ADVERTISEMENT

ಹಾಸನ: ಗೃಹಲಕ್ಷ್ಮಿಯರಿಗೆ ಜಿಎಸ್‌ಟಿ, ಐಟಿ ಕಂಟಕ

ಯೋಜನೆ ಲಾಭ ಪಡೆಯುತ್ತಿರುವ 4.30 ಲಕ್ಷ ಫಲಾನುಭವಿಗಳು

​ಪ್ರಜಾವಾಣಿ ವಾರ್ತೆ
Published 22 ಮೇ 2024, 6:52 IST
Last Updated 22 ಮೇ 2024, 6:52 IST
<div class="paragraphs"><p>ಗೃಹಲಕ್ಷ್ಮಿ ಯೋಜನೆ</p></div>

ಗೃಹಲಕ್ಷ್ಮಿ ಯೋಜನೆ

   

ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಜಾರಿಯಾಗಿ 10 ತಿಂಗಳು ಕಳೆದಿವೆ. ಜಿಲ್ಲೆಯಲ್ಲಿ ಶೇ 93.27 ರಷ್ಟು ಪ್ರಗತಿ ಸಾಧಿಸಲಾಗಿದ್ದು, 4,38,025 ಮಂದಿ ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ.

ಆದರೆ ಪ್ರತಿ ತಿಂಗಳು ಒಂದಲ್ಲ ಒಂದು ರೀತಿಯಿಂದ ಕೆಲ ಫಲಾನುಭವಿಗಳಿಗೆ ಹಣ ಜಮೆ ಆಗುತ್ತಿಲ್ಲ. ಇದಕ್ಕೆ ಸರ್ಕಾರವೋ ಅಥವಾ ಇಲಾಖೆ ಕಾರಣವೋ ಎಂಬ ಅನುಮಾನ ಜಿಲ್ಲೆಯ ಜನರನ್ನು ಕಾಡುತ್ತಿದೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 4,69,652 ಅರ್ಹ ಫಲಾನುಭವಿಗಳಿದ್ದು, ಇವರಲ್ಲಿ 4,38,025 ಮಂದಿ ನೋಂದಣಿ ಮಾಡಿದ್ದಾರೆ. 31,904 ಫಲಾನುಭವಿಗಳು ನೋಂದಣಿ ಬಾಕಿ ಇದ್ದು, ಹಂತಹಂತವಾಗಿ ನೋಂದಣಿ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ಕುಮಾರ್ ತಿಳಿಸಿದ್ದಾರೆ.

ಇದರಲ್ಲಿ ಪಡಿತರ ಚೀಟಿ ತಿದ್ದುಪಡಿ ಆಗಿರುವ ಫಲಾನುಭವಿಗಳು 12,651, ವಲಸಿಗರು 11,084, ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿದಾರರು 5,738, ಮರಣ ಹೊಂದಿರುವ ಫಲಾನುಭವಿಗಳು 2,431 ಮಂದಿ ಇದ್ದಾರೆ.

2023 ರ ಆಗಸ್ಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತು ಜಿಲ್ಲೆಯ ಫಲಾನುಭವಿಗಳಿಗೆ ತಲುಪಿದ್ದು, ₹ 77,75,84,000 ಪಾವತಿ ಮಾಡಲಾಗಿತ್ತು. 2024 ಮೇನಲ್ಲಿ ₹80,44,40,000 ಅನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ.

ಪ್ರತಿ ತಿಂಗಳು ಫಲಾನುಭವಿಗಳು ಹಾಗೂ ಹಣ ಪಾವತಿ ಅಂಕಿ–ಅಂಶದಲ್ಲಿ ವ್ಯತ್ಯಾಸ ಆಗುತ್ತಿದ್ದು, ಸರ್ಕಾರ ಹಾಗೂ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಹಣ ಜಮೆ ಆಗುವಾಗ ಆಗುವ ವ್ಯತ್ಯಾಸದಿಂದ ಕೆಲ ಫಲಾನುಭವಿಗಳ ಖಾತೆ ಹಣ ಜಮೆ ಆಗುತ್ತಿಲ್ಲ.

ಇದಕ್ಕೆ ಉದಾಹರಣೆ ಎಂಬಂತೆ 2024ರ ಏಪ್ರಿಲ್‌ನಲ್ಲಿ 3,66,098 ಮಂದಿಗೆ ಹಣ ಜಮೆಯಾದರೆ, ಮೇನಲ್ಲಿ 4,02,220 ಮಂದಿಗೆ ಹಣ ಜಮೆಯಾಗಿದೆ.

ಜಿಎಸ್‌ಟಿ ಕಂಟಕ: ಜಿಲ್ಲೆಯಲ್ಲಿ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿದಾರರಾಗಿ ಗುರುತಿಸಿರುವ 5,738 ಮಂದಿ ಯೋಜನೆಯಿಂದ ವಂಚಿತರಾಗಿದ್ದಾರೆ.

ಆದರೆ ಇವರಲ್ಲಿ ಕೆಲ ಮಂದಿ ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಪಾವತಿದಾರರಾಗಿಲ್ಲ. ಅದಾಗ್ಯೂ ಅವರು ಯೋಜನೆಯಿಂದ ಹೊರಗೆ ಉಳಿಯುವಂತಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಇದಕ್ಕೆ ಉದಾಹರಣೆ ಎಂಬಂತೆ ಸಾಲಗಾಮೆ ಹೋಬಳಿಯ ಖಾಸಗಿ ಉದ್ಯೋಗಿ ಎ.ಜೆ. ಕೇಶವ ಅವರು, ತಮ್ಮ ತಾಯಿಯ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಎಲ್ಲ ದಾಖಲೆಯನ್ನು ಒದಗಿಸಿ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.

‘ಹಲವಾರು ತಿಂಗಳು ಕಳೆದಿವೆ. ಆದರೆ ಇದುವರೆಗೂ ಒಂದು ಕಂತಿನ ಹಣವೂ ಜಮೆ ಆಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕಚೇರಿಯಲ್ಲಿ ಪರಿಶೀಲಿಸಿದಾಗ, ಜಿಎಸ್‌ಟಿ ಪಾವತಿದಾರರು ಎಂಬ ಕಾರಣಕ್ಕೆ ಅರ್ಜಿ ತಿರಸ್ಕೃತಗೊಂಡಿದೆ ಎಂದು ಮಾಹಿತಿಯನ್ನು ದಾಖಲೆಯಲ್ಲಿ ತೋರಿಸಲಾಗುತ್ತಿದೆ’ ಎಂದು ಕೇಶವ್‌ ತಿಳಿಸಿದರು.

ಜಿಎಸ್‌ಟಿ ಪಾವತಿದಾರರಲ್ಲ ಎಂಬ ಬಗ್ಗೆ ಅಗತ್ಯ ದಾಖಲೆ ಒದಗಿಸಿದರೂ 8–10 ತಿಂಗಳಿನಿಂದ ಗೃಹಲಕ್ಷ್ಮಿಯ ಹಣ ತಾಯಿಯ ಖಾತೆಗೆ ಜಮೆ ಆಗಿಲ್ಲ. ಈ ಬಗ್ಗೆ ಇಲಾಖೆಯ ಜಿಲ್ಲಾ ಕೇಂದ್ರದಲ್ಲಿ ವಿಚಾರಿಸಿದರೆ, ಕೇಂದ್ರ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಅದೇ ರೀತಿ ಹಲವು ಮಂದಿ ಜಿಎಸ್‌ಟಿ ಪಾವತಿ ಮಾಡದೇ ಇದ್ದರೂ, ಅವರಿಗೆ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ. ಇನ್ನು ಕೆಲವರು ಕೆವೈಸಿ ಹಾಗೂ ಎನ್‌ಪಿಸಿಐ (ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ) ನೋಂದಣಿ ಮಾಡಿಸದ ಕಾರಣ ಗೃಹಲಕ್ಷ್ಮಿ ಹಣದಿಂದ ವಂಚಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.