ADVERTISEMENT

ಹಾಸನ: ಪತ್ನಿ ಮನೆಯವರಿಂದ ಕಿರುಕುಳ ಪತಿ ಅತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 4:34 IST
Last Updated 30 ಜನವರಿ 2023, 4:34 IST

ಹಾಸನ: ತನ್ನ ಆಸ್ತಿಯನ್ನು ಪತ್ನಿಯ ಹೆಸರಿಗೆ ಬರೆದುಕೊಡುವಂತೆ ಪತ್ನಿಯ ಪೋಷಕರು ಹಾಗೂ ಸಂಬಂಧಿಕರು ಒತ್ತಡ ಹೇರಿದ್ದಲ್ಲದೇ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿಯ ಕೊಕ್ಕನಘಟ್ಟ ಗ್ರಾಮದ ಪದ್ಮರಾಜು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 6 ವರ್ಷಗಳ ಹಿಂದೆ ಪದ್ಮರಾಜು ಹಾಗೂ ಹೇಮಲತಾರ ವಿವಾಹ ಆಗಿತ್ತು. ಆಸ್ತಿಯನ್ನು ತನಗೆ ಬರೆದುಕೊಂಡು ಪತ್ನಿ ಹೇಮಲತಾ, ಆಕೆಯ ತಂದೆ ಸುರೇಶ್, ತಾಯಿ ಸುರಕ್ಷಣಿ, ಸಂಬಂಧಿಕರಾದ ಚೈತ್ರಾ, ನಂದೀಶ್, ಹಂಸ, ಮಂಜುನಾಥ, 3 ವರ್ಷಗಳಿಂದ ಪದ್ಮರಾಜು ಅವರಿಗೆ ಕಿರುಕುಳ ನೀಡುತ್ತಿದ್ದಾರೆ.

ಪದ್ಮರಾಜು ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮಾನಸಿಕ ಮತ್ತು ದೈಹಿಕರವಾಗಿ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕಿದ್ದರು. ಈಗ್ಗೆ 15 ದಿನಗಳ ಹಿಂದೆ ಪದ್ಮರಾಜು, ತನ್ನ ತಂದೆಗೆ ಈ ವಿಷಯ ತಿಳಿಸಿದ್ದರು. ಇದರಿಂದ ಮನನೊಂದು ಶನಿವಾರ ಮಧ್ಯಾಹ್ನ ಜಮೀನಿನ ಕೆರೆಯ ಬಳಿ ವಿಷ ಸೇವಿಸಿದ್ದರು. ಅವರನ್ನು ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸಂಜೆ ಮೃತಪಟ್ಟಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮಾಂಗಲ್ಯ ಸರ ಕಿತ್ತು ಪರಾರಿ
ನಗರದ ಸತ್ಯಮಂಗಲದ ಕೆಎಚ್‌ಬಿ ಬಡಾವಣೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಶನಿವಾರ ಮಧ್ಯಾಹ್ನ ಪುಟ್ಟಮ್ಮ ಅವರು ಅಂಗಡಿಯಿಂದ ಮೊಸರು ತೆಗೆದುಕೊಂಡು ಮನೆಗೆ ಹೋಗುತ್ತಿದ್ದಾಗ, ಬೈಕ್‍ನಲ್ಲಿ ಬಂದು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ, ₹ 1.25 ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಪುಟ್ಟಮ್ಮ ನೀಡಿರುವ ದೂರಿನಂತೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.