ADVERTISEMENT

ಹಾಸನ: ₹ 8 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಜಿಲ್ಲೆಯಲ್ಲಿ ಮುಂದುವರಿದ ಕಳ್ಳತನ: ಮೂರು ಪ್ರತ್ಯೇಕ ಪ್ರಕರಣ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 14:18 IST
Last Updated 5 ಅಕ್ಟೋಬರ್ 2024, 14:18 IST

ಹಾಸನ: ಜಿಲ್ಲೆಯಲ್ಲಿ ಮನೆಗಳ ಕಳ್ಳತನ ಮುಂದುವರಿದಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ₹ 8 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಪ್ರಕರಣ 1: ಇಲ್ಲಿನ ಕುವೆಂಪು ನಗರದ ಹೌಸಿಂಗ್ ಬೋರ್ಡ್‌ ಕಾಲೊನಿಯ ರಿಜ್ವಾನ್‌ ಅಹಮ್ಮದ್‌ ಎಂಬುವರ ಮನೆಯ ಕಬೋರ್ಡ್‌ನಲ್ಲಿ ಇಟ್ಟಿದ್ದ ಚಿನ್ನಾಭರಣ ಹುಡುಕಾಡಿದ್ದಾರೆ. ಆಗ ಕಳ್ಳತನ ಆಗಿರುವುದು ಗೊತ್ತಾಗಿದೆ.

68 ಗ್ರಾಂ ತೂಕದ 6 ಚಿನ್ನದ ಬಳೆಗಳು ಕಳುವಾಗಿದ್ದು, ಇವುಗಳ ಮೌಲ್ಯ ₹2.40 ಲಕ್ಷ ಎಂದು ಅಂದಾಜಿಸಲಾಗಿದೆ. ಮನೆಯಲ್ಲಿ ಈ ಹಿಂದೆ ಕೆಲಸಕ್ಕಿದ್ದ ಗುಲ್ನಾಜ್ ಬಾನು ಮತ್ತು ಅವಳ ಸ್ನೇಹಿತ ನವಾಜ್‍ಪಾಷಾ ಮೇಲೆ ಅನುಮಾನವಿದೆ ಎಂದು ರಿಜ್ಚಾನ್ ಅಹಮ್ಮದ್ ಹಾಸನ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ADVERTISEMENT

ಪ್ರಕರಣ 2: ನಗರದ ಚಿಕ್ಕಹೊನ್ನೇನಹಳ್ಳಿ ಬಡಾವಣೆಯ ಎಂಸಿಎಫ್‌ ಕ್ವಾಟರ್ಸ್‌ ಹಿಂಭಾಗದ ರಾಜಾಜಿನಗರದಲ್ಲಿ ಮನೆಯ ಬೀಗ ಮುರಿದು ₹4.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಲೋಕೇಶ್ ಎಂ.ಸಿ. ಎಂಬುವರು ಮಹಾಲಯ ಅಮಾವಾಸ್ಯೆ ನಿಮಿತ್ತ ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಚನ್ನರಾಯಪಟ್ಟಣಕ್ಕೆ ತೆರಳಿದ್ದರು. ಅ. 4 ಮನೆಗೆ ಬಂದು ಬೀಗ ತೆಗೆಯಲು ಹೋದಾಗ, ಮನೆಯ ಬೀಗ ಹಾಗೂ ಡೋರ್ ಲಾಕ್‌ ಮುರಿದಿರುವುದು ಗೊತ್ತಾಗಿದೆ. ಮನೆಯೊಳಗೆ ಹೋಗಿ ನೋಡಿದಾಗ ₹2.73 ಲಕ್ಷ ಮೌಲ್ಯದ 39 ಗ್ರಾಂ ಚಿನ್ನಾಭರಣ, ₹60 ಸಾವಿರ ಮೌಲ್ಯದ 500 ಗ್ರಾಂ ಬೆಳ್ಳಿ ಆಭರಣ ಹಾಗೂ ₹87ಸಾವಿರ ನಗದು ಸೇರಿ ಒಟ್ಟು ₹4.20 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.

ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ 3: ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ಮನೆಯ ಬೀಗ ಮುರಿದು ₹1.48 ಲಕ್ಷ ಮೌಲ್ಯದ ಚಿನ್ನಾಭರಣ ದೋಚಲಾಗಿದೆ.

ಗಾಯತ್ರಿ ಎಂಬುವರು ಮನೆಗೆ ಬೀಗ ಹಾಕಿ ಮೈಸೂರಿನಲ್ಲಿರುವ ಮಗಳ ಮನೆಗೆ ತೆರಳಿದ್ದರು. ಅ. 4ರಂದು ವಾಪಸ್ ಬಂದು ನೋಡಿದಾಗ ಮನೆಯ ಮುಂಬಾಗಿಲಿನ ಡೋರ್ ಲಾಕ್ ಮುರಿದಿತ್ತು. ಮನೆಯ ಒಳಗಿದ್ದ ಕಬ್ಬಿಣದ ಬೀರುವಿನ ಬೀಗವನ್ನು ತೆರೆದಿದ್ದ ಕಳ್ಳರು, ₹1.48 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆಯ ದ್ವೇಷ: ಕೊಲೆ

ಹಾಸನ: ಹಳೆಯ ದ್ವೇಷದಿಂದ ವ್ಯಕ್ತಿಯೊಬ್ಬನ ಹೊಟ್ಟೆಗೆ ಒದ್ದು ಕೊಲೆ ಮಾಡಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಕೆಸಗುಳಿ ಗ್ರಾಮದಲ್ಲಿ ನಡೆದಿದೆ.

ಸೋಮಶೇಖರ್ (51) ಮೃತಪಟ್ಟ ವ್ಯಕ್ತಿ. ರೇವು ಶೆಟ್ಟಿ ಕೊಲೆ ಮಾಡಿದ ಆರೋಪಿ.

ಅ. 1ರಂದು ಸಂಜೆ 7.30 ರ ಸುಮಾರಿಗೆ ಗ್ರಾಮದ ಸೋಮಶೇಖರ್‌ ಮದ್ಯಪಾನ ಮಾಡಿ ರೇವು ಶೆಟ್ಟಿಗೆ ಬಾಯಿಗೆ ಬಂದಂತೆ ಕೂಗಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ರೇವು ಶೆಟ್ಟಿ, ದ್ವೇಷವಿಟ್ಟುಕೊಂಡು ಸೋಮಶೇಖರ್‌ಗೆ ಬಾಯಿಗೆ ಬಂದಂತೆ ಆವಾಚ್ಯ ಶಬ್ದಗಳಿಂದ ಬೈದು ಜಗಳ ಮಾಡಿದ್ದು, ಕೈಗಳಿಂದ ಹೊಡೆದು ಕಾಲಿನಿಂದ ಹೊಟ್ಟೆಗೆ ಜೋರಾಗಿ ಒದ್ದಿದ್ದ. ಇದರಿಂದ ಗಾಯಗೊಂಡಿದ್ದ ಸೋಮಶೇಖರ್‌ನನ್ನು ಚಿಕಿತ್ಸೆಗಾಗಿ ಹಾಸನ ಸರ್ಕಾರಿ ದಾಖಲಿಸಲಾಗಿತ್ತು. ನಂತರ ಮನೆಗೆ ಕರೆ ತರಲಾಗಿತ್ತು.

ಅ.3ರಂದು ಬೆಳಗಿನ ಜಾವ ಸೋಮಶೇಖರ್ ಮನೆಯಲ್ಲಿ ಮೃತಪಟ್ಟಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಸೋಮಶೇಖರ್‌ ಪತ್ನಿ ಅನುಸೂಯಾ, ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.