ADVERTISEMENT

ದೌರ್ಜನ್ಯವಲ್ಲ, ವಿಕೃತ ಲೈಂಗಿಕ ಹತ್ಯಾಕಾಂಡ: ಲೇಖಕಿ ರೂಪ ಹಾಸನ

​ಪ್ರಜಾವಾಣಿ ವಾರ್ತೆ
Published 30 ಮೇ 2024, 23:30 IST
Last Updated 30 ಮೇ 2024, 23:30 IST
   

ಹಾಸನ: ‘ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಬೇಕು ಹಾಗೂ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿ, ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಹಾಸನ ಚಲೋ’ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸಹಸ್ರಾರು ಮಂದಿ ಆಕ್ರೋಶ ದಾಖಲಿಸಿದರು.

ನಗರದ ಮಹಾರಾಜಾ ಪಾರ್ಕ್‌ನಿಂದ ಮೆರವಣಿಗೆ ಆರಂಭಿಸಿದ ಸದಸ್ಯರು, ‘ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಬೇಕು. ಮಹಿಳೆಯರಿಗೆ ರಕ್ಷಣೆ ನೀಡಬೇಕು. ಅವರ ನೆರವಿಗೆ ಸರ್ಕಾರ ನಿಲ್ಲಬೇಕು. ಪೆನ್‌ಡ್ರೈವ್‌ ಹಂಚಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ದಾರಿಯುದ್ದಕ್ಕೂ ಪ್ರಜ್ವಲ್‌ ವಿರುದ್ಧ ಘೋಷಣೆಗಳನ್ನು ಕೂಗಿದ ಸದಸ್ಯರು, ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಬಹಿರಂಗ ಸಭೆ ನಡೆಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಲೇಖಕಿ ರೂಪ ಹಾಸನ ಮಾತನಾಡಿ, ‘ಇದು ಲೈಂಗಿಕ ಹಗರಣವಲ್ಲ, ವಿಕೃತ ಲೈಂಗಿಕ ಹತ್ಯಾಕಾಂಡ. ಹೆಣ್ಣುಮಕ್ಕಳ ಮಾನ–ಪ್ರಾಣ, ಕುಟುಂಬವನ್ನು ಪಣಕ್ಕಿಟ್ಟು ಸಂಸದನೊಬ್ಬ ನಡೆಸಿರುವ ಕಾಮಕೃತ್ಯ. ಅದನ್ನು ವಿಡಿಯೊ ಮಾಡಿದ್ದಲ್ಲದೇ, ತನ್ನ ನಿರ್ಲಕ್ಷ್ಯದಿಂದ ಮತ್ತೊಬ್ಬರಿಗೆ ಸಿಗುವಂತೆ ಮಾಡಿದ್ದಾನೆ. ಚುನಾವಣಾ ದಾಳವಾಗಿ ಅದನ್ನು ಬಳಸಿಕೊಂಡು ಹಂಚಿದವರು, ಆ ವಿಡಿಯೊಗಳನ್ನು ಇಟ್ಟುಕೊಂಡು ಬೇಕಾದಂತೆ ಬಳಸಿಕೊಂಡವರು, ಹೀಗೆ ಎಲ್ಲರನ್ನೂ ಖಂಡಿಸಬೇಕು’ ಎಂದು ಹೇಳಿದರು.

‘ಅತ್ಯಂತ ತಳಸಮುದಾಯದ ಹೆಣ್ಣುಮಕ್ಕಳನ್ನು ಪ್ರಜ್ವಲ್ ತನ್ನ ಕಾಮಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ನಿಮ್ಮೊಂದಿಗೆ ನಾವಿದ್ದೇವೆ. ನೊಂದ ಹೆಣ್ಣುಮಕ್ಕಳು ಧೈರ್ಯವಾಗಿ ಮನೆಯಿಂದ ಹೊರಬಂದು ಎಸ್ಐಟಿ ಮುಂದೆ ದೂರು ದಾಖಲಿಸಿ’ ಎಂದು ಮನವಿ ಮಾಡಿದರು.

ರಾಜ್ಯಸಭೆ ಮಾಜಿ ಸದಸ್ಯೆ ಸುಭಾಷಿಣಿ ಅಲಿ ಮಾತನಾಡಿ, ‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದ ಹಲವೆಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಪುರುಷ ಪ್ರಧಾನ, ಬಂಡವಾಳಶಾಹಿ ವ್ಯವಸ್ಥೆ, ರಾಜಕೀಯ ಪ್ರಭುತ್ವದಂತಹ ಮೈತ್ರಿಕೂಟ ರಚಿಸಿಕೊಂಡಿರುವ ‘ಬಲಾತ್ಕಾರಿ ಬಚಾವೋ ಪಾರ್ಟಿ’ಯನ್ನು ಅಧಿಕಾರದಿಂದ ಕೆಳಗೆ ಇಳಿಸುವ ಸಂಕಲ್ಪ ಮಾಡುತ್ತಿದ್ದೇವೆ’ ಎಂದು ಹೇಳಿದರು.

‘ಇದುವರೆಗೆ ನಾವು ಟ್ರೇಲರ್‌ ತೋರಿಸಿದ್ದೇವೆ. ಇನ್ನೂ ಸಿನಿಮಾ ಬಾಕಿ ಇದೆ ಎಂದು ನಮ್ಮನ್ನು ಆಳುವ ದೊಡ್ಡವರು ಹೇಳುತ್ತಿದ್ದಾರೆ. ಆದರೆ, ಅವರು ತೋರಿಸಿರುವ ಟ್ರೇಲರ್‌ ಎಂಥದ್ದು? ಬ್ರಿಜ್‌ಭೂಷಣ್‌ ಪರವಾಗಿ ನಿಂತರು. ಬಿಲ್ಕಿಸ್‌ ಬಾನು ಅತ್ಯಾಚಾರಿ ಗಳಿಗೆ ಜಾಮೀನು ಕೊಡಿಸಿದರು. ರಾಮ್‌ರಹೀಮರಿಗೆ ಪೆರೋಲ್‌ ಕೊಡಿಸಿದರು. ಪ್ರಜ್ವಲ್‌ ರೇವಣ್ಣ ಅವರ ಕೈಎತ್ತಿ ಹಿಡಿದು ಮತ ಕೇಳಿದರು. ಇದೇನಾ ನಿಮ್ಮ ಟ್ರೇಲರ್‌’ ಎಂದು ಪ್ರಶ್ನಿಸಿದರು.

‘ಇಂತಹ ನಿಮ್ಮ ಸಿನಿಮಾ, ಟ್ರೇಲರ್‌ ನಡೆಯಲ್ಲ. ಜೂನ್‌ 4ರ ನಂತರ ಟ್ರೇಲರ್‌ ಬಂದ್‌ ಆಗಲಿದೆ. ಯಾವುದೇ ಸರ್ಕಾರವಿರಲಿ, ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

‘ಈ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾಗಿರುವ ಪ್ರಜ್ವಲ್‌ ರೇವಣ್ಣ, ಅವರ ತಂದೆ ಹಾಗೂ ಅವರ ಕುಟುಂಬದವರನ್ನು ಜೈಲಿಗೆ ಹಾಕಬೇಕು. ಅವರಿಗೆ ಜಾಮೀನು ಕೊಡಬಾರದು. ತನಿಖೆಯಲ್ಲಿ ಅವರು ತಮ್ಮ ಪ್ರಭಾವ ಬಳಸಬಹುದು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಸೊಪ್ಪು ಹಾಕದೇ, ಅವರನ್ನು ಜೈಲಿಗೆ ಕಳುಹಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.