ADVERTISEMENT

ಹಾಸನ | ಎಚ್‌.ಡಿ. ದೇವೇಗೌಡರ ಭೇಟಿ: ಜೆಡಿಎಸ್‌ನಲ್ಲಿ ಸಂಚಲನ

ಮೈತ್ರಿ ಮುನಿಸು ಬಗೆಹರಿಸುವರೆ ಎಚ್‌.ಡಿ.ಡಿ ? l ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕಾರ್ಯಯೋಜನೆ; ಇಂದು ಸಭೆ

ಚಿದಂಬರಪ್ರಸಾದ್
Published 31 ಆಗಸ್ಟ್ 2024, 8:11 IST
Last Updated 31 ಆಗಸ್ಟ್ 2024, 8:11 IST
ಎಚ್‌.ಡಿ ದೇವೇಗೌಡ
ಎಚ್‌.ಡಿ ದೇವೇಗೌಡ    

ಹಾಸನ: ಲೋಕಸಭೆ ಚುನಾವಣೆಯ ನಂತರ ಮೊದಲ ಬಾರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ಜಿಲ್ಲೆಗೆ ಭೇಟಿ ನೀಡಲಿದ್ದು, ಜಿಲ್ಲಾ ಘಟಕದಲ್ಲಿ ಹೊಸ ಸಂಚಲನ ಮೂಡಿಸಿದೆ.

‘ಕೇಂದ್ರ– ರಾಜ್ಯ ಮಟ್ಟದಲ್ಲಿ ಜೆಡಿಎಸ್‌–ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದರೂ, ಜಿಲ್ಲೆಯ ಮಟ್ಟಿಗೆ ಮೈತ್ರಿ ಅಷ್ಟಕ್ಕಷ್ಟೇ ಎನ್ನುವಂತಿದೆ. ಅದರಲ್ಲೂ, ಇತ್ತೀಚೆಗಷ್ಟೇ ಮುಗಿದಿರುವ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯ ನಂತರ ಬಿಜೆಪಿ–ಜೆಡಿಎಸ್‌ ಮೈತ್ರಿಯಲ್ಲಿ ಕಾಣಿಸಿಕೊಂಡಿರುವ ಬಿರುಕು ಸರಿಪಡಿಸುವ ನಿಟ್ಟಿನಲ್ಲಿಯೂ ಈ ಭೇಟಿ ಮಹತ್ವದ್ದು’ ಎನ್ನಲಾಗಿದೆ.

‘ಬಿಜೆಪಿ ಜೊತೆಗೆ ಮುಖಂಡರ ಮುನಿಸು ಕೂಡ ಹೆಚ್ಚುತ್ತಿದ್ದು, ಅದನ್ನು ನಿವಾರಿಸುವ ಜವಾಬ್ದಾರಿ ದೇವೇಗೌಡರ ಹೆಗಲೇರಿದೆ. ಈ ನಿಟ್ಟಿನಲ್ಲಿಯೂ ಗಂಭೀರ ಚರ್ಚೆಗಳಾಗುವ ಸಾಧ್ಯತೆಗಳಿವೆ’ ಎಂದು ಹೇಳಲಾಗುತ್ತಿದೆ.

ADVERTISEMENT

‘ಲೋಕಸಭೆ ಚುನಾವಣೆ ಬಳಿಕ ಜಿಲ್ಲೆಯಲ್ಲಿ ಎಚ್‌.ಡಿ. ರೇವಣ್ಣ ಕುಟುಂಬದ ವಿರುದ್ಧದ ಆರೋಪಗಳು, ಎಸ್‌ಐಟಿ ತನಿಖೆ ಸೇರಿದಂತೆ ಹಲವಾರು ಘಟನೆಗಳು ಕಾರ್ಯಕರ್ತರ ಉತ್ಸಾಹವನ್ನು ಕುಂದಿಸಿದೆ. ಈ ನಡುವೆಯೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಪಕ್ಷಕ್ಕೆ ದೇವೇಗೌಡರ ಭೇಟಿಯು ಮತ್ತಷ್ಟು ಉತ್ಸಾಹ ನೀಡಲಿದೆ’ ಎನ್ನುತ್ತಾರೆ ಮುಖಂಡರು.

ಹಾಸನ ನಗರಸಭೆಯಲ್ಲಿ ಬಿಜೆಪಿಯನ್ನು ಪಕ್ಕಕ್ಕಿಟ್ಟು ಪಕ್ಷ ಅಧಿಕಾರ ಪಡೆದಿದೆ. ಅರಸೀಕೆರೆ ನಗರಸಭೆಯಲ್ಲೂ ಪಕ್ಷದ ಪ್ರತ್ಯೇಕ ಗುಂಪು ಅಧಿಕಾರ ಹಿಡಿದಿದೆ. ಸಕಲೇಶಪುರ, ಚನ್ನರಾಯಪಟ್ಟಣ ಪುರಸಭೆಯಲ್ಲಿ ಸ್ವಂತ ಬಲದ ಮೇಲೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನವನ್ನು ಪಡೆದಿದೆ. ಅರಕಲಗೂಡು, ಆಲೂರು ಪಟ್ಟಣ ಪಂಚಾಯಿತಿಯಲ್ಲಿ ಮೈತ್ರಿ ಭಿನ್ನಾಭಿಪ್ರಾಯದ ಲಾಭ ಪಡೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಇಂತಹ ಪರಿಸ್ಥಿತಿಯಲ್ಲಿ ದೇವೇಗೌಡರು ಭೇಟಿ ನೀಡುತ್ತಿದ್ದು, ‘ಮೈತ್ರಿಯನ್ನು ಜಿಲ್ಲೆಯಲ್ಲಿ ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ಸಿಗಬಹುದು’ ಎಂಬ ನಿರೀಕ್ಷೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಕಾಯುತ್ತಿದ್ದಾರೆ.

‘ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದೇವೇಗೌಡರು, ಮುಖಂಡರಿಗೆ ಸಲಹೆ, ಸೂಚನೆಗಳನ್ನು ನೀಡಲಿದ್ದು, ಅದಕ್ಕೆ ಅನುಗುಣವಾಗಿ ಕಾರ್ಯಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೂ ಪಕ್ಷವನ್ನು ಸಜ್ಜುಗೊಳಿಸಬೇಕಾಗಿದ್ದು, ಈಗಿನಿಂದಲೇ ಸಂಘಟನೆಯನ್ನು ಬಲಪಡಿಸಲು ನಿರ್ಧರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕೈಗಾರಿಕೆ ಸ್ಥಾಪನೆಗೆ ಆದ್ಯತೆ

ಎಚ್‌.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಕೈಗಾರಿಕಾ ಸಚಿವರಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಜೆಡಿಎಸ್‌ ಮುಖಂಡರು ಆಸಕ್ತಿ ಹೊಂದಿದ್ದಾರೆ.

ಶಾಸಕ ಸ್ವರೂಪ್‌ ಪ್ರಕಾಶ್ ಕೂಡ ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ.

ಇದೀಗ ದೇವೇಗೌಡರ ಮೂಲಕ ಜಿಲ್ಲೆಯ ಜೆಡಿಎಸ್‌ ವರಿಷ್ಠರು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬಹುದು ಎನ್ನಲಾಗಿದೆ.

ದೇಗುಲಗಳಲ್ಲಿ ಪೂಜೆ

ಎಚ್‌.ಡಿ. ದೇವೇಗೌಡರು ಆಗಸ್ಟ್ 31 ರಂದು ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಬರಲಿದ್ದು, ನೇರವಾಗಿ ಮಾವಿನಕೆರೆ ಬೆಟ್ಟಕ್ಕೆ ತೆರಳಿ ರಂಗನಾಥ ಸ್ವಾಮಿಗೆ ಕಡೆಯ ಶ್ರಾವಣ ಶನಿವಾರದ ವಿಶೇಷ ಪೂಜೆ ಸಲ್ಲಿಸುವರು.

ನಂತರ ಹುಟ್ಟೂರು ಹರದನಹಳ್ಳಿಯಲ್ಲಿ ಮನೆದೇವರು ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವರು. ಸಂಜೆ ಬೆಂಗಳೂರಿಗೆ ಪ್ರಯಾಣ ಬೆಳಸುವರು ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗೆರೆ ರಘು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.