ADVERTISEMENT

'ಪ್ರಜ್ವಲ್‌ ಬಂಧಿಸಿ: 30ರಂದು ಹಾಸನ ಚಲೋ'

ರಾಜ್ಯ ಜನಪರ ಚಳವಳಿಗಳ ನೇತೃತ್ವದಲ್ಲಿ ಹೋರಾಟಕ್ಕೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 18 ಮೇ 2024, 14:38 IST
Last Updated 18 ಮೇ 2024, 14:38 IST
ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಶನಿವಾರ ನಡೆದ ಪ್ರತಿಭಟನೆ ಪೂರ್ವಸಿದ್ಧತಾ ಸಭೆಯಲ್ಲಿ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಹಾಸನದಲ್ಲಿ ಶನಿವಾರ ನಡೆದ ಪ್ರತಿಭಟನೆ ಪೂರ್ವಸಿದ್ಧತಾ ಸಭೆಯಲ್ಲಿ ಹಲವು ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.   

ಹಾಸನ: ‘ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪವಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿ ಮೇ 30ರಂದು ಕರ್ನಾಟಕ ರಾಜ್ಯ ಜನಪರ ಚಳವಳಿಗಳ ನೇತೃತ್ವದಲ್ಲಿ ‘ಹಾಸನ ಚಲೋ–ಬೃಹತ್ ಹೋರಾಟ’ ನಡೆಯಲಿದೆ.

ನಗರದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಸಮಾಲೋಚನೆ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಪ್ರಜ್ವಲ್ ಬಂಧನವಾಗಬೇಕು. ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಪಡಿಸಬೇಕು. ಸಂತ್ರಸ್ತೆಯರ ಘನತೆಯ ರಕ್ಷಣೆಯಾಗಬೇಕು. ಅದಕ್ಕಾಗಿ ರಾಜ್ಯದಾದ್ಯಂತ ಬೃಹತ್ ಚಳವಳಿ ರೂಪಿಸಬೇಕು’ ಎಂದು ಸಭೆಯು ನಿರ್ಧರಿಸಿತು.

ADVERTISEMENT

ಸಭೆಯಲ್ಲಿದ್ದ ವಿವಿಧ ಜನಪರ, ರೈತ, ಕಾರ್ಮಿಕ, ಯುವಜನ, ಮಹಿಳಾ, ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಹಲವು ಸಂಘಟನೆಗಳ ನೂರಾರು ಮುಖಂಡರು, ಹೋರಾಟಗಾರರು, ಚಿಂತಕರು, ಲೇಖಕರು ಭಾಗವಹಿಸಿದ್ದರು.

ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ, ‘ಪ್ರಜ್ವಲ್ ಬಂಧನಕ್ಕೆ ಕೇಂದ್ರ ಸರ್ಕಾರ ಮನಸು ಮಾಡಬೇಕು. ರಾಜತಾಂತ್ರಿಕ ಪಾಸ್ ಪೋರ್ಟ್‌ ರದ್ದು ಮಾಡುವುದು ಸುಲಭ. ಅದಕ್ಕೆ ಕೋರ್ಟ್ ಅನುಮತಿ ಬೇಕಾಗಿಲ್ಲ. ಪ್ರಜ್ವಲ್ ಎಲ್ಲಿದ್ದಾರೆ ಎಂಬುದು ಕೇಂದ್ರ ಗೃಹ ಇಲಾಖೆಗೆ ಗೊತ್ತಿದೆ’ ಎಂದು ಪ್ರತಿಪಾದಿಸಿದರು.

ಜನವಾದಿ ಮಹಿಳಾ ಸಂಘಟನೆಯ ಮೀನಾಕ್ಷಿ ಬಾಳಿ ಮಾತನಾಡಿ, ‘ಎಚ್‌.ಡಿ.ದೇವೇಗೌಡರ ಕುಟುಂಬದ ದಬ್ಬಾಳಿಕೆ ವಿರುದ್ಧ ಬೃಹತ್ ಹೋರಾಟ ನಡೆಯಲಿದೆ’ ಎಂದರು.

ಲೇಖಕಿ ರೂಪ ಹಾಸನ, ‘ಅಶ್ಲೀಲ ವಿಡಿಯೋ ಸುನಾಮಿಯಂತೆ ಅಪ್ಪಳಿಸಿದೆ. ಪರಿಣಾಮ ಊಹಿಸಲಸಾಧ್ಯ. ನೊಂದ ಮಹಿಳೆಯರ ಕುಟುಂಬದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಪುರುಷ ರಾಜಕಾರಣ ಅಧೋಗತಿಗೆ ಇಳಿದ ರೀತಿಯನ್ನು ತೋರಿಸಿದೆ’ ಎಂದು ವಿಷಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.