ADVERTISEMENT

ನ್ಯಾಯದೇವತೆ ಕಾಗಿನರೆ ಚೌಡೇಶ್ವರಿ ದೇವಿ

ಪ್ರಕೃತಿಯ ರಮ್ಯ ತಾಣದಲ್ಲಿ ದೇವಿಯ ಮೂಲಸ್ಥಾನ: ಭಕ್ತರಿಂದ ವಿವಿಧ ಹರಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2024, 5:56 IST
Last Updated 11 ಮೇ 2024, 5:56 IST
ಹೆತ್ತೂರು ಹೋಬಳಿಯ ಕಾಗಿನರೆ ಗ್ರಾಮದಲ್ಲಿರುವ ಚೌಡೇಶ್ವರಿ ದೇವಿಯ ದೇವಸ್ಥಾನ
ಹೆತ್ತೂರು ಹೋಬಳಿಯ ಕಾಗಿನರೆ ಗ್ರಾಮದಲ್ಲಿರುವ ಚೌಡೇಶ್ವರಿ ದೇವಿಯ ದೇವಸ್ಥಾನ   

ಹೆತ್ತೂರು: ಹೋಬಳಿಯ ಕಾಗಿನರೆ ಚೌಡೇಶ್ವರಿದೇವಿ ನ್ಯಾಯದೇವತೆ ಎಂದು ಕರೆಸಿಕೊಳ್ಳುತ್ತಿದ್ದು, ದೇವಿಯ ಬಳಿ ಪ್ರಾರ್ಥಿಸಿದರೆ ಅನ್ಯಾಯಕ್ಕೆ ತಕ್ಕ ಶಾಸ್ತಿಯಾಗಲಿದೆ ಎಂಬ ನಂಬಿಕೆ ಬಲವಾಗಿರುವುದರಿಂದ ದೇವಿಯು ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾಳೆ.

ಸಕಲೇಶಪುರದಿಂದ 45 ಕಿ.ಮೀ. ದೂರದ ಪಶ್ಚಿಮಘಟ್ಟದ ಅಂಚಿನ ಕಾಗಿನರೆ ಗ್ರಾಮದಲ್ಲಿ ನೆಲೆಸಿರುವ ಚೌಡೇಶ್ವರಿ ದೇವಿ ನ್ಯಾಯದೇವತೆ ಎಂದೇ ಪ್ರಸಿದ್ದಿ. ಹಣಕಾಸು, ಭೂಮಿ ಸೇರಿದಂತೆ ಯಾವುದೇ ವ್ಯಾಜ್ಯವಿದ್ದರೂ ದೇವಿಯಲ್ಲಿ ಹರಕೆ ಹೊತ್ತ ಕೆಲವೇ ದಿನಗಳಲ್ಲಿ ನ್ಯಾಯ ದೊರಕುವ ನಂಬಿಕೆ ಇಲ್ಲಿದೆ. ವಂಚಕರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ಮಾತುಗಳು ಜನಜನಿತ ಆಗಿರುವುದರಿಂದ ದೇವಿಯ ಸನ್ನಿಧಿಗೆ ಹೋಗುವ ಮುನ್ನ ಹತ್ತಾರು ಬಾರಿ ಯೋಚಿಸಬೇಕಿದೆ.

ದಕ್ಷಿಣ ಕನ್ನಡದಿಂದ ಆಗಮನ: ಸುಮಾರು 10 ಶತಮಾನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಮೂವರು ಅಕ್ಕ, ತಂಗಿಯರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸಕಲೇಶಪುರ ತಾಲ್ಲೂಕಿನ ಗಡಿಪ್ರದೇಶವನ್ನು ವಿಭಜಿಸುವ ಪಶ್ಚಿಮಘಟ್ಟದ ತಪ್ಪಲಿನ ಸಮಾನಾಂತರ ಪ್ರದೇಶದಲ್ಲಿ ನೆಲೆಸಿದ್ದಾರೆ.

ADVERTISEMENT

ಇದರಲ್ಲಿ ಹೆತ್ತೂರು ಹೋಬಳಿಯ ಬಿಸ್ಲೆ ಘಾಟ್‌ನ ತಾಲ್ಲೂಕಿನ ಗಡಿಪ್ರದೇಶದಲ್ಲಿರುವ ಚೌಡೇಶ್ವರಿ, ಶಿರಾಡಿಘಾಟ್‌ನ ತಾಲ್ಲೂಕಿನ ಗಡಿ ಪ್ರದೇಶದಲ್ಲಿರುವ ಚೌಡೇಶ್ವರಿ ದೇವಿ ಹಾಗೂ ಹೋಬಳಿಯ ಕಾಗಿನರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಚೌಡೇಶ್ವರಿ ದೇವಿಯರು ಎನ್ನಲಾಗಿದೆ.

ಕಾಗಿನರೆ ಚೌಡೇಶ್ವರಿ ದೇವಿಯ ಮೂಲಸ್ಥಾನ ಗ್ರಾಮದಿಂದ ಸುಮಾರು 10 ಕಿ.ಮೀ. ದೂರದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು, ಪೂಜೆ ಕಾರ್ಯಕ್ಕೆ ನಿತ್ಯ ಅರಣ್ಯದಲ್ಲಿ ಸಂಚರಿಸುವುದು ಅಸಾಧ್ಯ ಎಂಬ ಕಾರಣಕ್ಕೆ ಒಂದು ಶತಮಾನದ ಹಿಂದೆ ದೇವಿಯ ವಿಗ್ರಹವನ್ನು ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಯಿತು. ಇಂದಿಗೂ ಪ್ರತಿವರ್ಷ ಮೇ ಮೊದಲ ಭಾನುವಾರ ಮೂಲ ಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಪರಿಪಾಠ ನಡೆದುಕೊಂಡು ಬಂದಿದೆ.

ಅದ್ಭುತ ಪ್ರವಾಸಿ ತಾಣ: ದೇವಸ್ಥಾನ ಅದ್ಭುತ ಪ್ರಕೃತಿ ಸೌಂದರ್ಯದ ತಾಣವಾಗಿದ್ದು, ದೇವಸ್ಥಾನ ಸಮೀಪದ ವಿಶಾಲವಾದ ಬೆಟ್ಟದಲ್ಲಿ ನಿಂತು ಮೋಡಗಳ ಚೆಲ್ಲಾಟ, ಪಶ್ಚಿಮಘಟ್ಟದ ಹಸಿರುಬೆಟ್ಟ ಸಾಲು ವೀಕ್ಷಿಸಲು ನಿತ್ಯ ನೂರಾರು ಪ್ರವಾಸಿಗರು ಕಾಗಿನರೆ ಗ್ರಾಮಕ್ಕೆ ಬರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಭಕ್ತರು ಹಾಗೂ ಪ್ರವಾಸಿಗರಿಂದ ಕಾಗಿನರೆ ಗ್ರಾಮ ತುಂಬಿ ಹೋಗುತ್ತಿದೆ. ಮಳೆಗಾಲದಲ್ಲಿ ಇಡೀ ಗ್ರಾಮವನ್ನು ದಟ್ಟ ಮಂಜು ಆವರಿಸುತ್ತದೆ.

ಸಕಲೇಶಪುರ, ಕೊಡಗಿನ ಶನಿವಾರಸಂತೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಿಂದ ದೇವಿಯ ಸನ್ನಿಧಿಗೆ ಹೋಗಬಹುದಾಗಿದ್ದು, ಹೆತ್ತೂರು - ವನಗೂರು ಕೂಡುರಸ್ತೆ ಗ್ರಾಮದಿಂದ ಬಾಚ್ಚಿಹಳ್ಳಿ- ಹೊಂಗಡಹಳ್ಳ ಮಾರ್ಗವಾಗಿ ದೇವಸ್ಥಾನಕ್ಕೆ ಹೋಗಲು ಏಕೈಕ ಮಾರ್ಗವಿದೆ. ಕಡಿದಾದ ಬೆಟ್ಟದ ಸಾಲಿನಲ್ಲಿರುವ ದೇವಿಯ ದರ್ಶನಕ್ಕೆ ಹೋಗಲು ಕಳೆದೊಂದು ದಶಕದವರೆಗೆ ವಾಹನದ ವ್ಯವಸ್ಥೆ ಬೇಕಿತ್ತು. ಸದ್ಯ ಡಾಂಬರ್ ರಸ್ತೆ ನಿರ್ಮಾಣ ಮಾಡಿರುವ ಕಾರಣ ಬಹುತೇಕ ಎಲ್ಲ ವಾಹನಗಳು ದೇವಸ್ಥಾನದವರೆಗೆ ತಲುಪುತ್ತವೆ.

ಕಾಗಿನರೆ ಗ್ರಾಮಕ್ಕೆ ಹೋಗುವ ದಾರಿ

ಹತ್ತಾರು ತಲೆಮಾರಿನಿಂದ ದೇವಿಯ ಸನ್ನಿಧಾನದಲ್ಲಿ ನ್ಯಾಯ ತೀರ್ಮಾನಗಳು ನಡೆಯುತ್ತಿದ್ದು ಇಂದಿಗೂ ಅದು ಮುಂದುವರಿದಿದೆ. ಭಕ್ತರಿಗೆ ನ್ಯಾಯ ದೊರೆಯಲಿದೆ ಎಂಬ ಅಪಾರ ನಂಬಿಕೆ ಇದೆ.

-ಗುಂಡೂರಾಜ್ ಕಾಗಿನರೆ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ

ಚೌಡೇಶ್ವರಿ ದೇವಿಯ ಸನ್ನಿಧಾನ ಅದ್ಭುತ ಪ್ರವಾಸಿ ತಾಣವಾಗಿದ್ದು ಸಾವಿರಾರು ಭಕ್ತರು ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ. ಸರ್ಕಾರ ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ.

-ಚಂದ್ರು ಕಾಗಿನರೆ ಗ್ರಾಮಸ್ಥ

ದೇವಿ ಸನ್ನಿಧಿಯಲ್ಲಿ ನ್ಯಾಯ ನ್ಯಾಯಾಲಯದಲ್ಲಿ ಬಗೆಹರಿಯದ ಸಮಸ್ಯೆಗಳು ದೇವಿಯ ಸನ್ನಿಧಿಯಲ್ಲಿ ಕೆಲವೇ ದಿನಗಳಲ್ಲಿ ಬಗೆಹರಿದಿವೆ ಎಂಬ ನೂರಾರು ಉದಾಹರಣೆಗಳನ್ನು ಗ್ರಾಮಸ್ಥರು ನೀಡುತ್ತಾರೆ. ದೇವಿಯ ಸನ್ನಿಧಿಯಲ್ಲಿ ನ್ಯಾಯದಾನ ಯಾವಾಗ ಆರಂಭವಾಯಿತು ಎಂಬುದು ಯಾರಿಗೂ ತಿಳಿಯದು. ಆದರೆ ಅಪಾರ ಶಕ್ತಿ ಹೊಂದಿರುವ ದೇವಿಯ ಸನ್ನಿಧಿಯಲ್ಲಿ ನ್ಯಾಯ ದೊರೆಯುತ್ತದೆ ಎಂಬ ಕಾರಣಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನಿತ್ಯ ನೂರಾರು ಜನರು ಬಂದು ಹರಕೆ ಹೊರುವುದು ಹರಕೆ ತೀರಿಸುವ ಕಾರ್ಯಗಳನ್ನು ನಡೆಸುತ್ತಾರೆ. ದೇವಿಯ ಸನ್ನಿಧಿಯಲ್ಲಿ ಹರಕೆ ಹೊತ್ತ ವ್ಯಕ್ತಿ ಎದುರಾಳಿಯ ವಿಳಾಸವನ್ನು ದೇವಸ್ಥಾನ ಸಮಿತಿಗೆ ನೀಡಬೇಕು. ದೇವಸ್ಥಾನ ಸಮಿತಿ ಎದುರಾಳಿ ವ್ಯಕ್ತಿಗೆ ನೋಟಿಸ್‌ ನೀಡುವ ಮೂಲಕ ದೇವಿಯ ಸನ್ನಿಧಿಗೆ ಕರೆಸಿ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿ ಭಾನುವಾರ ಹರಕೆ ಹೊತ್ತವರು ಹಾಗೂ ಎದುರಾಳಿಗಳನ್ನು ಒಟ್ಟಾಗಿಸಿ ರಾಜಿ ಪಂಚಾಯಿತಿ ನಡೆಸುತ್ತದೆ. ರಾಜಿಗೆ ಒಪ್ಪದ ಪ್ರಕರಣಗಳನ್ನು ದೇವಿಯ ತೀರ್ಮಾನಕ್ಕೆ ಬಿಡುವುದು ಇಲ್ಲಿನ ವಾಡಿಕೆ. ಅನ್ಯಾಯಕ್ಕೆ ಒಳಗಾದ ವ್ಯಕ್ತಿಗಳು ಹರಕೆ ಹೊರಲು ಸನ್ನಿಧಿಗೆ ಬರುವ ವೇಳೆ ಕಟ್ಟುನಿಟ್ಟಾಗಿರಬೇಕಿದ್ದು ಪೂರ್ಣ ಬೆಳಕಾಗುವ ಮುನ್ನ ದೇವಿಯ ಸನ್ನಿಧಿಗೆ ಬರಬೇಕು ಎಂಬ ಪರಂಪರೆಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಮೇ 12 ರಂದು ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಮೇ ಮೊದಲ ಭಾನುವಾರ ಒಂದು ದಿನದ ಜಾತ್ರೆ ದೇವಿಯ ಸನ್ನಿಧಿಯಲ್ಲಿ ನಡೆಯುತ್ತಿದ್ದು ಜಾತ್ರೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಮೂಲ ಸನ್ನಿಧಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಆರಂಭವಾಗಲಿದ್ದು ಕುರಿ ಕೋಳಿ ಹಾಗೂ ಹಂದಿಗಳನ್ನು ಅಂದು ದೇವಿಗೆ ಅರ್ಪಿಸಲಾಗುತ್ತದೆ. ಜಾತ್ರೆಗೆ ಸೇರುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇವರನ್ನು ನಿಯಂತ್ರಿಸುವುದು ಪೊಲೀಸರಿಗೆ ಹರಸಾಹಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.