ADVERTISEMENT

ಹಿರೀಸಾವೆ | ಮಳೆ ಕೊರತೆ: ಬಿಸಿಲಿನ ತಾಪಕ್ಕೆ ಒಣಗಿದ ರಾಗಿ ಪೈರು

ಹಿ.ಕೃ.ಚಂದ್ರು
Published 14 ಸೆಪ್ಟೆಂಬರ್ 2024, 6:43 IST
Last Updated 14 ಸೆಪ್ಟೆಂಬರ್ 2024, 6:43 IST
ಹಿರೀಸಾವೆ ಹೋಬಳಿಯಲ್ಲಿ ಮಳೆ ಕೊರತೆಯಿಂದ ರಾಗಿ ಪೈರು ಒಣಗಿದೆ.
ಹಿರೀಸಾವೆ ಹೋಬಳಿಯಲ್ಲಿ ಮಳೆ ಕೊರತೆಯಿಂದ ರಾಗಿ ಪೈರು ಒಣಗಿದೆ.   

ಹಿರೀಸಾವೆ: ಹೋಬಳಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 28ರಿಂದ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇದ್ದು, ಬಿಸಿಲಿನ ತಾಪಕ್ಕೆ ರಾಗಿ ಪೈರು ಒಣಗಲಾರಂಭಿಸಿದೆ. ಇಪ್ಪತ್ತು ದಿನದಿಂದ ವಾಡಿಕೆಯಂತೆ ಮಳೆಯಾಗದೇ ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ.

ಈ ಭಾಗದಲ್ಲಿ ಮಳೆ ಆಶ್ರಯದಲ್ಲಿ ಜುಲೈನಿಂದ ನವೆಂಬರ್‌ವರೆಗೆ ರಾಗಿ, ಜೋಳ, ಅವರೆ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಜುಲೈ ಕೊನೆಯ ವಾರ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಬಿದ್ದ ಮಳೆಗೆ ಶೇ 90ರಷ್ಟು ರೈತರು ದೀರ್ಘಾವಧಿಯ ರಾಗಿ ಬಿತ್ತನೆ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ಮಳೆಯಾಗದೇ ಕೆಲವು ರೈತರು ರಾಗಿ, ಹುರಳಿ ಬಿತ್ತನೆ ಮಾಡಲು ಆಗಿಲ್ಲ.

ಅಲ್ಪಾವಧಿ ರಾಗಿ ಬಿತ್ತನೆ ಮಾಡಲು ಹೊಲವನ್ನು ಸಿದ್ದತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ. ಕೊಳವೆಬಾವಿಯಲ್ಲಿ ಹೆಚ್ಚು ನೀರು ಇರುವ ಕೆಲವು ರೈತರು, ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಿ, ರಾಗಿ ಪೈರು ರಕ್ಷಣೆಯಲ್ಲಿ ನಿರತರಾಗಿದ್ದಾರೆ.

ADVERTISEMENT

‘ಹದವಾದ ಮಳೆಯಾಗಿದ್ದರೆ, ಈ ಸಮಯಕ್ಕೆ ರಾಗಿ ಪೈರು ಬೆಳೆದು ರಾಗಿ ತೆನೆ ಹೊರಡಬೇಕಿತ್ತು. ಮಳೆ ಬೀಳದೇ ರಾಗಿ ಪೈರು ಬೆಳವಣಿಗೆಯಲ್ಲಿ ಕುಂಠಿತವಾಗಿದೆ’ ಎಂದು ರೈತರು ಹೇಳುತ್ತಿದ್ದಾರೆ.

‘ಹೋಬಳಿಯಲ್ಲಿ 3,900 ಹೆಕ್ಟೇರ್ ಭೂಮಿಯಲ್ಲಿ ವಿವಿಧ ತಳಿಯ ರಾಗಿಯನ್ನು ಮತ್ತು 300 ಹೆಕ್ಟೇರ್  ಪ್ರದೇಶದಲ್ಲಿ ಜೋಳವನ್ನು ರೈತರು ಬಿತ್ತನೆ ಮಾಡಿದ್ದಾರೆ. ಮುಂದಿನ 15 ದಿನಗಳಲ್ಲಿ ಮಳೆ ಬಂದರೆ ಉತ್ತಮ ರಾಗಿ ಫಸಲು ಬರುತ್ತದೆ’ ಎಂದು ಹಿರೀಸಾವೆ ರೈತ ಸಂಪರ್ಕ ಕೇಂದ್ರ ಅಧಿಕಾರಿ ಜಾನ್ ತಾಜ್ ಹೇಳತ್ತಾರೆ.

ಈ ವಾರದಲ್ಲಿ ಮಳೆಯಾಗದಿದ್ದರೆ ರಾಗಿ ಪೈರು ಬೆಳೆಯುವುದಿಲ್ಲ, ಫಸಲೂ ಬರುವುದಿಲ್ಲ. ಇದರಿಂದ ಮುಂದಿನ ಜನವರಿ ನಂತರ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಹೋಬಳಿ ರೈತರು.

3,900 ಹೆಕ್ಟೇರ್‌ನಲ್ಲಿ ರಾಗಿ, 300 ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ 2022ರ ನಂತರ ಹೋಬಳಿಗೆ ವಾಡಿಕೆಯಷ್ಟು ಮಳೆಯಾಗದೇ ಸಂಕಷ್ಟ ಕೆಲ ರೈತರಿಂದ ಕೊಳವೆಬಾವಿ ಮೂಲಕ ನೀರುಣಿಸುವ ವ್ಯವಸ್ಥೆ
ಹದವಾದ ಮಳೆಯಾಗಿದ್ದರೆ ಮಹಾಲಯ ಅಮಾವಾಸ್ಯೆಗೆ ಮೊದಲು ರಾಗಿ ತೆನೆ ಒಡೆಯುತ್ತಿತ್ತು. ಮಳೆಯಾಗದೇ ರಾಗಿ ಬೆಳೆದಿಲ್ಲ. ಈಗ ಮಳೆಯಾದರೆ ಫಸಲು ಕಡಿಮೆಯಾದರೂ ರಾಗಿ ಹುಲ್ಲು ಸಿಗುತ್ತದೆ.
ಶಿವನಂಜೇಗೌಡ ಮೂಕಿಕೆರೆ ಗ್ರಾಮದ ರೈತ
ದೀರ್ಘಾವಧಿಯ ತಳಿಗಳನ್ನು ಬಿತ್ತನೆ ಮಾಡಿದ್ದ ಹೊಲಗಳಲ್ಲಿ ರಾಗಿ ಪೈರಿಗೆ ಈಗ ಮಳೆ ಅತ್ಯಗತ್ಯವಾಗಿ ಬೇಕಿದೆ. ಅಲ್ಪಾವಧಿ ರಾಗಿ ಬಿತ್ತನೆ ಮಾಡಲು ರೈತರು ಮಳೆ ಕಾಯುತ್ತಿದ್ದಾರೆ.
ರಾಮಕೃಷ್ಣ ಹಿರೀಸಾವೆಯ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.