ADVERTISEMENT

ಗ್ಯಾರಂಟಿಗಳಲ್ಲಿಯೇ ಕಾಲ ಕಳೆಯುತ್ತಿರುವ ಸರ್ಕಾರ: ರವಿಕಿರಣ್ ಪುಣಚ

ಸಮಸ್ಯೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಹೋರಾಟ: ರವಿಕಿರಣ್ ಪುಣಚ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:31 IST
Last Updated 11 ಜುಲೈ 2024, 14:31 IST

ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದು ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಪ್ರತಿ ಜಿಲ್ಲಾ ಕೇಂದ್ರದಲ್ಲಿ ರೈತ ಸಂಘದಿಂದ ಹೋರಾಟ ಮಾಡಲು ನಿರ್ಧರಿಸಿದ್ದು, ಕೆಲ ದಿನಗಳಲ್ಲಿ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರದ ಅವಧಿಯಲ್ಲಿ ದೆಹಲಿಯಲ್ಲಿ ರೈತ ಸಂಘದ ಸತತ ಹೋರಾಟದ ಫಲವಾಗಿ ರೈತ ವಿರೋಧಿ ಮೂರು ಕಾಯಿದೆಗಳನ್ನು ವಾಪಸ್ ಪಡೆದಿದೆ. ಆದರೆ ಕೇಂದ್ರ ಸರಕಾರ ನೀಡಿದ ಭರವಸೆಗಳನ್ನು ಈವರೆಗೆ ಈಡೇರಿಸಿಲ್ಲ. ಹೋರಾಟದಲ್ಲಿ ಮೃತಪಟ್ಟ ನೂರಾರು ರೈತರಿಗೆ ಪರಿಹಾರ ನೀಡುವುದಾಗಿ ಕೇಂದ್ರ ಭರವಸೆ ನೀಡಿತ್ತು. ಆದರೆ ಈವರೆಗೆ ಗಮನಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ರಾಜ್ಯದ ಕಾಂಗ್ರೆಸ್ ಸರ್ಕಾರ ಕೂಡ ಕೇವಲ ಭರವಸೆ ನೀಡಿ ರೈತರಿಗೆ ವಂಚನೆ ಮಾಡಿದೆ. ರೈತರ ಸಮಸ್ಯೆಗೆ ಸ್ಪಂದಿಸುವ ಬದಲು, ಕೇವಲ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿಯೇ ಕಾಲ ಕಳೆಯುತ್ತಿದೆ. ರೈತರ ಬೇಡಿಕೆಯಂತೆ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

ಕೊಬ್ಬರಿಗೆ ₹ 15 ಸಾವಿರ ಬೆಂಬಲ ಬೆಲೆ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿತ್ತು. ಇಂದು ಅದು ಹುಸಿಯಾಗಿದೆ. ರೈತರ ಕೃಷಿಭೂಮಿಗೆ ಸಂಪರ್ಕ ಕಲ್ಪಿಸುವ ಪರಿವರ್ತಕ ಅಳವಡಿಸಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದೆ. ಪಹಣಿ, ಪೋಡಿ ಸೇರಿದಂತೆ ಸೇವಾ ಶುಲ್ಕವನ್ನು ಹೆಚ್ಚಳ ಮಾಡಿ ರೈತರಿಗೆ ಬರೆ ಎಳೆದಿದೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ. ಕೆಲ ದಿನದಲ್ಲಿ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಸಂಘದಿಂದ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ಮುಖಂಡರಾದ ಶಾಂತರಾಜ್ ಅರಸ್, ರಘು ಹಿರಿಸಾವೆ, ನರಸಿಂಹ ಶೆಟ್ಟಿ, ವಾಜಿದ್  ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.