ADVERTISEMENT

ಜಲಾಶಯಗಳ ಒಳಹರಿವು ಏರಿಕೆ

ವಾಡಿಕೆಗಿಂತ ಶೇ 40 ರಷ್ಟು ಅಧಿಕ ಮಳೆ: ಕೈಹಿಡಿದ ಪೂರ್ವ ಮುಂಗಾರು

ಚಿದಂಬರಪ್ರಸಾದ್
Published 6 ಜುಲೈ 2024, 7:12 IST
Last Updated 6 ಜುಲೈ 2024, 7:12 IST
<div class="paragraphs"><p>ವಾಟೆಹೊಳೆ ಜಲಾಶಯ</p></div>

ವಾಟೆಹೊಳೆ ಜಲಾಶಯ

   

ಹಾಸನ: ಜಿಲ್ಲೆಯಲ್ಲಿ ಕಳೆದ ವರ್ಷ ಕೈಕೊಟ್ಟಿದ್ದ ಮಳೆ, ಈ ವರ್ಷ ಮುಂಗಾರಿನಲ್ಲಿ ಉತ್ತಮವಾಗಿ ಸುರಿಯುತ್ತಿದೆ. ಬರದ ಛಾಯೆಯಿಂದ ತತ್ತರಿಸಿದ್ದ ರೈತಾಪಿ ಜನರು, ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ಪ್ರಮುಖವಾಗಿ ಜಿಲ್ಲೆಯಲ್ಲಿ ಇರುವ ಮೂರು ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದು, ನೀರಿನ ಕೊರತೆ ನೀಗಿದಂತಾಗಿದೆ. ಕಳೆದ ವರ್ಷ ಮಳೆ ಇಲ್ಲದೇ ಇದ್ದುದರಿಂದ ಜಲಾಶಯಗಳು ಸಂಪೂರ್ಣ ಬತ್ತಿ ಹೋಗುವ ಸ್ಥಿತಿಯಲ್ಲಿದ್ದವು. ಅಳಿದುಳಿದ ನೀರನ್ನೇ ಕುಡಿಯುವ ಉದ್ದೇಶಕ್ಕೆ ಬಳಸುವಂತಾಗಿತ್ತು. ಆದರೆ, ಪೂರ್ಣ ಮುಂಗಾರು ಮಳೆ ಉತ್ತಮವಾಗಿ ಬಂದಿದ್ದರಿಂದ ಜಲಾಶಯಗಳಲ್ಲಿ ನೀರಿನ ಒಳಹರಿವು ಆರಂಭವಾಗಿತ್ತು.

ADVERTISEMENT

ಜಿಲ್ಲೆಯ ಹೇಮಾವತಿ, ವಾಟೆಹೊಳೆ, ಯಗಚಿ ಜಲಾಶಯದಲ್ಲಿ ಇದೀಗ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ. ಹೇಮಾವತಿ ಜಲಾಶಯಕ್ಕೆ ನಿತ್ಯ ಸರಾಸರಿ 8 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, 250 ಕ್ಯುಸೆಕ್‌ ನೀರನ್ನು ಮಾತ್ರ ಹೊರಗೆ ಬಿಡಲಾಗುತ್ತಿದೆ. ಇದರಿಂದಾಗಿ ಸದ್ಯಕ್ಕೆ 16.529 ಟಿಎಂಸಿ ನೀರು ಸಂಗ್ರಹವಾಗಿದ್ದು, 12.157 ಟಿಎಂಸಿ ನೀರು ಬಳಕೆಗೆ ಲಭ್ಯವಾಗಿದೆ. ಮಳೆ ಆರಂಭಕ್ಕೂ ಮುನ್ನ ಹೇಮಾವತಿ ಜಲಾಶಯದ ಬಳಕೆ ನೀರಿನ ಸಂಗ್ರಹ 4.5 ಟಿಎಂಸಿಗೆ ಕುಸಿದಿತ್ತು.

ಜಿಲ್ಲೆಯಲ್ಲಿ ಮೇ 31 ರವರೆಗೆ ಸುರಿದ ಪೂರ್ವ ಮುಂಗಾರು ಮಳೆ ನೀರಿಗೆ ಆಸರೆಯಾಗಿದೆ. ಜಿಲ್ಲೆಯಲ್ಲಿ ಮಾರ್ಚ್‌ 1 ರಿಂದ ಮೇ 31 ರವರೆಗೆ 16.2 ಸೆಂ.ಮೀ. ವಾಡಿಕೆ ಮಳೆ ಇದ್ದು, 26.2 ಸೆಂ.ಮೀ. ಮಳೆಯಾಗಿದೆ. ಈ ಮೂಲಕ ಶೇ 61 ರಷ್ಟು ಅಧಿಕ ಮಳೆಯಾಗಿತ್ತು. ಜೂನ್‌ನಲ್ಲಿ 14.2 ಸೆಂ.ಮೀ. ವಾಡಿಕೆ ಮಳೆ ಇದ್ದು, 14.1 ಸೆಂ.ಮೀ. ಮಳೆಯಾಗಿದೆ. ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿದೆ. ಅಲ್ಲದೇ ಮಲೆನಾಡು ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಹೇಮಾವತಿ ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಹವಾಮಾನ ಇಲಾಖೆಯ ವರದಿಯಂತೆ ಈ ಬಾರಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದ್ದು, ಜಿಲ್ಲೆಯಲ್ಲಿ ಮುಂಜಾಗ್ರತೆ ವಹಿಸಿ, ಅಗತ್ಯ ಸಿದ್ಧತೆಗೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.

-ಸಿ.ಸತ್ಯಭಾಮಾ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.