ADVERTISEMENT

ಆಲೂರು | ಜೋಳಕ್ಕೆ ಫಂಗಸ್‌ ಕಾಟ: ರೈತರಿಗೆ ಸಂಕಟ

ಮೋಡ, ಮಳೆಯಿಂದಾಗಿ ಮೆಕ್ಕೆಜೋಳದ ಕಟಾವಿಗೆ ತೊಂದರೆ: ನಷ್ಟದ ಭೀತಿಯಲ್ಲಿ ಅನ್ನದಾತ

ಎಂ.ಪಿ.ಹರೀಶ್
Published 17 ಅಕ್ಟೋಬರ್ 2024, 7:24 IST
Last Updated 17 ಅಕ್ಟೋಬರ್ 2024, 7:24 IST
ಜೋಳದ ತೆನೆಗೆ ಫಂಗಸ್‌ ಹಿಡಿದಿದ್ದು, ಮೊಳಕೆ ಒಡೆಯುತ್ತಿದೆ.
ಜೋಳದ ತೆನೆಗೆ ಫಂಗಸ್‌ ಹಿಡಿದಿದ್ದು, ಮೊಳಕೆ ಒಡೆಯುತ್ತಿದೆ.   

ಆಲೂರು: ತಾಲ್ಲೂಕಿನಾದ್ಯಂತ 15 ದಿನಗಳಿಂದ ಮೋಡ ಕವಿದ ವಾತಾವರಣ ಮತ್ತು ಆಗಾಗ್ಗೆ ಸುರಿಯುವ  ಮಳೆಯಿಂದ ಮುಸುಕಿನ ಜೋಳದ ತೆನೆಗಳಿಗೆ ಗಿಡದಲ್ಲಿಯೇ ಫಂಗಸ್ ದಾಳಿ,  ಮೊಳಕೆ ಒಡೆಯುವ ಸಮಸ್ಯೆ ಉಂಟಾಗಿದ್ದು, ಅಳಿದುಳಿದ ಫಸಲು ಸಿಗದೆ ರೈತರು ನಷ್ಟದ ಆತಂಕದಲ್ಲಿದ್ದಾರೆ.

ಜೋಳ ಬಿತ್ತನೆ ಮಾಡಿದ ಸುಮಾರು ನಾಲ್ಕು ತಿಂಗಳ ನಂತರ ತೆನೆಗಳನ್ನು ಕಟಾವು ಮಾಡಬೇಕು. ಬಿತ್ತನೆ ಮಾಡಿದ ಸಂದರ್ಭದಲ್ಲಿ ಭಾರಿ ಮಳೆಗೆ ತುತ್ತಾಯಿತು. ನಂತರದ ದಿನಗಳಲ್ಲಿ ಅಳಿದುಳಿದು ಹುಟ್ಟಿದ ಗಿಡಗಳಿಗೆ ರೋಗ ರುಜಿನಗಳು ಎದುರಾದವು. ಗೊಬ್ಬರ, ಕೀಟನಾಶಕಗಳನ್ನು ಸಿಂಪಡಿಸಿ ಗಿಡಗಳನ್ನು ರೈತರು ಉಳಿಸಿಕೊಂಡಿದ್ದರು. ಕಾಳುಗಟ್ಟಿಯಾಗಿ ಸುಮಾರು ಒಂದು ತಿಂಗಳು ಕಳೆಯಿತು. ಕೆಲ ರೈತರು ಕಟಾವು ಮಾಡಿದಾಗ ತುಂತುರು ಮಳೆಯಾಗಿ ಜೋಳ ತೋಯ್ದಿತ್ತು. ಕಾಳು ಬಿಡಿಸಲು ಸಾಧ್ಯವಾಗದೇ ಇದ್ದಲ್ಲೇ ಭೂಸು(ಫಂಗಸ್‌) ಹಿಡಿದು, ಬಲೆಗಟ್ಟುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಜೋಳ ಕೊಯ್ಲು ಮಾಡಲು ಉತ್ತಮ ಬಿಸಿಲಿನ ವಾತಾವರಣ ಇರಬೇಕು. ಮೋಡ ಇದ್ದಾಗ ಕೊಯ್ಲು ಮಾಡಿದರೆ ಒಣಗಿಸಲು ತೊಂದರೆಯಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಿಲ್ಲ. ಮೋಡ ಕವಿದಿರುವುದರಿಂದ ಕೆಲ ರೈತರು ಇನ್ನೂ ಜೋಳವನ್ನು ಕಟಾವು ಮಾಡಿಲ್ಲ ಎನ್ನುತ್ತಾರೆ ರೈತರು.

ADVERTISEMENT

ಬಹುತೇಕ ಕೃಷಿ ಕಾರ್ಮಿಕರ ಮಕ್ಕಳು ಕೆಲಸ ಹುಡುಕಿಕೊಂಡು ಪಟ್ಟಣಕ್ಕೆ ವಲಸೆ ಹೋಗಿದ್ದು, ಸಕಾಲದಲ್ಲಿ ಕೊಯ್ಲು ಮಾಡಲು ಕೃಷಿ ಕಾರ್ಮಿಕರ ಕೊರತೆ ಎದುರಾಗಿದೆ. ಕೃಷಿ ಮಾಡಲು ಕಾರ್ಮಿಕರ ಅಭಾವ ತೀವ್ರವಾಗಿದೆ. 

ಆದರೆ, ಜೋಳವನ್ನು ಯಂತ್ರದ ಮೂಲಕ ಬಿಡಿಸಲು ಪ್ರಯತ್ನಿಸಿದರೆ, ಶೇ 30 ಕ್ಕೂ ಹೆಚ್ಚು ತೆನೆಗಳು ಯಂತ್ರಕ್ಕೆ ಸಿಲುಕದೇ ಭೂಮಿಯಲ್ಲಿ ಉಳಿಯುತ್ತವೆ. ಹೊಲದಲ್ಲಿ ಉಳಿದ ಜೋಳವನ್ನು ಪುನಃ ಕಾರ್ಮಿಕರ ಸಹಾಯದಿಂದ ಆಯ್ದು, ಶೇಖರಿಸಿ ಕಾಳು ಬಿಡಿಸಬೇಕು. ಆಗ ಎರಡು ಪಟ್ಟು ಹಣ ಖರ್ಚಾಗುತ್ತದೆ. ಮಾರಾಟ ಮಾಡುವ ಸಂದರ್ಭದಲ್ಲಿ ಜೋಳ ಒಣಗಿಲ್ಲವೆಂಬ ಸಬೂಬು ಹೇಳಿ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಖರೀದಿ ಮಾಡುತ್ತಾರೆ ಎಂದು ರೈತರು ನಷ್ಟವನ್ನು ವಿವರಿಸಿದರು.

ಹವಾಮಾನ ವೈಪರೀತ್ಯವಾಗದೆ ಸಕಾಲಕ್ಕೆ ಸರಿಯಾಗಿ ಕೃಷಿ ಕೆಲಸಗಳಾದರೆ ಕಷ್ಟನಷ್ಟ ಉಂಟಾಗುವುದಿಲ್ಲ. ಒಂದೆಡೆ ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದ ಸುಮಾರು ಎರಡು ದಶಕಗಳಿಂದ ತೀವ್ರ ಸಂಕಷ್ಟಕ್ಕೆ ಎದುರಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. 

‌‌ಆಲೂರು ತಾಲ್ಲೂಕಿನಲ್ಲಿ ಕಟಾವು ಮಾಡಿ ಸಂಗ್ರಹಿಸಿರುವ ಜೋಳದ ತೆನೆಗಳು
ಜೋಳ ಬಿತ್ತನೆ ಮಾಡಿದಾಗಿನಿಂದ ಕೊಯ್ಲು ಮಾಡುವವರೆಗೂ ಒಂದಿಲ್ಲೊಂದು ಕಷ್ಟಗಳು ಎದುರಾಗುತ್ತಿವೆ. ಕೃಷಿಗೆ ಖರ್ಚು ಮಾಡಿರುವ ಹಣ ಸಹ ವಾಪಸ್‌ ಬಾರದಾಗಿದೆ.
ಶಾಂತಶೆಟ್ಟಿ ಪಟ್ನ ಗ್ರಾಮದ ರೈತ
ಮೋಡ ಮಳೆಯಾಗುತ್ತಿದ್ದಾಗ ಜೋಳ ಕಟಾವು ಮಾಡಲೇಬಾರದು. ಗಿಡದಲ್ಲಿದ್ದರೆ ಹಾಳಾಗುವುದಿಲ್ಲ. ಮಳೆ ನೋಡಿಕೊಂಡು ಕಟಾವು ಮಾಡಬೇಕು.
ರಮೇಶಕುಮಾರ್ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.