ಹಳೇಬೀಡು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಎಡಬಿಡದೇ ಮಳೆ ಸುರಿಯುತ್ತಿದ್ದು, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಸುತ್ತ ಮಂಗಳವಾರ ವ್ಯಾಪಾರ, ವಹಿವಾಟು ಕುಸಿದಿತ್ತು.
ದಸರಾ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮಳೆಯಲ್ಲಿಯೇ ಪ್ರವಾಸಿಗರು ಕಷ್ಟಪಟ್ಟು ಹೊಯ್ಸಳೇಶ್ವರ ದೇವಾಲಯ ವೀಕ್ಷಿಸಿದರು. ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ಹಳೇಬೀಡಿಗೆ ಬಂದಿದ್ದ ಪ್ರವಾಸಿಗರು ಸುರಕ್ಷಿತವಾಗಿ ವಾಪಸ್ ತೆರಳುವ ತವಕದಲ್ಲಿದ್ದರು.
ಮಳೆಯಿಂದ ಪ್ರಯಾಣಕ್ಕೆ ತೊಡಕಾಗುತ್ತದೆಯೇ? ಮುಂದಿನ ಪ್ರವಾಸದ ಪರಿಸ್ಥಿತಿ ಹೇಗಿರುತ್ತದೆ ಎಂಬ ಚಿಂತೆ ಪ್ರವಾಸಿಗರನ್ನು ಕಾಡುತ್ತಿತ್ತು. ಮಳೆಯಿಂದ ತಮಗೆ ಬೇಕಾದ ವಸ್ತು ಖರೀದಿ ಮಾಡುವ ಆಸಕ್ತಿ ಪ್ರವಾಸಿಗರಿಗೆ ಇರಲಿಲ್ಲ. ತಿಂಡಿ ತಿನಿಸುಗಳನ್ನು ಸೇವಿಸುವ ಆಸಕ್ತಿಯೂ ಇಲ್ಲದಂತಾಗಿತ್ತು.
ನಕ್ಷತ್ರಾಕಾರದ ಜಗುಲಿಯ ಮೇಲೆ ಓಡಾಡಿಕೊಂಡು, ಹೊರ ಗೋಡೆಯಲ್ಲಿರುವ ಶಿಲ್ಪಕಲೆ ಹಾಗೂ ಪುರಾಣ ಪುಣ್ಯಕಥೆಯ ಬಿಂಬಿಸುವ ವಿಗ್ರಹ ವೀಕ್ಷಣೆ ಮಾಡುವುದು ಹೊಯ್ಸಳೇಶ್ವರ ದೇವಾಲಯದ ವಿಶೇಷ. ಆದರೆ, ಮಳೆ ಇದ್ದುದರಿಂದ ಪ್ರವಾಸಿಗರು ದೇವಾಲಯ ವೀಕ್ಷಣೆ ಮಾಡಲು ತೊಂದರೆ ಆಯಿತು.
ಕೆಲವು ಪ್ರವಾಸಿಗರು ಛತ್ರಿ ಹಿಡಿದು ಶಿಲ್ಪಕಲೆ ವೀಕ್ಷಿಸಿದರು.
ಯುವಕರು ಮಳೆಯಲ್ಲಿ ನೆನೆಯುವುದನ್ನು ಲೆಕ್ಕಿಸದೇ ದೇವಾಲಯ ಸುತ್ತಾಡಿದರು. ಮತ್ತಷ್ಟು ಮಂದಿ ದೇವಾಲಯ ಒಳ ಪ್ರವೇಶಿಸಿ ಗರ್ಭಗುಡಿಯ ಹೊಯ್ಸಳೇಶ್ವರ ಹಾಗೂ ಶಾಂತಲೇಶ್ವರ ದರ್ಶನ ಮಾಡಿ ಶಿಲ್ಪಕಲೆ ವೀಕ್ಷಿಸದೇ ಹಿಂದಿರುಗಿದರು.
ಹೊಯ್ಸಳೇಶ್ವರ ದೇವಾಲಯ ವೀಕ್ಷಿಸಿದ ಸಾಕಷ್ಟು ಪ್ರವಾಸಿಗರು ಹೊರ ಆವರಣದಲ್ಲಿ ಓಡಾಡಿಕೊಂಡು ಎಳನೀರು, ಚಹಾ, ಕಾಫಿ, ತಿಂಡಿ ತಿನಿಸು ಸೇವಿಸುತ್ತಾರೆ. ಬೇಕಾದ ವಸ್ತುಗಳನ್ನು ಖರೀದಿಸುತ್ತಾರೆ. ಮಳೆ ಸುರಿಯುತ್ತಿದ್ದರಿಂದ ವ್ಯಾಪಾರ ಕುಸಿದಿತ್ತು.
‘ದಸರಾ ರಜೆಯಿಂದಾಗಿ ಪ್ರವಾಸಿ ಗರು ದೇವಾಲಯ ವೀಕ್ಷಣೆಗೆ ಬಂದಿ ದ್ದರು. ಹೊರ ರಾಜ್ಯದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು ಕಂಡು ಬಂತು. ತಮಿಳುನಾಡಿನಲ್ಲಿ ಮಳೆ ಹೆಚ್ಚಾಗಿ ರುವುದರಿಂದ ಅಲ್ಲಿಯ ಪ್ರವಾಸಿಗರ ಸುಳಿವೇ ಇರಲಿಲ್ಲ. ತಮಿಳುನಾಡು ಪ್ರವಾಸಿಗರು ಬಂದರೆ ವ್ಯಾಪಾರ ನಡೆಯುತ್ತದೆ’ ಎಂದು ಚಹಾ ಅಂಗಡಿ ಮಾಲೀಕ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.