ಹಾಸನ: ಹಳೇಬೀಡಿನ ಹೊಯ್ಸಳ ಬಡಾವಣೆಯಲ್ಲಿ ಮನೆಯ ಬೀಗ ಮುರಿದು ₹11.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಬಡಾವಣೆಯ ಶಿವರುದ್ರೇಗೌಡ ಮಕ್ಕಳು ಆಂಧ್ರಪ್ರದೇಶದ ನಲ್ಲೂರಿನಲ್ಲಿ ಬೇಕರಿ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದಾರೆ. ಶಿವರುದ್ರೇಗೌಡರು, ಅ.23 ರಂದು ಮನೆಗೆ ಬೀಗ ಹಾಕಿ ನಲ್ಲೂರಿಗೆ ಹೋಗಿದ್ದರು. ನವೆಂಬರ್ 3 ರಂದು ಸಂಜೆ ವಾಪಸ್ ಮನೆಗೆ ಬಂದು ನೋಡಿದಾಗ, ಮನೆಯ ಬೀಗ ಮುರಿದಿತ್ತು.
ಒಳಗೆ ಹೋಗಿ ನೋಡಿದಾಗ, ಲಾಕರ್‌ನಲ್ಲಿದ್ದ 20 ಗ್ರಾಂ ಚಿನ್ನದ 2 ಚೈನ್, 15 ಗ್ರಾಂನ 3 ಜೊತೆ ಚಿನ್ನದ ಓಲೆ, 56 ಗ್ರಾಂನ 7 ಚಿನ್ನದ ಉಂಗುರ, 10 ಗ್ರಾಂನ 2 ಜೊತೆ ಚಿನ್ನದ ಓಲೆ, ಒಂದು ಜೊತೆ ಬೆಳ್ಳಿ ತಟ್ಟೆ, ಒಂದು ಜೊತೆ ಚಿಕ್ಕ ಬೆಳ್ಳಿ ಪ್ಲೇಟ್, ಎರಡು ಜೊತೆ ಬೆಳ್ಳಿ ದೀಪ ಕಂಬಗಳು, 5 ಜೊತೆ ಬೆಳ್ಳಿ ಕಾಲು ಚೈನ್, 3 ಜೊತೆ ಬೆಳ್ಳಿ ಕುಂಕುಮದ ಬಟ್ಟಲು, 2 ಜೊತೆ ಚಿಕ್ಕ ಬೆಳ್ಳಿ ಕುಂಕುಮದ ಬಟ್ಟಲು, ಬೆಳ್ಳಿ ಕಾಮಾಕ್ಷಿ ದೀಪ, ಬೆಳ್ಳಿ ಚೆಂಬು, ಬೆಳ್ಳಿ ದೇವರ ಮುಖವಾರ, ಬೆಳ್ಳಿ ಕೈಬಳೆಗಳು ಸೇರಿದಂತೆ ಒಟ್ಟು ₹11.37 ಲಕ್ಷ ಮೌಲ್ಯ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ. ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹1.45 ಲಕ್ಷ ನಗದು ಕಳವು
ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಮನೆಯ ಹೆಂಚು ತೆಗೆದು ಒಳಗೆ ನುಗ್ಗಿರುವ ಕಳ್ಳರು, ಬೀರುವಿನಲ್ಲಿ ಇಟ್ಟಿದ್ದ ₹1.45 ಲಕ್ಷ ನಗದು ಕಳವು ಮಾಡಿದ್ದಾರೆ.
ಗ್ರಾಮದ ಶೇಖರ್, ಬೆಂಗಳೂರಿನ ಹೋಂ ಲಾಜಿಸ್ಟಿಕ್ ಕಂಪನಿಯಲ್ಲಿ ಕ್ಯಾಂಟರ್ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು, 15 ದಿನಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಾರೆ. ನವೆಂಬರ್ 3 ರಂದು ಶೇಖರ್ ಅವರ ಪತ್ನಿ ಲಕ್ಷ್ಮೀ ಮನೆಗೆ ಬೀಗ ಹಾಕಿಕೊಂಡು ವಳಂಬಿಗೆ ಗ್ರಾಮಕ್ಕೆ ಹೋಗಿದ್ದರು. ಈ ಮಧ್ಯೆ ಕುಂದೂರಿನ ನಾಗೇಶ್ ಎಂಬುವವರು ಶೇಖರ್ ಅವರಿಗೆ ಕರೆ ಮಾಡಿ, ಮನೆಯ ಬಾಗಿಲು ತೆರೆದಿರುವುದಾಗಿ ತಿಳಿಸಿದ್ದರು. ಕೂಡಲೇ ಪತ್ನಿಗೆ ಶೇಖರ್ ಈ ವಿಷಯ ತಿಳಿಸಿದ್ದು, ಮನೆಗೆ ಬಂದು ನೋಡಿದಾಗ, ಬೀರುವಿನಲ್ಲಿ ಇಟ್ಟಿದ್ದ ₹1.45 ಲಕ್ಷ ನಗದು ಕಳವು ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹1.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಹಾಸನ: ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ಮನೆಯ ಕಿಟಕಿಯಿಂದ ವಾನಿಟಿ ಬ್ಯಾಗ್ ಕದ್ದಿರುವ ಕಳ್ಳರು, ₹1.75 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಚ್‌ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಪ್ರದೀಪ್ ಎಂಬುವವರು ಹಬ್ಬಕ್ಕೆಂದು ಮಂಡ್ಯದಿಂದ ಚನ್ನರಾಯಪಟ್ಟಣಕ್ಕೆ ಬಂದಿದ್ದು, ನವೆಂಬರ್ 2ರಂದು ರಾತ್ರಿ ಮನೆಯಲ್ಲಿ ಮಲಗಿದ್ದರು. ಮಧ್ಯರಾತ್ರಿ 2 ಗಂಟೆಗೆ ರೂಮಿನ ಕಿಟಕಿಯಿಂದ ವ್ಯಾನಿಟಿ ಬ್ಯಾಗ್ ಅನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. 15 ಗ್ರಾಂ ಚಿನ್ನದ ಸರ, 5 ಗ್ರಾಂನ 2 ಚಿನ್ನದ ಓಲೆ, ವಾಚ್ ಸೇರಿದಂತೆ ₹1.75 ಲಕ್ಷ ಮೌಲ್ಯದ ವಸ್ತುಗಳಿದ್ದವು. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.