ಹಾಸನ: ದಿನಗಳು ಕಳೆದಂತೆ ಹಾಸನಾಂಬೆಯ ದರ್ಶನಕ್ಕೆ ಬರುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲಾಡಳಿತದ ನಿರೀಕ್ಷೆಯಂತೆ 10 ಲಕ್ಷಕ್ಕೂ ಅಧಿಕ ಜನರು ಈ ಬಾರಿ ದರ್ಶನ ಪಡೆಯುವುದು ಬಹುತೇಕ ಖಚಿತವಾಗಿದೆ. ಆದರೆ, ಈ ನಡುವೆ ದರ್ಶನಕ್ಕೆ ಬರುವ ಭಕ್ತಾದಿಗಳಿಂದ ವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ.
ಭಕ್ತರ ಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳ ಅನಾವರಣ ಆಗುತ್ತಿದೆ. ದೇವಾಲಯದ ಆವರಣದ ಮೂಲ ಸೌಕರ್ಯ ಸೇರಿದಂತೆ ಸರದಿ ಸಾಲಿನಲ್ಲಿ ಬರುವ ಭಕ್ತಾದಿಗಳು ಗಂಟೆಗಟ್ಟಲೆ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಜನರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಮರ್ಪಕ ನಿರ್ವಹಣೆ ಮಾಡಲು ತೊಡಕುಂಟಾಗಿದ್ದು, ಆಗೊಮ್ಮೆ ಈಗೊಮ್ಮೆ ಸುರಿಯುವ ಮಳೆಯಿಂದಲೂ ತೊಂದರೆಯಾಗುತ್ತಿದೆ.
ಗಣ್ಯರ ವಿಶೇಷ ದರ್ಶನ ವ್ಯವಸ್ಥೆ ಇದ್ದು, ದಿನದಲ್ಲಿ 10 ರಿಂದ 20 ಗಣ್ಯರು ಬರುತ್ತಿದ್ದಾರೆ. ಆ ಸಮಯದಲ್ಲಿ ದೇಗುಲದಲ್ಲಿ ಭಕ್ತರ ದರ್ಶನವನ್ನು ನಿಲ್ಲಿಸಲಾಗುತ್ತದೆ. ಇದರಿಂದ ಸಾರ್ವಜನಿಕರು ದರ್ಶನ ಪಡೆಯಲು ಹರಸಾಹಸ ಮಾಡುವಂತಾಗಿದೆ.
ಸಂಜೆಯ ವೇಳೆಗೆ ಬರುವ ಮಳೆಯಿಂದ ಸರತಿ ಸಾಲಿನಲ್ಲಿ ಹಾಕಲಾಗಿದ್ದ ಮ್ಯಾಟ್ ಗಳು ಒದ್ದೆಯಾಗಿದ್ದು, ಗಂಟೆಗಟ್ಟಲೆ ಸಾಲಿನಲ್ಲಿ ಸಾಗುವಾಗ ಕಿರಿಕಿರಿ ಉಂಟಾಗುತ್ತಿತ್ತು. ಮಜ್ಜಿಗೆ ಸೇರಿದಂತೆ ಇತರೆ ವಸ್ತುಗಳನ್ನು ಮ್ಯಾಟ್ ಮೇಲೆ ಚೆಲ್ಲಿರುವುದರಿಂದ ದುರ್ವಾಸನೆ ಬರುತ್ತಿದ್ದು, ಗಂಟೆಗಟ್ಟಲೆ ನಿಲ್ಲಲು ಜನರಿಗೆ ತೊಂದರೆ ಆಗುತ್ತಿದೆ ಎಂದು ಹಲವು ಭಕ್ತರು ಅಸಮಾಧಾನ ತೋಡಿಕೊಂಡರು.
ಸಮರ್ಪಕವಾಗಿ ಮೂಲ ಸೌಕರ್ಯವನ್ನು ಈ ಬಾರಿ ಒದಗಿಸಲಾಗಿಲ್ಲ. ಬೆಳಿಗ್ಗೆ 9ಕ್ಕೆ ಬಂದಿದ್ದು, ಸಂಜೆ 5 ಗಂಟೆಗೆ ದರ್ಶನ ಪಡೆದು ಆಚೆ ಬರುತ್ತಿದ್ದೇವೆ. ಬಹುತೇಕ ಭಕ್ತರಿಗೆ ಕೇವಲ ಒಂದರಿಂದ ಎರಡು ಸೆಕೆಂಡ್ ಮಾತ್ರ ಗರ್ಭಗುಡಿಯಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ ಗಣ್ಯರಿಗೆ ಮಾತ್ರ ದರ್ಶನಕ್ಕೆ ಹೆಚ್ಚು ಸಮಯ ಕೊಡಲಾಗುತ್ತದೆ ಎಂದು ಬಹುತೇಕ ಜನರು ದೂರಿದರು.
ಸಾಮಾನ್ಯ ಸರತಿ ಸಾಲಿನಲ್ಲಿ ನಿಲ್ಲುವವರಿಗೆ ಅಗತ್ಯ ಸೌಕರ್ಯ ಕಲ್ಪಿಸಿಲ್ಲ. ಚಾವಣಿ ಒದಗಿಸಲಾಗಿದೆ. ಆದರೆ ಗಂಟೆಗಟ್ಟಲೆ ನಿಲ್ಲುವುದರಿಂದ ರಕ್ತದೊತ್ತಡ, ಮಧುಮೇಹ ಇರುವವರು ಹಾಗೂ ಇತರೆ ಕಾಯಿಲೆಯಿಂದ ಬಳಲುತ್ತಿರುವವರು ಹಸಿವಿನಿಂದ ನಿತ್ರಾಣಗೊಂಡು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಎಷ್ಟೋ ಮಂದಿ ದಾರಿಯಲ್ಲೆ ಕುಸಿದು ಬಿದ್ದಿದ್ದಾರೆ ಎಂದು ವೃದ್ಧೆಯೊಬ್ಬರು ನೋವು ತೋಡಿಕೊಂಡರು.
‘ನಾನು ₹300 ಟಿಕೆಟ್ ಖರೀದಿಸಿ ಬಂದಿದ್ದು, ಬೆಳಿಗ್ಗೆ 11 ಗಂಟೆಗೆ ನಿಂತು ಸಂಜೆ 5 ಗಂಟೆಗೆ ದರ್ಶನ ಪಡೆದು ಹೊರ ಬಂದಿದ್ದೇನೆ. ಈ ರೀತಿ ಅವ್ಯವಸ್ಥೆ ಮುಂದಿನ ದಿನಗಳಲ್ಲಿ ಆಗಬಾರದು. ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತ’ ಎಂದು ತುಮಕೂರಿನ ಜಗದೀಶ್ ಸಲಹೆ ನೀಡಿದರು.
‘ಗಂಟೆಗಟ್ಟಲೆ ಸಾಗುವ ಸಾಮಾನ್ಯ ಸಾಲಿನಲ್ಲಿ ಕುರ್ಚಿಗಳ ವ್ಯವಸ್ಥೆ ಮಾಡಿಲ್ಲ. ವೃದ್ಧರಿಗೆ ಪ್ರತ್ಯೇಕ ಸಾಲನ್ನು ಮಾಡಿರುವುದಾಗಿ ಜಿಲ್ಲಾಡಳಿತ ಇತ್ತೀಚಿಗೆ ಹೇಳಿಕೆ ನೀಡಿತ್ತು. ಅದನ್ನು ನಂಬಿ ನಾವು ಬಂದಿದ್ದೆವು. ಆದರೆ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ 7–8 ಗಂಟೆ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕಾಯಿತು’ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದರು.
ವರ್ಷದಲ್ಲಿ ಕೇವಲ 12 ದಿನ ಮಾತ್ರ ದರ್ಶನ ಭಾಗ್ಯ ಕಲ್ಪಿಸುವ ಹಾಸನಾಂಬ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿದೆ. ಆದರೆ ಗಣ್ಯಾತಿ ಗಣ್ಯರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲು ಶಿಷ್ಟಾಚಾರ ಪಾಲನೆ ಮಾಡಬೇಕಾಗಿದ್ದು, ಜಿಲ್ಲಾಡಳಿತ ಅಡ್ಡಕತ್ತರಿಯಲ್ಲಿ ಸಿಲುಕಿದಂತಾಗಿದೆ.
ಈ ಬಾರಿ ಹಾಸನಂಬ ದರ್ಶನ ಅನಾನುಕೂಲದ ಆಗರವಾಗಿದೆ. ವೃದ್ಧರಿಗೆ ಹಾಗೂ ಅಶಕ್ತರಿಗೆ ಕುರ್ಚಿ ಇಲ್ಲ. ಆರೋಗ್ಯ ಸಮಸ್ಯೆ ಇರುವವರು ಜೀವ ಬಿಗಿಹಿಡಿದು ದರ್ಶನ ಪಡೆಯಬೇಕಿದೆ.ರಾಜೇಶ್ವರಿ ಬೆಂಗಳೂರು
ವರ್ಷದಲ್ಲಿ 12 ದಿನ ದರ್ಶನ ಇದೆ. ಈ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಮೂಲಸೌಕರ್ಯ ಒದಗಿಸಬೇಕು. ಗಣ್ಯರಿಂದ ಹೆಚ್ಚು ಸಮಯ ದರ್ಶನ ಅವಕಾಶ ನೀಡುವುರದಿಂದ ಸಾಮಾನ್ಯರಿಗೆ ತೊಂದರೆ ಆಗುತ್ತಿದೆ.ಇಂದ್ರಾಣಿ, ಪ್ರಾಧ್ಯಾಪಕಿ, ಮೈಸೂರು
ಬೆಳಿಗ್ಗೆ 9ಗಂಟೆಗೆ ಸಾಮಾನ್ಯ ಸರತಿ ಸಾಲಿನಲ್ಲಿ ನಿಂತು ಸಂಜೆ 5.30ಕ್ಕೆ ದರ್ಶನ ಪಡೆದೆ. ಒಂದು ಸೆಕೆಂಡ್ ಮಾತ್ರ ದೇವಿಯ ಮುಂದೆ ನಿಂತು ಕೈ ಮುಗಿಯಲು ಅವಕಾಶ ದೊರೆಯಿತು. ವ್ಯವಸ್ಥೆ ಸುಧಾರಿಸಬೇಕು.ಮಮತಾ, ಗೃಹಿಣಿ, ಹೊಳೆನರಸೀಪುರ
ಸಾಮಾನ್ಯ ಸರತಿ ಸಾಲಿನಲ್ಲಿ ಬೆಳಿಗ್ಗೆ 8 ಗಂಟೆಗೆ ಬಂದು ನಿಂತಿದ್ದೇನೆ. ಸಂಜೆ 5.30ಕ್ಕೆ ದರ್ಶನ ದೊರೆತಿದ್ದು ಕುಡಿಯಲು ನೀರು ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಿಲ್ಲಪ್ರಜ್ವಲ್, ವಿದ್ಯಾರ್ಥಿ, ಹಾಸನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.