ADVERTISEMENT

ಪ್ರೇಕ್ಷಕರ ಮನಸೂರೆಗೊಂಡ ‘ಗೋರ್ ಮಾಟಿ’ ನಾಟಕ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 13:43 IST
Last Updated 22 ಜೂನ್ 2024, 13:43 IST
ಗೋರ್‌ ಮಾಟಿ ನಾಟಕದ ದೃಶ್ಯ
ಗೋರ್‌ ಮಾಟಿ ನಾಟಕದ ದೃಶ್ಯ   

ಹಾಸನ: ಉಲಿವಾಲ ಸ್ಕೂಲ್ ಆಫ್ ಡ್ರಾಮ ವತಿಯಿಂದ ನಗರದ ಹಾಸನಾಂಬ ಕಲಾಭವನದಲ್ಲಿ ಆಯೋಜಿಸಿದ್ದ ರಂಗಾಯಣ ಪ್ರಸ್ತುತಿಯ ‘ಗೋರ್ ಮಾಟಿ’ ನಾಟಕವು ಯಶಸ್ವಿ ಪ್ರದರ್ಶನ ಕಂಡಿತು.

ಮೈಸೂರು ರಂಗಾಯಣದ ಪ್ರಸಿದ್ಧ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರು ನಿರ್ದೇಶನ ಮಾಡಿದ್ದ ಈ ಎರಡೂವರೆ ಗಂಟೆ ಅವಧಿಯ ನಾಟಕವನ್ನು ಹಾಸನದ ರಂಗಾಸಕ್ತ ಪ್ರೇಕ್ಷಕರು ರಂಗಾಸ್ವಾದನೆ ಮಾಡಿದರು.

ನಾಟಕದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿಮ್ಸ್ ನಿರ್ದೇಶಕ ಡಾ.‌ಸಂತೋಷ್, ಇಂತಹಾ ಅಭಿರುಚಿ ಇಂದು ಹೆಚ್ಚೆಚ್ಚು ಜನರ ನಡುವೆ ತಲುಪಬೇಕಿದೆ. ಜನರ ಮಾನಸಿಕ ಸ್ವಾಸ್ಥ್ಯಕ್ಕೆ ರಂಗಭೂಮಿ ಸಂಪೂರ್ಣ ಸಹಕಾರಿಯಾಗಲಿದೆ ಎಂದರು.

ADVERTISEMENT

ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಮಾತನಾಡಿ, ಹಾಸನದಲ್ಲಿ ಮಾತ್ರವಲ್ಲದೇ ನಾಡಿನ ಬಹುತೇಕ ಕಡೆ ಉಲಿವಾಲ ಸ್ಕೂಲ್ ಆಫ್ ಡ್ರಾಮ ತಂಡವು ತಮ್ಮ ಭಿನ್ನ ರಂಗಪ್ರಯೋಗಗಳ ಮೂಲಕ ಗಮನ ಸೆಳೆದಿದೆ. ರಂಗಾಸಕ್ತರು ಈ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.

ರಂಗಕರ್ಮಿ ಉಲಿವಾಲ ಮೋಹನ್ ಕುಮಾರ್ ಅವರು ತಂಡದ ಆಶಯಗಳ ಕುರಿತಾಗಿ ಮಾತನಾಡಿದರು. ನಿವೃತ್ತ ತಹಸಿಲ್ದಾರ್ ರುದ್ರಪ್ಪಾಜಿರಾವ್, ಶಿಕ್ಷಕರಾದ ಸೋಮ ನಾಯಕ್, ಬಂಜಾರ ಸಮುದಾಯದ ಮುಖಂಡ ವಿಷ್ಣು ನಾಯಕ್ ಮುಂತಾದವರು ಹಾಜರಿದ್ದರು. ರಂಗಸಂಘಟಕ, ಸಾಹಿತಿ ಚಲಂ ಹಾಡ್ಲಹಳ್ಳಿ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಭ್ರಮವಾದ ಗೋರ್‌ ಮಾಟಿ: ಎರಡೂವರೆ ಗಂಟೆಯ ‘ಗೋರ್ ಮಾಟಿ’ ನಾಟಕವು ತನ್ನ ಇಂಪಾದ ಹಾಡುಗಳಿಂದ ಹಾಗೂ ಮನಸೆಳೆಯುವ ರಂಗದೃಶ್ಯಗಳಿಂದ ಕಡೆಯ ತನಕ ಪ್ರೇಕ್ಷಕರನ್ನು ಹಿಡಿದು ಕೂರಿಸಿತು.

ಶಿರಗಾನಹಳ್ಳಿ ಶಾಂತನಾಯ್ ಹಾಗೂ ಬಿ.ಟಿ. ಲಲಿತಾ‌ನಾಯಕ್ ಅವರ ಕೃತಿಗಳ ಆಯ್ದ ಭಾಗಗಳನ್ನು ರಂಗದ ಮೇಲೆ ಒಂದರ ಹಿಂದೊಂದರಂತೆ ಹದವಾಗಿ ಜೋಡಿಸಿ, ನಾಟಕ ಕಟ್ಟಿದ ನಿರ್ದೇಶಕ ಸಿ.ಬಸವಲಿಂಗಯ್ಯ ಅವರ ಕಾರ್ಯವನ್ನು ಪ್ರೇಕ್ಷಕರು ಶ್ಲಾಘಿಸಿದರು.

ನಾಟಕದ ಕಡೆಯ ಭಾಗದಲ್ಲಿ ಚಾರ್ಲಿ ಚಾಪ್ಲಿನ್ ಅವರ ‘ದಿ ಡಿಕ್ಟೇಟರ್’ ಸಿನೆಮಾದ ಗಮನ ಸೆಳೆಯುವ ಭಾಷಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದು ಅರ್ಥಪೂರ್ಣವಾಗಿತ್ತು. ಬೆಳಕು ಹಾಗೂ ರಂಗಸಜ್ಜಿಗೆ ಗಮನ ಸೆಳೆಯುವಂತಿದ್ದು, ಬಂಜಾರ ಸಮುದಾಯದ ಕಥೆಯ ಜೊತೆಗೆ ಸರಾಗವಾಗಿ ನಡೆದುಕೊಂಡು ರಂಗದ ಮೆರಗನ್ನು ಹೆಚ್ಚಿಸಿದವು.

ಯಶಸ್ವಿಯಾದ ಮತ್ತೆರಡು ಪ್ರಯೋಗ: ‘ಗೋರ್ ಮಾಟಿ’ ರಂಗ ಪ್ರಯೋಗದ ಜೊತೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಮತ್ತೆರಡು ಪ್ರಯೋಗಗಳು ನಡೆದವು. ಸಮಯಕ್ಕೆ ಸರಿಯಾಗಿ ನಾಟಕ ಆರಂಭಗೊಂಡಿದ್ದು ಒಂದು ಯಶಸ್ವಿ ಪ್ರಯೋಗವಾದರೆ, ನಾಟಕ ಪ್ರದರ್ಶನಕ್ಕೆ ಟಿಕೆಟ್ ದರ ನಿಗದಿ ಪಡಿಸಿ ರಂಗಾಸಕ್ತರಿಂದ ಆರ್ಥಿಕ ಸ್ಥಿರತೆ ಕಾಪಾಡಿಕೊಂಡಿದ್ದು ಮತ್ತೊಂದು ಪ್ರಯೋಗ.

ಈ ಎರಡೂ ಪ್ರಯೋಗದಲ್ಲಿ ಸಣ್ಣಪುಟ್ಟ ನ್ಯೂನತೆಗಳಿದ್ದರೂ, ಮುಂದಿನ ದಿನಗಳಲ್ಲಿ ರಂಗಪ್ರಯೋಗ ಮಾಡುವ ತಂಡಗಳಿಗೆ ಆತ್ಮಸ್ಥೈರ್ಯವನ್ನು ನೀಡುವಂತಿತ್ತು. ಟಿಕೆಟ್ ಶೋಗೆ ಸಹಕರಿಸಿದ ನಗರದ ರಂಗಾಸಕ್ತರಿಗೆ ಸಂಘಟಕರು ಧನ್ಯವಾದಗಳನ್ನು ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.