ಎಚ್.ಎಸ್.ಅನಿಲ್ ಕುಮಾರ್
ಹಳೇಬೀಡು: ಪಟ್ಟಣದಲ್ಲಿ ಜೂನ್ ತಿಂಗಳು ಮುಗಿದರೂ ಮೇ ಪ್ಲವರ್ (ಗುಲ್‌ಮೊಹರ್) ಅರಳಿ ನಿಂತಿದ್ದು, ಪ್ರವಾಸಿಗರಿಗೆ ಆಕರ್ಷಣೆಯಾಗಿವೆ. ಶಾಂತಲಾ ಮಯೂರ ಹೊಟೇಲ್, ಬಸ್ ನಿಲ್ದಾಣ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಅರಳಿರುವ ಗುಲ್‌ಮೊಹರ್ ಪ್ರವಾಸಿತಾಣದ ಸೊಬಗನ್ನು ಹೆಚ್ಚಿಸಿವೆ.
ಮೇ ತಿಂಗಳಿನಲ್ಲಿ ಗುಲ್‌ಮೊಹರ್ ಅರಳುತ್ತಿದ್ದು, ಈ ಸಮಯದಲ್ಲಿಯೇ ಬಸವ ಜಯಂತಿ ಬರುತ್ತದೆ. ಬಸವ ಜಯಂತಿ ಮುನ್ನಾ ದಿನವೇ ಮರದಲ್ಲಿ ಮೊಗ್ಗು ಸಹ ಇಲ್ಲದಂತೆ ಮರಗಳು ಖಾಲಿಯಾಗುತ್ತಿದ್ದವು. ಬಸವ ಜಯಂತಿಯ ದಿನ ಎತ್ತುಗಳ ಅಲಂಕಾರಕ್ಕೆ ಗುಲ್‌ಮೊಹರ್ ಹೂವನ್ನು ಬಳಸುವ ಪದ್ದತಿ ಹಳೇಬೀಡು ಭಾಗದಲ್ಲಿ ನಡೆದುಕೊಂಡು ಬಂದಿದೆ. ಬಹುತೇಕ ಸ್ಥಳೀಯರಿಗೆ ಗುಲ್‌ಮೊಹರ್ ಹೆಸರು ತಿಳಿದಿಲ್ಲ. ಈಗಲೂ ಹಳೇಬೀಡು ಭಾಗದ ಸಾಕಷ್ಟು ಮಂದಿ ಬಸವನ ಹೂವು ಎಂದೇ ಕರೆಯುತ್ತಾರೆ.
ಟ್ರ್ಯಾಕ್ಟರ್‌ನೊಂದಿಗೆ ಬೇಸಾಯಕ್ಕೆ ಅಗತ್ಯವಿರುವ ಯಂತ್ರೋಪಕರಣಗಳು ಬಂದಿರುವುದರಿಂದ ಕೃಷಿಯಲ್ಲಿ ಎತ್ತುಗಳ ಬಳಕೆ ಕಡಿಮೆಯಾಗಿದೆ. ಇಂದಿನ ಯುವಕರಲ್ಲಿ ಎತ್ತುಗಳನ್ನು ಪಳಗಿಸಿಕೊಂಡು ಕೃಷಿ ಮಾಡುವ ಆಸಕ್ತಿಯೂ ಇಲ್ಲದಂತಾಗಿದೆ. ಬೆರೆಳಣಿಕೆಯಷ್ಟು ರೈತರ ಮನೆಯಲ್ಲಿ ಮಾತ್ರ ಎತ್ತುಗಳಿವೆ. ಬಸವ ಜಯಂತಿ ಬಂದರೂ ಗುಲ್‌ಮೊಹರ್ ಮರ ಹತ್ತುವವರೆ ಇಲ್ಲದಂತಾಗಿದೆ. ಹೀಗಾಗಿ ಜೂನ್ ತಿಂಗಳು ಮುಗಿದರೂ ಗುಲ್‌ಮೊಹರ್ ಮರಗಳು ಅಂದವಾಗಿ ಕಂಗೊಳಿಸುತ್ತಿವೆ ಎಂಬ ಮಾತು ರೈತರಿಂದ ಕೇಳಿ ಬಂತು.
ಹಿಂದೆ ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಹೆಚ್ಚಾಗಿ ಮದುವೆ ಮೊದಲಾದ ಶುಭ ಕಾರ್ಯಗಳು ನಡೆಯುತ್ತಿದ್ದವು. ತೆಂಗಿನ ಸೋಗೆಯ ಮದುವೆ ಚಪ್ಪರಕ್ಕೆ ಮಾವಿನ ತೋರಣ ಹಾಗೂ ಸಣ್ಣರಂಬೆಗಳ ಸಮೇತ ಗುಲ್‌ಮೊಹರ್ ಹೂವಿನಿಂದಲೂ ಮದುವೆ ಚಪ್ಪರ ಹಾಗೂ ಮೂಹೂರ್ತ ನಡೆಸುವ ಧಾರೆ ಮಂಟಪ ಅಲಂಕಾರ ಮಾಡುತ್ತಿದ್ದರು. ಈಗ ಮನೆಗಳ ಮುಂದೆ ವಿವಾಹ ಮಹೋತ್ಸವ ನಡೆಯುತ್ತಿಲ್ಲ. ಹಳ್ಳಿಗರು ಸಹ ನಗರದ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಸುತ್ತಿದ್ದಾರೆ. ಕಲ್ಯಾಣ ಮಂಟಪದಲ್ಲಿ ಭಾರಿ ವೆಚ್ಚದ ಅಲಂಕಾರಕ್ಕೆ ಜನ ಹಣ ಕೊಡುತ್ತಿದ್ದಾರೆ. ವಿವಾಹ ಮಹೋತ್ಸವ ಹೈಟೆಕ್ ಆಗಿರುವುದರಿಂದಲೂ ಗುಲ್‌ಮೊಹರ್ ಮರದ ಹತ್ತಿರ ಸುಳಿಯುವವರು ಇಲ್ಲವಾಗಿದೆ ಎಂದು ರೈತ ಜಗದೀಶ ತಿಳಿಸಿದರು.
ಮೇ ತಿಂಗಳು ಮರದಲ್ಲಿರುವ ಕೆಂಪು ಹೂವುಗಳೆಲ್ಲ ಖಾಲಿಯಾಗಿ ಹೊಸದಾಗಿ ಹಸಿರು ಚಿಗುರೊಡೆಯುತ್ತಿತ್ತು. ಈಗ ಚಿಗುರಿನ ಜೊತೆಯಲ್ಲಿಯೇ ಕೆಂಪಾದ ಹೂವುಗಳು ಮರದಲ್ಲಿ ವಿಶೇಷ ಆಕರ್ಷಣೆ ನೀಡುತ್ತಿವೆ. ಪುಷ್ಪಲೋಕದ ಅಪ್ಸರೆಯಂತೆ ಗುಲ್‌ಮೊಹರ್ ಮರಗಳು ಪ್ರವಾಸಿಗರು ಹಾಗೂ ದಾರಿಹೋಕರ ಕಣ್ಮನ ಸೆಳೆಯುತ್ತಿವೆ. ಶಾಂತಲಾ ಮಯೂರ ಹೋಟೆಲ್, ಹೊಯ್ಸಳೇಶ್ವರ ದೇವಾಲಯದ ಬಳಿ ಇರುವುದರಿಂದ ಗುಲ್‌ಮೊಹರ್ ಮರಗಳು ಶಿಲ್ಪಕಲಾ ಸೌಂದರ್ಯವನ್ನು ಹೆಚ್ಚಿಸಿವೆ.
ಹೂವಿನ ಎಸಳು ಶಾಂತಲಾ ಮಯೂರ ಹೋಟೆಲ್ ಆವರಣದ ರಸ್ತೆ ಹಾಗೂ ಉದ್ಯಾನದಲ್ಲಿ ಉದುರಿ ಹೂವಿನ ಹಾಸಿಗೆಯಂತಾಗಿದೆ. ಮರದಲ್ಲಿ ಅರಳಿರುವ ಹಾಗೂ ಬಾಡಿ ನೆಲಕ್ಕೆ ಉದುರಿರುವ ಹೂವು ಸಹ ರಂಂಗಾಗಿರುವುದರಿಂದ ದೂರದಿಂದ ನೋಡುವವರಿಗೂ ಮನಸ್ಸನ್ನು ಸೆಳೆಯವ ಜೊತೆ ಹಿತಾನುಭ
ನೀಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.