ADVERTISEMENT

ಮಾ.1 ರಂದು ಅಂಬೇಡ್ಕರ್, ಕೃಷ್ಣರಾಜ ಒಡೆಯರ್ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 13:15 IST
Last Updated 27 ಫೆಬ್ರುವರಿ 2024, 13:15 IST

ಹಾಸನ: ನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ ನಿರ್ಮಾಣಕ್ಕೆ ಮಾರ್ಚ್ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಡಾ.ಬಿ.ಆರ್.ಅಂಬೇಡ್ಕರ್‌ ಸ್ಮಾರಕ ಸಮಿತಿ ರಾಜ್ಯ ಉಪಾಧ್ಯಕ್ಷ ಶ್ರೀಧರ ಕಲಿವೀರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುತ್ತಿರುವ ಹಿನ್ನೆಲೆಯಲ್ಲಿ ಸಮುದಾಯದ ಜನರು ಮತ್ತು ಸಮಿತಿಯ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ. ಮುಖ್ಯಮಂತ್ರಿ ಹಾಗೂ ಎಲ್ಲ ಜನಪ್ರತಿನಿಧಿಗಳು ಸ್ಮಾರಕ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.

ADVERTISEMENT

ಹಿಂದಿನ ಸರ್ಕಾರ ಎ.ಕೆ. ಬೋರ್ಡಿಂಗ್ ಹೋಂ ಪಾರಂಪರಿಕ ಕಟ್ಟಡವನ್ನು ಸ್ಮಾರಕಕ್ಕೆ ಉಳಿಸಿಕೊಂಡು ಡಾ.ಅಂಬೇಡ್ಕರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ನಿರ್ಮಿಸುವಂತೆ ಆದೇಶ ಮಾಡಿತ್ತು ಎಂದರು.

ಶತಮಾನದ ಹಿಂದೆ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ಅಸ್ಪೃಶ್ಯ ಜಾತಿಗಳ ಶಿಕ್ಷಣಕ್ಕಾಗಿ ಉಚಿತ ವಸತಿ ಶಾಲೆಯಾದ ಕರ್ನಾಟಕ ಬೋರ್ಡಿಂಗ್ ಹೋಂ ಸ್ಥಾಪಿಸಿದ್ದು, ಅದು ಇಂದಿಗೂ ಇದೆ. ಈ ಸ್ಥಳಕ್ಕೆ 1954 ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭೇಟಿ ನೀಡಿ ಭಾಷಣ ಮಾಡಿದ್ದರು. ಈ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತಿರುವುದು ಜಿಲ್ಲೆಯ ಜನರಿಗೆ ಸಂತಸ ತಂದಿದೆ ಎಂದರು.

ಈ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.

ಶಂಕರ್ ರಾಜ್ ಹರೀಶ್ ಕೃಷ್ಣ ದಾಸ್, ಅಂಬುಗ ಮಲ್ಲೇಶ್, ಗೋವಿಂದ ರಾಜ್, ವಿಜಯಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.