ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: 7ನೇ ಸ್ಥಾನದಲ್ಲಿದ್ದ ಹಾಸನ 1ನೇ ಸ್ಥಾನಕ್ಕೇರಿದ್ದು ಹೇಗೆ

​ಪ್ರಜಾವಾಣಿ ವಾರ್ತೆ
Published 2 ಮೇ 2019, 4:10 IST
Last Updated 2 ಮೇ 2019, 4:10 IST
   

ಹಾಸನ:ಕಳೆದ ವರ್ಷ 7ನೇ ಸ್ಥಾನದಲ್ಲಿದ್ದ ಹಾಸನ, ಈ ಬಾರಿ ನಂಬರ್ 1 ಸ್ಥಾನಕ್ಕೇರುವ ಮೂಲಕಹೊಸ ದಾಖಲೆ ಬರೆದಿದೆ. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಫಲಿತಾಂಶ ಸುಧಾರಣೆ ಕಾರ್ಯಕ್ರಮಗಳುಹಾಸನ ನಂಬರ್ 1 ಸ್ಥಾನಕ್ಕೇರಲು ಕಾರಣ ಎನ್ನಲಾಗುತ್ತಿದೆ.

ಜಿಲ್ಲಾಡಳಿತ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದ 86 ಸರ್ಕಾರಿ ಶಾಲೆಗಳು, 16 ಅನುದಾನಿತ ಶಾಲೆಗಳು ಹಾಗೂ 45 ಅನುದಾನ ರಹಿತ ಶಾಲೆಗಳು ಶೇಕಡ 100ರಷ್ಟು ಫಲಿತಾಂಶಗಳಿಸಿವೆ.

ಕಳೆದ ಸಾಲಿನಲ್ಲಿ 7 ನೇ ಸ್ಥಾನದಲ್ಲಿತ್ತು. ಅದಕ್ಕೂ ಹಿಂದೆ 31ನೇ ಸ್ಥಾನದಲ್ಲಿತ್ತು. ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಫಲಿತಾಂಶ ಸುಧಾರಣೆ ಸಂಬಂಧ ಹಲವು ಕಾರ್ಯಕ್ರಮ ರೂಪಿಸಿದ್ದರು. ಎರಡು ವರ್ಷಗಳಿಂದ ಮಕ್ಕಳಿಗೆ ರೇಡಿಯೊ ಮೂಲಕ ಪಾಠ, ಹೇಗೆ ಓದಬೇಕು, ಯಾವ ರೀತಿ ಬರೆಯಬೇಕು ಹಾಗೂ ಇತ್ಯಾದಿ ವಿಚಾರಗಳನ್ನು ಪ್ರಸಾರ ಮಾಡಲಾಯಿತು.

ADVERTISEMENT

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬುದ್ಧಿವಂತರಾಗಿದ್ದರೂ ನುರಿತ ಶಿಕ್ಷಕರಿಂದ ತರಬೇತಿ ಸಿಗದ ಕಾರಣ ಅನುತ್ತೀರ್ಣ ಆಗುತ್ತಿರುವುದನ್ನು ಮನಗಂಡ ಅವರು, ಖಾಸಗಿ ಶಾಲೆಯ ಮುಖ್ಯ ಶಿಕ್ಷಕರ ಸಭೆ ನಡೆಸಿ ಸಹಕಾರ ಕೋರಿದರು.

ಅಲ್ಲದೇ ವೈಯಕ್ತಿಕವಾಗಿ ಪ್ರಾಂಶುಪಾಲರಿಗೆ ಪತ್ರ ಬರೆದು ಫಲಿತಾಂಶ ಸುಧಾರಣೆಗೆ ಶ್ರಮವಹಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಖಾಸಗಿ ಶಾಲೆಯ ಶಿಕ್ಷಕರು, ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳಿಗೂ ಶಿಕ್ಷಣ ನೀಡಿದರು.

ಅಲ್ಲದೇ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳಿಸಲು ರೋಹಿಣಿ ಅವರು ಕಳೆದ ವರ್ಷ ಜುಲೈನಲ್ಲಿ ಶಿಕ್ಷಕರಿಗೆ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದರು. ಆದರೆ, ಸರ್ಕಾರ ಇದಕ್ಕೆ ಅನುಮತಿ ನೀಡಲಿಲ್ಲ. ಶೈಕ್ಷಣಿಕ ಆರಂಭದಲ್ಲೇ ವಿಶೇಷ ತರಗತಿ ನಡೆಸಲಾಯಿತು. ಜಿಲ್ಲಾಡಳಿತದ ಪ್ರಯತ್ನಕ್ಕೆ ಎಲ್ಲ ಅಧಿಕಾರಿಗಳು, ಶಿಕ್ಷಕರು ಸ್ಪಂದಿಸಿದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎನ್ನುತ್ತಾರೆ ಡಿಡಿಪಿಐ.

ಫಲಿತಾಂಶದ ವಿವರ

ಇಲ್ಲಿನವಿಜಯ ಶಾಲೆಯ ಅಭಿನ್ ಬಿ ಮತ್ತು ಪ್ರಗತಿ ಎಂ.ಗೌಡ 625ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 2ನೇ ರ‍್ಯಾಂಕ್‌ ಬಂದಿದ್ದಾರೆ.ಕಳೆದ ವರ್ಷ ಶೇಕಡ 84.68 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಈ ಬಾರಿ ಶೇಕಡ 89.33 ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 19,709 (9546 ಬಾಲಕರು, 10163 ಬಾಲಕಿಯರು) ವಿದ್ಯಾರ್ಥಿಗಳ ಪೈಕಿ 17,689 (8396 ಬಾಲಕರು, 9293 ಬಾಲಕಿಯರು)ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡ 89.33 ರಷ್ಟು ಫಲಿತಾಂಶ ಬಂದಿದೆ.

ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ

ಜಿಲ್ಲೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿರುವುದು ಹರ್ಷ ತಂದಿದೆ. ಜಿಲ್ಲೆಯ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ ಕಾಲೇಜು ಸೇರಿದಂತೆ ಎಲ್ಲಾ ಕಾಲೇಜುಗಳನ್ನು ಹಾಸನದಲ್ಲಿ ಸ್ಥಾಪಿಸಿದ್ದು ಸಾರ್ಥಕವಾಯಿತು. ಹಗಲಿರುಳು ಶ್ರಮ ಪಟ್ಟು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ಮಕ್ಕಳ ಓದಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಪೋಷಕರು ಹಾಗೂ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

-ಎಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ

***

ಜಿಲ್ಲಾಡಳಿತದ ಶ್ರಮಕ್ಕೆ ಫಲ

ಈ ಸಾಧನೆಯ ಶ್ರೇಯಸ್ಸು ಶಿಕ್ಷಕರು, ಪೋಷಕರು ಹಾಗೂ ಮಕ್ಕಳಿಗೆ ಸಲ್ಲಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಾಕಷ್ಟು ಶ್ರಮ ವಹಿಸಿದೆ. ಪ್ರತಿ ಮಾಸಿಕ ಪರೀಕ್ಷೆ ನಂತರ ಪೋಷಕರ ಸಭೆ ಕರೆದು ಚರ್ಚಿಸಲಾಗುತ್ತಿತ್ತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗಿತ್ತು. ಡಯೆಟ್ ವತಿಯಿಂದ ಶಿಕ್ಷಕರಿಗೆ ತರಬೇತಿ ನೀಡಿದ್ದು ಶೈಕ್ಷಣಿಕ ಸಾಧನೆಗೆ ಸಹಕಾರಿ

-ಮಂಜುನಾಥ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ

***

ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳು

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 89.33 ರಷ್ಟು ಫಲಿತಾಂಶ ಪಡೆಯುವ ಮೂಲಕ ಮಕ್ಕಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಾಲೆಗಳಿಗೆ ಮೂಲ ಸೌಕರ್ಯದಲ್ಲಿ ಯಾವುದೇ ತೊಂದರೆ ಆಗದಂತೆ ಸಚಿವ ಎಚ್.ಡಿ.ರೇವಣ್ಣ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚರ ವಹಿಸಿದ್ದರು. ಪ್ರತಿ ಹಂತದಲ್ಲೂ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಶಿಕ್ಷಣದ ಕಡೆ ಹೆಚ್ಚು ಶ್ರದ್ಧೆ ವಹಿಸಿದರು.

-ಭವಾನಿ ರೇವಣ್ಣ, ಜಿ.ಪಂ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.