, ವೇದಾನಂದ ಸುದ್ದಿ ಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.