ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆಶ್ವೀಜ ಮಾಸದ ಪೌರ್ಣಿಮೆಯ ನಂತರ ಬರುವ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆಯಲಾಗುತ್ತಿದೆ. ಬಲಿಪಾಡ್ಯಮಿಯ ಮಾರನೇ ದಿನ ದೇಗುಲದ ಬಾಗಿಲು ಮುಚ್ಚುವುದು ಪ್ರತೀತಿ.
ಇದೀಗ ಆಶ್ವೀಜ ಪೌರ್ಣಿಮೆಯ ನಂತರ ಬರುವ ಮೊದಲ ಗುರುವಾರ (ಅ.24 ರಂದು ದೇಗುಲದ ಬಾಗಿಲು ತೆರೆದು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದ್ದು, ಭರದ ಸಿದ್ಧತೆಗಳು ಸಾಗಿವೆ. ಬಲಿಪಾಡ್ಯಮಿ ಮಾರನೇ ದಿನವಾದ ನವೆಂಬರ್ 3 ರಂದು ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಹಾಸನಾಂಬ ಉತ್ಸವಕ್ಕೆ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈ ಬಾರಿ ಹಾಸನಾಂಬ ವೆಬ್‌ಸೈಟ್ ಸಹ ಆರಂಭಿಸಲಾಗಿದೆ.
ಹಾಸನಾಂಬ ಉತ್ಸವ ಸಂದರ್ಭದಲ್ಲಿ ಅಧಿಕಾರಿಗಳು ಹೇಗೆ ಕೆಲಸ ನಿರ್ವಹಿಸಬೇಕು ಎಂಬುದರ ಕುರಿತು ಈಗಾಗಲೇ ಹಲವು ಸಭೆ, ಕಾರ್ಯಾಗಾರಗಳನ್ನು ನಡೆಸಿ, ಸೂಚನೆ ನೀಡಲಾಗಿದೆ. ಹಾಸನಾಂಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಊರಿನ ಹಬ್ಬದಂತೆ ಆಚರಿಸಲು ಹಾಗೂ ಬರುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ವಹಿಸಿರುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸೂಚನೆ ನೀಡಿದ್ದಾರೆ.
ಹಿಂದಿನ ವರ್ಷದ ವಿಡಿಯೋ ತುಣುಕು ವೀಕ್ಷಣೆ ಮಾಡಿ, ಆಗಿರುವ ಸಣ್ಣ ಪುಟ್ಟ ಲೋಪದೋಷ ಸರಿಪಡಿಸಿಕೊಳ್ಳಲಾಗಿದೆ. ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿದ್ಧಗಂಗಾ ಮಠದ ಸ್ವಾಮೀಜಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ವರ್ಷ 9 ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, 20 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಬರುವ ನಿರೀಕ್ಷೆ ಮಾಡಲಾಗಿದೆ.
ಅಂತಿಮ ಹಂತದಲ್ಲಿ ಸಿದ್ಧತೆ: ನಗರದಾದ್ಯಂತ ಅಲಂಕಾರದ ಕಾರ್ಯಗಳು ಭರದಿಂದ ನಡೆಯುತ್ತಿವೆ. ಕೆಪಿಟಿಸಿಎಲ್, ಸೆಸ್ಕಾಂ ಸಿಬ್ಬಂದಿ ನಿಗಾ ವಹಿಸಿದ್ದು, ವಿದ್ಯುತ್‌ಗಳಿಂದ ಆಗುವ ಅನಾಹುತ ತಪ್ಪಿಸಲು ಎಲ್ಲ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ವಿದ್ಯುತ್ ಅವಘಡ ಸಂಭವಿಸಿದ ಹಿನ್ನೆಲೆ ಈ ವರ್ಷ ಅಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
ರಸ್ತೆಗಳ ಡಾಂಬರೀಕರಣ ಮಾಡಲಾಗಿದ್ದು, ದೇವಸ್ಥಾನದ ಒಳ ಭಾಗದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಸರದಿ ಸಾಲಿನಲ್ಲಿ ಬರುವ ಭಕ್ತಾದಿಗಳಿಗೆ ಸಮಸ್ಯೆ ಆಗದಂತೆ ಕುಡಿಯುವ ನೀರು, ಶೌಚಾಲಯ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಇದರ ಜವಾಬ್ದಾರಿಯನ್ನು ವಿವಿಧ ಸಂಘ ಸಂಸ್ಥೆಗಳಿಗೆ ನೀಡಲಾಗಿದೆ.
ಸುಲಲಿತ ದರ್ಶನಕ್ಕೆ ಹಾಸನಾಂಬ ಆ್ಯಪ್ ಬಿಡುಗಡೆ ವೆಬ್‌ಸೈಟ್ ಮೂಲಕ ಜಾತ್ರೆಯ ಅಗತ್ಯ ಮಾಹಿತಿ ರವಾನೆ ದೇವಿಯ ದರ್ಶನದ ವೇಳೆ ಭಕ್ತರಿಗೆ ಸೌಕರ್ಯ ಒದಗಿಸಲು ಆದ್ಯತೆ
ದಿನದ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ನೀಡಬೇಕು.
ಮುಖ್ಯಮಂತ್ರಿ ಸಚಿವರು ಸೇರಿದಂತೆ ಗಣ್ಯರು ಬಂದಾಗ ಅರ್ಧ ಮುಕ್ಕಾಲು ಗಂಟೆ ದರ್ಶನ ಬಂದ್ ಮಾಡಬಾರದು.
ದೇಗುಲದಲ್ಲಿ ಯಾವುದೇ ಪೂಜೆಗಳು ನಡೆಯುತ್ತಿದ್ದರೂ ಬರುವ ಜನರಿಗೆ ನಿರಂತರ ದರ್ಶನಕ್ಕೆ ವ್ಯವಸ್ಥೆ ಇರಬೇಕು.
ವಿಶೇಷ ದರ್ಶನದ ಟಿಕೆಟ್ ಪಡೆದವರಂತೆ ಸಾಮಾನ್ಯ ದರ್ಶನಕ್ಕೆ ನಿಲ್ಲುವ ಜನರಿಗೂ ಶೀಘ್ರ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು.
ಶೌಚಾಲಯಗಳ ಸ್ವಚ್ಛತೆಗೆ ಆಗಿಂದಾಗ್ಗೆ ಕ್ರಮ ಕೈಗೊಳ್ಳಬೇಕು.
ಪ್ರತ್ಯೇಕ ಜಾಗ ನಿಗದಿಪಡಿಸಿ ನಿರಂತರವಾಗಿ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಬೇಕು.
ದೇಗುಲಕ್ಕೆ ಹತ್ತಿರದಲ್ಲಿಯೇ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು.
ದೇಗುಲದ ಆವರಣದಲ್ಲಿ ಅನಗತ್ಯ ವಾಹನಗಳ ಸಂಚಾರ ನಿಷೇಧಿಸಬೇಕು.
ಬೇಕಾಬಿಟ್ಟಿ ಪಾಸ್‌ಗಳ ವಿತರಣೆಗೆ ಕಡಿವಾಣ ಹಾಕಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.