ADVERTISEMENT

ಹಿರೀಸಾವೆ | ಸುಡು ಬಿಸಿಲಿನಲ್ಲಿ ಕಾದು ನಿಂತ ರೈತರು

ನೋಂದಣಿ ಆರಂಭವಾಗಿ ನಾಲ್ಕು ದಿನವಾದರೂ ತಗ್ಗದ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 14:19 IST
Last Updated 7 ಮಾರ್ಚ್ 2024, 14:19 IST
ಹಿರೀಸಾವೆಯಲ್ಲಿ ಗುರುವಾರ ರೈತರು ಬಿಸಿಲಿನ ತಾಪ ತಡೆಯಲಾಗದೆ, ತಲೆ ಮೇಲೆ ಬಟ್ಟೆ ಹಾಕಿಕೊಂಡು ಸರತಿ ಸಾಲಿನಲ್ಲಿ ನಿಂತಿದ್ದರು
ಹಿರೀಸಾವೆಯಲ್ಲಿ ಗುರುವಾರ ರೈತರು ಬಿಸಿಲಿನ ತಾಪ ತಡೆಯಲಾಗದೆ, ತಲೆ ಮೇಲೆ ಬಟ್ಟೆ ಹಾಕಿಕೊಂಡು ಸರತಿ ಸಾಲಿನಲ್ಲಿ ನಿಂತಿದ್ದರು   

ಹಿರೀಸಾವೆ: ನೆತ್ತಿ ಮೇಲೆ ಸೂರ್ಯನ ಸುಡು ಬಿಸಿಲು, ನೆಲ ಮತ್ತು ಡಾಂಬರ್ ರಸ್ತೆ ಕಾವಿನಲ್ಲಿ ಸಾವಿರಾರು ರೈತರು ಉಂಡೆ ಕೊಬ್ಬರಿ ಮಾರಾಟಕ್ಕೆ ನಾಫೆಡ್ ಗೆ ಹೆಸರು ನೊಂದಾಯಿಸಲು ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಗುರುವಾರ ದಿನಪೂರ್ತಿ ತಮ್ಮ ಸರದಿಗಾಗಿ ಕಾದರು.

ಕೊಬ್ಬರಿ ನೋಂದಣಿ ಪ್ರಾರಂಭವಾಗಿ ನಾಲ್ಕು ದಿನ ಕಳೆದರು ಹೆಸರು ನೋಂದಣಿ ಮಾಡಿಸುವ ರೈತರ ಸಂಖ್ಯೆ ಕಡಿಮೆಯಾಗಿಲ್ಲ. ಸರ್ಕಾರ ನಿಗದಿಪಡಿಸಿರುವಷ್ಟು ನೋಂದಣಿ ಮುಗಿಯುತ್ತದೆ ಎಂದು ಕಳೆದ ಎರಡು ದಿನದಿಂದ ಹಗಲು–ರಾತ್ರಿ ನೋಂದಣಿ ಕೇಂದ್ರದ ಮುಂದೆ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಸೋಮವಾರ ವಿತರಣೆ ಮಾಡಿದ್ದ ಟೋಕನ್ ಸಂಖ್ಯೆ ಇಂದು ಕೊನೆಯಾಗುತ್ತದೆ. ನಾಳೆಗೆ ಹೊಸದಾಗಿ ಟೋಕನ್ ನೀಡುತ್ತಾರೆ ಎಂದು ಗುರುವಾರ ಬೆಳಿಗ್ಗೆಯಿಂದ ವೃದ್ಧರು, ಮಹಿಳೆಯರು ಸರತಿ ಸಾಲಿನಲ್ಲಿ ಇದ್ದರು.

ಗುರುವಾರ ಬೆಳಗ್ಗೆ 400 ಜನರಿಗೆ ಟೋಕನ್ ನೀಡಲಾಯಿತು. ಪರಿಸ್ಥತಿ ನೋಡಿಕೊಂಡು ಸಂಜೆ ನಂತರ ಉಳಿದವರಿಗೆ ನೀಡಲಾಗುವುದು ಎಂಬ ಮಾಹಿತಿಯಿಂದ ದಿನ ಪೂರ್ತಿ ರೈತರು ಇದ್ದರು. ಸರತಿ ಸಾಲಿನಲ್ಲಿ ನಿಂತ ಕೆಲವರು ತಲೆ ಮೇಲೆ ಬಟ್ಟೆ ಹಾಕಿಕೊಂಡರೆ, ಕೆಲವರು ರಸ್ತೆಯಲ್ಲಿ ಕೂತರು.

ADVERTISEMENT

ಹೊಳೆನರಸಿಪುರದಲ್ಲಿ ನೋಂದಣಿ ಮಾಡಿಸುವವರ ಸಂಖ್ಯೆ ಕಡಿಮೆ ಇದೆ ಎಂದು ಬುಧವಾರ ನೋಂದಣಿ ಮಾಡಿಸಲು 90 ವರ್ಷದ ನಮ್ಮ ತಂದೆಯನ್ನು ಕರೆದುಕೊಂಡು ಹೋಗಿದ್ದೆ, ಆದರೆ ಅಲ್ಲಿ ಅಗದೆ ಇಲ್ಲಿ ಇಂದು ಕಾಯುತ್ತಿರುವುದಾಗಿ ರೈತ ಪುಟ್ಟರಾಜು ಹೇಳಿದರು.

ರೈತರ ಕಷ್ಟವನ್ನು ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಕೇಳುತ್ತಿಲ್ಲ. ನಮ್ಮ ಮನೆಯಿಂದ ಇಬ್ಬರು ಬಂದು ಒಬ್ಬರು ಸರತಿ ಸಾಲಿನಲ್ಲಿ ಇದ್ದು, ಇನ್ನೊಬ್ಬರು ತಿಂಡಿ, ಊಟ, ನೀರನ್ನು ತಂದು ಕೋಡುತ್ತಾರೆ, ಕ್ಯೂನಲ್ಲಿ ನಿಂತ ಊಟ ಮಾಡುತ್ತಿರುವುದಾಗಿ ಮಂಜುಮ್ಮ ತಿಳಿಸಿದರು. ಮಧ್ಯಾಹ್ನ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಭೇಟಿನೀಡಿ, ರೈತರಿಗೆ ಸಮಾಧಾನದಿಂದ ಇರಿ, ಹಚ್ಚುವರಿ ಕೋಬ್ಬರಿ ತೆಗೆದು ಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಹಿರೀಸಾವೆಯಲ್ಲಿ ಗುರುವಾರ ರೈತರು ತಮ್ಮ ಸರದಿಗಾಗಿ ನೆಲದಲ್ಲಿ ಕಾದು ಕುಳಿತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.