ADVERTISEMENT

ತೆರೆದ ಬಾಗಿಲು: ಹಾಸನಾಂಬೆಯ ದರ್ಶನ ಆರಂಭ

ದರ್ಶನೋತ್ಸವ ಉದ್ಘಾಟಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 7:38 IST
Last Updated 2 ನವೆಂಬರ್ 2023, 7:38 IST
   

ಹಾಸನ: ವರ್ಷಕ್ಕೆ‌ಒಂದು ಬಾರಿ‌ ದರ್ಶನ ನೀಡುವ ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಿಯ ದರ್ಶನೋತ್ಸವ‌ ಗುರುವಾರ ವಿಧ್ಯುಕ್ತವಾಗಿ ಆರಂಭವಾಯಿತು. ಧಾರ್ಮಿಕ ವಿಧಿ ವಿಧಾನಗಳ‌‌ ಮೂಲಕ ಮಧ್ಯಾಹ್ನ 12.22 ಕ್ಕೆ ಬಾಗಿಲು ತೆರೆಯಲಾಯಿತು.

ಗುರುವಾರ ವಿಧಿ ವಿಧಾನದಂತೆ ಅರ್ಚಕರು ಪೂಜೆ ಸಲ್ಲಿಸಿದ ಬಳಿಕ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಕೆ.ಎನ್. ರಾಜಣ್ಣ, ಶಾಸಕ‌ ಸ್ವರೂಪ್ ಪ್ರಕಾಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಹೆಚ್ಚವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಹಾಸನಾಂಬ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ, ಎಸ್ಪಿ ಸುಜೀತಾ, ಎಎಸ್ಪಿ ತಮ್ಮಯ್ಯ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ವಾರ್ತಾಧಿಕಾರಿ ಮೀನಾಕ್ಷಮ್ಮ ಸೇರಿದಂತೆ ಇತರೆ ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲದ ಗರ್ಭಗುಡಿ ಬಾಗಿಲ ಬೀಗ ಮುದ್ರೆ ತೆರೆಯಲಾಯಿತು.

ಬೆಳಿಗ್ಗೆ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಸಂಪ್ರದಾಯದಂತೆ ತಳವಾರ ವಂಶದ ನರಸಿಂಹರಾಜ್ ಅರಸ್ ಅವರು ಬಾಳೆ ಕಂದು ಕಡಿಯುವ ಮೂಲಕ ಬಾಗಿಲು ತೆರೆಯಲು ಅನುವು ಮಾಡಿಕೊಟ್ಟರು. ಹಾಸನಾಂಬ, ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿದೆ. ಮೊದಲ ಮತ್ತು ಅಂತಿಮ ದಿನ ಸಾರ್ವಜನಿಕ ದರ್ಶನ ಇರುವುದಿಲ್ಲ. ಉಳಿದ ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ

ADVERTISEMENT

ನ.2ರಿಂದ 15 ರವರೆಗೆ ಹಾಸನಾಂಬ ದೇವಾಲಯ ಬಾಗಿಲು ತೆರೆಯಲಿದ್ದು, 12 ದಿನಗಳ ಕಾಲ ಹಾಸನಾಂಬೆ ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಉಳಿದಂತೆ ಎಲ್ಲ ದಿನಗಳು ದಿನದ 24 ಗಂಟೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಅಶ್ವೀಜ ಮಾಸದ ಹುಣ್ಣಿಮೆಯ ನಂತರದ ಮೊದಲ ಗುರುವಾರ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬರಲಿದೆ.

ಪ್ರತೀತಿ:

ದೇವಾಲಯದ ಬಾಗಿಲು ಹಾಕುವಾಗ ಹಚ್ಚಿಟ್ಟ ದೀಪ ವರ್ಷ ಪೂರ್ತಿ ಬೆಳಗುತ್ತದೆ. ಮುಂದಿನ ವರ್ಷ ಬಾಗಿಲು ತೆರೆದಾಗ ದೀಪ ಬೆಳಗುತ್ತಲೇ ಇರುತ್ತದೆ. ದೇವರಿಗೆ ಇಟ್ಟ ನೈವೇದ್ಯ ಒಂದು ವರ್ಷದ ನಂತರವೂ ಉತ್ತಮವಾಗಿರುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ದೇವಿಯ ಪವಾಡ ನೋಡಲು ಪ್ರತಿವರ್ಷ ಲಕ್ಷಾಂತರ ಭಕ್ತರು ಬರುತ್ತಾರೆ.

ವಿಶೇಷ ದರ್ಶನಕ್ಕಾಗಿ ₹300 ಹಾಗೂ ₹1000 ದರದ‌ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲಾಡಳಿತ ಭಕ್ತರಿಗೆ ಅಗತ್ಯ ವಿರುವ ಎಲ್ಲ ರೀತಿಯ ಮೂಲ ಸೌಕರ್ಯದ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ 1200 ಸಿಬ್ಬಂದಿಯೊಂದಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಭಕ್ತರಿಗೆ ಜರ್ಮನ್ ಟೆಂಟ್ ಸೂರು: ದರ್ಶನ ಪಡೆಯಲು ರಾಜ್ಯದ ನಾನಾ ಮೂಲೆಮೂಲೆಗಳಿಂದ ಬರುವ ಭಕ್ತಾದಿಗಳು ತಾಸುಗಟ್ಟಲೆ ಸಾಲಿನಲ್ಲಿ ನಿಂತು ದರ್ಶನ ಪಡೆಯುವ ಹಿನ್ನೆಲೆಯಲ್ಲಿ ಸರತಿಯಲ್ಲಿ ಕೂರಲು ಕುರ್ಚಿ ಹಾಗೂ ನೆರಳಿಗಾಗಿ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಮಜ್ಜಿಗೆ ಒದಗಿಸಲಾಗುತ್ತಿದೆ.

ಈ ಬಾರಿಯು ಹಾಸನಾಂಬ ದರ್ಶನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಲ್ಪಿಸಿದೆ. ಅಧಿಕೃತ ಸಮಯಕ್ಕೆ ಸರಿಯಾಗಿ ಬಾಗಿಲು‌ ತೆರೆಯಲಾಗಿದ್ದು, ಎಲ್ಲರೂ ಶಾಂತಿಯುತವಾಗಿ ದೇವಿ ದರ್ಶನ ಪಡೆಯಬೇಕು. 14 ದಿನದ ಜಾತ್ರಾ ಮಹೋತ್ಸವ ಯಶಸ್ವಿಯಾಗಿ‌ ಜರುಗಲು ಸಹಕರಿಸುವಂತೆ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮನವಿ‌ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.