ಕೊಣನೂರು: ಮಾರುಕಟ್ಟೆಯಲ್ಲಿ ಹಸಿ ಶುಂಠಿ ಧಾರಣೆಯು ದಿಢೀರ್ ಕುಸಿತ ಕಂಡಿದೆ.
ಮತ್ತೊಂದೆಡೆ ಕೊಳೆರೋಗದಿಂದಾಗಿ ಅವಧಿಗೆ ಮುನ್ನವೇ ಶುಂಠಿ ಕೊಯ್ಲು ಆರಂಭಗೊಂಡಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಫೆಬ್ರುವರಿಯಲ್ಲಿ ಶುಂಠಿ ನಾಟಿ ಆಗಿದ್ದು, 6 ತಿಂಗಳಾದರೂ ನಿರೀಕ್ಷೆಗೆ ತಕ್ಕಂತೆ ಬೆಳವಣಿಗೆ ಆಗಿಲ್ಲ. ನಿರಂತರ ಮಳೆಯಿಂದಾಗಿ ಕೊಳೆರೋಗ ಆವರಿಸಿದೆ. ಹೀಗಾಗಿ, ಫಸಲು ಕರಗಿ ಹೋಗುವ ಬದಲು ಸಿಕ್ಕಷ್ಟು ಸಿಗಲಿ ಎಂದು ಜುಲೈ ಕೊನೆಯ ವಾರದಿಂದಲೇ ರೈತರು ಶುಂಠಿ ಕಟಾವು ಮಾಡಿ ಮಾರಾಟ ಮಾಡುತ್ತಿದ್ದಾರೆ.
60 ಕೆ.ಜಿ ತೂಕದ ಚೀಲಕ್ಕೆ ಆರಂಭದಲ್ಲಿ ₹2 ಸಾವಿರ ಬೆಲೆ ದೊರಕಿತ್ತು. ಕೊಯ್ಲು ಹೆಚ್ಚಾದ ಕಾರಣ ಈಗ ದರವು ₹1,100ಕ್ಕೆ ಕುಸಿದಿದೆ.
ಬೆಲೆಯ ಏರಿಳಿತ:
2023ರ ಜನವರಿಯಲ್ಲಿ ಹಸಿ ಶುಂಠಿ ಬೆಲೆ ಪ್ರತಿ ಚೀಲಕ್ಕೆ (60 ಕೆ.ಜಿ) ₹2,000ದಿಂದ ₹2,200 ಇತ್ತು. ಮಾರ್ಚ್– ಏಪ್ರಿಲ್‌ನಲ್ಲಿ ₹5 ಸಾವಿರಕ್ಕೆ ತಲುಪಿತ್ತು. ಮೇ ಮತ್ತು ಜೂನ್‌ನಲ್ಲಿ ₹10,000ರಿಂದ ₹11,000ದವರೆಗೂ ಮುಟ್ಟಿತ್ತು.
ಅದೇ ವರ್ಷದ ಜುಲೈ–ಆಗಸ್ಟ್‌ನಲ್ಲಿ ಹೊಸ ಶುಂಠಿಯು ಮಾರುಕಟ್ಟೆಗೆ ಬಂದಿದ್ದರಿಂದ ಬೆಲೆಯು ₹3,500ಕ್ಕೆ ಇಳಿದಿತ್ತು. ಸೆಪ್ಟೆಂಬರ್‌ನಲ್ಲಿ ₹3,800 ಹಾಗೂ ಅಕ್ಟೋಬರ್‌ನಲ್ಲಿ ₹4 ಸಾವಿರದಿಂದ ₹5 ಸಾವಿರ ತಲುಪಿತ್ತು. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ₹4500-₹4800 ಬೆಲೆ ಇದ್ದರೆ, ಪ್ರಸಕ್ತ ವರ್ಷದ ಜನವರಿ ಮತ್ತು ಫೆಬ್ರುವರಿಯಲ್ಲಿ ₹4000– ₹4500 ಬೆಲೆ ಇತ್ತು ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕಳೆದ ವರ್ಷ ಶುಂಠಿ ಬೆಲೆ ಏರಿಕೆ ಜೊತೆಗೆ ಬಿತ್ತನೆ ಬೀಜ ಗೊಬ್ಬರ ಕೂಲಿ ದರವೂ ಏರಿತ್ತು. ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು ಈಗ ಬೆಲೆ ಕುಸಿದಿದೆಕೆ.ಟಿ. ಸತೀಶ್ ಶುಂಠಿ ಬೆಳೆಗಾರ
ಅರಕಲಗೂಡು ತಾಲ್ಲೂಕಿನಲ್ಲಿ ಮಳೆಯಿಂದ ಕೊಳೆರೋಗ ಬಾಧಿಸಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಶುಂಠಿ ಉತ್ಪಾದನೆ ಆಗಿದೆ. ಹೀಗಾಗಿ ಬೆಲೆ ಕುಸಿದಿದೆಡಿ. ರಾಜೇಶ್ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.