ಹಾಸನ | ಮುಗಿಯದ ಜಂಟಿ ಸರ್ವೆ: ನಿಗದಿಯಾಗದ ಒತ್ತುವರಿ
ಅರಣ್ಯ ಒತ್ತುವರಿ ತೆರವಿಗೆ ಸರ್ಕಾರದ ಆದೇಶ: ಹೋಂಸ್ಟೇ, ರೆಸಾರ್ಟ್‌ಗಳ ಜೊತೆಗೆ ಸಾಗುವಳಿದಾರರಿಗೂ ಆತಂಕ
Published 26 ಆಗಸ್ಟ್ 2024, 7:31 IST Last Updated 26 ಆಗಸ್ಟ್ 2024, 7:31 IST ಸಕಲೇಶಪುರ ತಾಲ್ಲೂಕಿನ ಹೊಸಳ್ಳಿ ಬೆಟ್ಟದ ಹುಲುಗಾವಲಿನಲ್ಲಿ ವಾಹನಗಳ ವೀಲಿಂಗ್ ಮಾಡಿರುವುದು.
ಹಾಸನ: ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದೀಗ ಅರಣ್ಯ ಭೂಮಿ ಯಾವುದು? ಕಂದಾಯ ಭೂಮಿ ಯಾವುದು ಎನ್ನುವುದು ಸ್ಪಷ್ಟವಾಗದೇ ಜನರು ಹಾಗೂ ಅಧಿಕಾರಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಕಂದಾಯ ಹಾಗೂ ಅರಣ್ಯ ಇಲಾಖೆಗಳ ಜಂಟಿ ಸಮೀಕ್ಷೆಗೆ ಇನ್ನೂ ಮುಹೂರ್ತ ಕೂಡಿ ಬರದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.
ಮಲೆನಾಡಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ, ಮಣ್ಣು ಕುಸಿತಕ್ಕೆ ಹೋಂಸ್ಟೇ ಹಾಗೂ ರೆಸಾರ್ಟ್‌ಗಳೆ ಕಾರಣ ಎಂದು ಬಿಂಬಿಸಿರುವ ಸರ್ಕಾರ ಅರಣ್ಯ ವ್ಯಾಪ್ತಿಯ ಒತ್ತುವರಿ ತೆರವುಗೊಳಿಸಲು ಮುಂದಾಗಿದೆ. ಇದರಿಂದಾಗಿ ಕೇವಲ ಹೋಂಸ್ಟೇ ಹಾಗೂ ರೆಸಾರ್ಟ್ ಮಾಲೀಕರಿಗಷ್ಟೇ ಅಲ್ಲದೆ, ಪಶ್ಚಿಮ ಘಟ್ಟದ ಕಾಡಂಚಿನ ಬೆಳೆಗಾರರಲ್ಲೂ ಆತಂಕ ಎದುರಾಗಿದೆ.
ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೆತ್ತೂರು, ಯಸಳೂರು ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮೀಸಲು ಅರಣ್ಯ (ಸೆಕ್ಷನ್ 4) ಹಬ್ಬಿಕೊಂಡಿದೆ. ಇಲ್ಲಿನ ಮೂರುಕಣ್ಣು ಗುಡ್ಡ, ಅಗನಿ, ಕಬ್ಬಿನಾಲೆ, ಕೆಂಪುಹೊಳೆ, ಬಿಸಲೆ ಹಾಗೂ ಇತರೆ ಮೀಸಲು ಅರಣ್ಯ ಭಾಗದಲ್ಲಿ ನೂರಾರು ಗ್ರಾಮಗಳಲ್ಲಿ ಸ್ಥಳೀಯರು ತಲೆತಲಾಂತರದಿಂದ ಜೀವನ ನಡೆಸುತ್ತಿದ್ದಾರೆ. ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಹಾಗೂ ಇತರೆ ಸಾಂಪ್ರದಾಯಿಕ ಬೆಳೆ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ.
ಹತ್ತಾರು ವರ್ಷಗಳಿಂದ ಬೆಳೆ ಹಾಗೂ ಬೆಲೆ ನಷ್ಟದಿಂದ ಹೊರಬರಲು ಈ ಭಾಗದ ಜನರು ಹೋಂಸ್ಟೇ ಹಾಗೂ ರೆಸಾರ್ಟ್ ಆರಂಭಿಸುವ ಮೂಲಕ ಒಂದಿಷ್ಟು ಆದಾಯ ಗಳಿಸಲು ಮುಂದಾಗಿದ್ದಾರೆ. ಪ್ರವಾಸಿಗರನ್ನು ಆಕರ್ಷಿಸಿ ಒಂದಷ್ಟು ವರಮಾನ ಗಳಿಸುವ ಉದ್ದಿಮೆಯನ್ನು ಇತ್ತೀಚೆಗೆ ಅವಲಂಬಿಸಿದ್ದಾರೆ. ಈಗ ಸರ್ಕಾರ ಹೊರಡಿಸಿರುವ ಅರಣ್ಯ ಒತ್ತುವರಿ ತೆರವು ಆದೇಶದಿಂದಾಗಿ ಏನು ಮಾಡಬೇಕು ಎನ್ನುವ ಜಿಜ್ಞಾಸೆ ಸ್ಥಳೀಯರನ್ನು ಕಾಡುತ್ತಿದೆ.
ಅರಣ್ಯ ಇಲಾಖೆ ಮಾಹಿತಿ ಪ್ರಕಾರ ಸಕಲೇಶಪುರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಸುಮಾರು 1350 ಎಕರೆ (ಸೆಕ್ಷನ್ 4) ಭೂಮಿ ಒತ್ತುವರಿ ಆಗಿರುವುದನ್ನು ಗುರುತಿಸಲಾಗಿದೆ. ಇನ್ನೂ 400-500 ಎಕರೆ ಒತ್ತುವರಿಯಾಗಿರುವ ಬಗ್ಗೆ ಅನುಮಾನವಿದೆ. ಹಾನುಬಾಳು ಹೋಬಳಿಯ ಮೂರುಕಣ್ಣು ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 7 ರೆಸಾರ್ಟ್‌ಗಳು ಅರಣ್ಯ ಭೂಮಿ ಒತ್ತುವರಿ ಮಾಡಿ ನಿರ್ಮಿಸಿರುವುದನ್ನು ಪತ್ತೆ ಹಚ್ಚಲಾಗಿದೆ ಎನ್ನಲಾಗಿದೆ.
1920 ರಲ್ಲಿ ಸುಮಾರು ಮೂರುಕಣ್ಣು ಗುಡ್ಡ ವ್ಯಾಪ್ತಿಯ 7,938 ಎಕರೆ ಭೂಮಿಯನ್ನು ಸೆಕ್ಷನ್ 4 (ಮೀಸಲು ಅರಣ್ಯ)ಗೆ ಸೇರಿಸಲಾಗಿದೆ. ಈ ಪೈಕಿ ಸುಮಾರು 1,500 ಎಕರೆಗೂ ಹೆಚ್ಚು ಒತ್ತುವರಿಯಾಗಿದೆ ಎಂಬುದು ಅರಣ್ಯ ಇಲಾಖೆಯ ಅಭಿಪ್ರಾಯ. ಈ ವ್ಯಾಪ್ತಿಯ ಕೃಷಿ ಭೂಮಿ ಅರಣ್ಯ ವ್ಯಾಪ್ತಿಗೆ ಸೇರಿದ್ದಲ್ಲಿ ತಮ್ಮ ಗತಿ ಏನು ಎಂಬುದು ರೈತರ ಆತಂಕವಾಗಿದೆ.
ಯಸಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಕೂಡ ಸುಮಾರು 350 ಎಕರೆಗೂ ಹೆಚ್ಚು ಅರಣ್ಯ ಭೂಮಿ ಒತ್ತುವರಿ ಆಗಿರುವುದನ್ನು ಗುರುತಿಸಲಾಗಿದೆ. ಇಲ್ಲಿ ಒಂದು ರೆಸಾರ್ಟ್ ಅಕ್ರಮವಾಗಿ ನಿರ್ಮಿಸಿರುವುದು ಕಂಡು ಬಂದಿದೆ. ಕ್ರಮ ಕೈಗೊಳ್ಳಲು ಮುಂದಾದ ಇಲಾಖೆ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿದೆ.
ಒತ್ತುವರಿ ತೆರವುಗೊಳಿಸುವ ಸಂಬಂಧ ಅರಣ್ಯ ಇಲಾಖೆ ಈಗಾಗಲೇ ಸಭೆ ನಡೆಸಿ ಹಂತ ಹಂತವಾಗಿ ಭೂಮಿ ತೆರವುಗೊಳಿಸಲು ತೀರ್ಮಾನ ಕೈಗೊಂಡಿದೆ. ಅಕ್ರಮ ರೆಸಾರ್ಟ್‌ಗಳಿಗೆ ಹಾಗೂ 10 ಎಕರೆಗೂ ಹೆಚ್ಚು ಒತ್ತುವರಿ ಮಾಡಿಕೊಂಡವರಿಗೆ ಮೊದಲ ಹಂತದಲ್ಲಿ ನೋಟಿಸ್ ಜಾರಿ ಮಾಡಿ, ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ನಿರ್ವಹಣೆ: ಚಿದಂಬರಪ್ರಸಾದ, ಪೂರಕ ಮಾಹಿತಿ: ಜಾನೇಕೆರೆ ಆರ್.ಪರಮೇಶ್, ಹರೀಶ್ ಎಂ.ಪಿ.
ಪಶ್ಚಿಮ ಘಟ್ಟದ ಬೆಟ್ಟದ ಸಾಲುಗಳ ಮೇಲೆ ಮಂಜು ಆವರಿಸಿರುವುದು.
ಸಕಲೇಶಪುರ ತಾಲ್ಲೂಕಿನ ಜಗಾಟ ಗ್ರಾಮ
ಕಂದಾಯ–ಅರಣ್ಯ ಇಲಾಖೆ ಮಧ್ಯೆ ಜಟಾಪಟಿ
ಜಮೀನಿಗೆ ಸಂಬಂಧಿಸಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಮಧ್ಯೆ ಜಟಾಪಟಿ ನಡೆಯುತ್ತಲೇ ಇದೆ. ಈ ಜಮೀನು ನಮ್ಮದು ಎಂದು ಅರಣ್ಯ ಇಲಾಖೆ ಹಕ್ಕು ಪ್ರತಿಪಾದಿಸುತ್ತಿದ್ದರೆ ಇದು ಕಂದಾಯ ಇಲಾಖೆಗೆ ಸೇರಿದ್ದು ಎನ್ನುವ ಮಾತು ಕಂದಾಯ ಅಧಿಕಾರಿಗಳದ್ದು. ಬಗರಹುಕುಂ ಹೇಮಾವತಿ ಜಲಾಶಯ ಸಂತ್ರಸ್ತರು ಸೇರಿದಂತೆ ಸರ್ಕಾರ ವಿವಿಧ ಯೋಜನೆಗಳಡಿ ಮಂಜೂರು ಮಾಡಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂಬ ಮಾತು ಅರಣ್ಯ ಅಧಿಕಾರಿಗಳಿಂದ ಕೇಳಿ ಬರುತ್ತಿದೆ. ಆದರೆ ಇದು ಕಂದಾಯ ಇಲಾಖೆಗೆ ಸೇರಿದ್ದರಿಂದ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ ಎನ್ನುತ್ತಾರೆ ಕಂದಾಯ ಅಧಿಕಾರಿಗಳು. ಕೆಡಿಪಿ ಸೇರಿದಂತೆ ಹಲವು ಸಭೆಗಳಲ್ಲಿ ಈ ವಿಷಯ ಪ್ರಸ್ತಾಪವಾಗಿದ್ದು ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಜಮೀನು ಗುರುತಿಸುವಂತೆ ಸೂಚನೆ ನೀಡಲಾಗಿದೆ. ಆದರೆ ಇದುವರೆಗೆ ಸರ್ವೆ ಮಾತ್ರ ಆಗುತ್ತಿಲ್ಲ. ಇದರಿಂದ ನಾವು ತೊಂದರೆ ಅನುಭವಿಸುವಂತಾಗಿದೆ ಎಂದು ಜನರು ದೂರುತ್ತಿದ್ದಾರೆ. ವಸ್ತುನಿಷ್ಠ ವರದಿಗೆ ಸೂಚನೆ 2015 ರ ನಂತರದಲ್ಲಿ ರಾಜ್ಯದ ಪಶ್ಚಿಮ ಘಟ್ಟ ಹಾಗೂ ಇತರ ಘಟ್ಟ ಪ್ರದೇಶದಲ್ಲಿ ಅರಣ್ಯ ಒತ್ತುವರಿ ಮಾಡಿ ನಿರ್ಮಿಸಿರುವ ಅಕ್ರಮ ರೆಸಾರ್ಟ್ ಹೋಂಸ್ಟೇ ತೋಟ ಬಡಾವಣೆ ಇನ್ನಿತರ ಒತ್ತುವರಿ ತೆರವು ಪ್ರಕರಣಗಳನ್ನು ಪರಿಶೀಲಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಆಗಸ್ಟ್ 23 ರಂದು ಪತ್ರ ಬರೆಯಲಾಗಿದೆ. ವೈಯಕ್ತಿಕವಾಗಿ ಗಮನ ಹರಿಸಿ ಪರಿಶೀಲಿಸಬೇಕು. ವಸ್ತುನಿಷ್ಠ ಮಾಹಿತಿಯನ್ನು ಕೂಡಲೇ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಶೀಘ್ರ ಸರ್ವೆ
ಎಲ್ಲೆಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂಬುದನ್ನು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಎಷ್ಟು ಒತ್ತುವರಿ ಆಗಿದೆ ಎಂಬುದನ್ನು ಸರ್ವೆ ಮಾಡಿದ ನಂತರವಷ್ಟೇ ಗೊತ್ತಾಗಬೇಕು. ಶೀಘ್ರದಲ್ಲಿ ಸರ್ವೆ ನಡೆಸಲಾಗುವುದು. ಸಚಿವರ ನಿರ್ದೇಶನದ ಮೇಲೆ ತಹಶೀಲ್ದಾರ್ ಒತ್ತವರಿ ತೆರವು ಮಾಡುತ್ತಾರೆ. ಡಾ.ಎಂ.ಕೆ. ಶ್ರುತಿ ಸಕಲೇಶಪುರ ಉಪವಿಭಾಗಾಧಿಕಾರಿ ರಕ್ಷಿತಾರಣ್ಯದಲ್ಲಿ ಇದ್ದರೆ ತೆರವು ಮಾಡಿ ರಕ್ಷಿತಾರಣ್ಯ ಪ್ರದೇಶದಲ್ಲಾದರೆ ಸುಪ್ರೀಂ ಕೋರ್ಟ್ ಆದೇಶದಂತೆ ತೆರವುಗೊಳಿಸಲಿ. ಡೀಮ್ಡ್ ಅರಣ್ಯ ಎಂದು ಹೇಳಿಕೊಂಡು ತೆರವುಗೊಳಿಸುವುದು ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಎಚ್.ಟಿ. ಮೋಹನ್‌ಕುಮಾರ್ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸರ್ಕಾರದ ನಿರ್ಧಾರದಲ್ಲೇ ಗೊಂದಲ ಒಂದೆಡೆ ಒತ್ತುವರಿ ಮಾಡಿಕೊಂಡಿರುವವರಿಗೆ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿದೆ. ಮತ್ತೊಂದೆಡೆ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ. ಸರ್ಕಾರದ ನಿರ್ಧಾರಗಳಲ್ಲಿಯೇ ಗೊಂದಲ ಉಂಟಾಗಿ ಒತ್ತುವರಿದಾರರ ನಿದ್ದೆಗೆಡಿಸಿದೆ. ಕೆ.ಎಸ್. ಕುಮಾರಸ್ವಾಮಿ ಹೋಂ ಸ್ಟೇ ಮಾಲೀಕರ ಸಂಘದ ಸಕಲೇಶಪುರ ತಾಲ್ಲೂಕು ಘಟಕದ ಅಧ್ಯಕ್ಷ ಹಿಡುವಳಿ ತೋಟಗಳಲ್ಲಿ ರೆಸಾರ್ಟ್ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನು ಹಿಡುವಳಿ ತೋಟಗಳಲ್ಲಿ ಹಾಲಿ ವಾಸ ಮಾಡುತ್ತಿರುವ ಮನೆಗಳಲ್ಲಿ ಮಾಡಿಕೊಳ್ಳಲಾಗಿದೆ. ಹಿಡುವಳಿ ಹೊರತುಪಡಿಸಿ ಅರಣ್ಯ ಇಲಾಖೆಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಮಸ್ತಾರೆ ಲೋಕೇಶ್ ರೆಸಾರ್ಟ್ ಮಾಲೀಕರ ಸಂಘದ ಸಕಲೇಶಪುರ ತಾಲ್ಲೂಕು ಘಟಕದ ಅಧ್ಯಕ್ಷ ಕಂದಾಯ ಇಲಾಖೆ ಜಾಗ ಬಿಟ್ಟುಕೊಡಿ ಕಂದಾಯ ಇಲಾಖೆಯ ಜಾಗವನ್ನು ಸಾಮಾಜಿಕ ಅರಣ್ಯಕ್ಕೆ ತೆಗೆದುಕೊಂಡಿರುವ ಅರಣ್ಯ ಇಲಾಖೆ ಬಿಟ್ಟು ಕೊಡುತ್ತಿಲ್ಲ. ಅರಣ್ಯ ಇಲಾಖೆಯವರು ಪಡೆದಿರುವ ಕಂದಾಯ ಇಲಾಖೆ ಜಾಗವನ್ನು ಮೊದಲು ಬಿಟ್ಟುಕೊಡಬೇಕು. ನಮಗೆ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಸಿಮೆಂಟ್ ಮಂಜು ಶಾಸಕ