ಹಾಸನ: ಇಲ್ಲಿನ ಹಾಸನಾಂಬ ದೇವಿಯ ದರ್ಶನಕ್ಕೆ ಗುರುವಾರ ತೆರೆ ಎಳೆಯಲಾಯಿತು. ಮಧ್ಯಾಹ್ನ 12.52 ಕ್ಕೆ ಗರ್ಭಗುಡಿ ಬಾಗಿಲನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂಗೌಡ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಮುಚ್ಚಲಾಯಿತು.
ಹಾಸನಾಂಬಾ ಜಾತ್ರಾ ಮಹೋತ್ಸವದ ಕಡೇ ದಿನವಾದ ಗುರುವಾರ ಗರ್ಭಗುಡಿ ಬಾಗಿಲು ಮುಚ್ಚುವ ಮುನ್ನ ದೇವರ ಮುಂದೆ ದೀಪ ಹಚ್ಚಿ, ಹೂವು, ನೈವೇದ್ಯ ಇಡಲಾಯಿತು. ವಿಶೇಷತೆ ಎಂದರೆ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಅರ್ಚಕರು ಇಟ್ಟ ಹೂವು ಬಾಡುವುದಿಲ್ಲ, ದೀಪ ಆರುವುದಿಲ್ಲ ಎಂಬ ಪ್ರತೀತಿ ಇದೆ.
ಗರ್ಭಗುಡಿ ಬಾಗಿಲನ್ನು ಅಕ್ಟೋಬರ್ 13 ರಿಂದ 27 ರವರೆಗೆ ತೆರೆದಿದ್ದು, 15 ದಿನದಲ್ಲಿ 12 ದಿನ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದುವೆರೆಗೆ ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದಿದ್ದಾರೆ. ₹ 1000 ಹಾಗೂ ₹300 ವಿಶೇಷ ದರ್ಶನದ ಟಿಕೆಟ್, ಲಾಡು ಮಾರಾಟದಿಂದ ₹2 ಕೋಟಿ ಆದಾಯ ಅಂದಾಜಿಸಲಾಗಿದ್ದು, ಹುಂಡಿ ಕಾಣಿಕೆಯಿಂದ ಹೆಚ್ಚು ಆದಾಯ ನಿರೀಕ್ಷೆ ಇದೆ.
ಲಕ್ಷಾಂತರ ಭಕ್ತರಿಂದ ದರ್ಶನ: ಈ ಬಾರಿ ಜಿಲ್ಲೆ ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಬಂದ 6 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬ ದರ್ಶನ ಪಡೆದಿದ್ದಾರೆ.
ದರ್ಶನ ಪಡೆದ ಗಣ್ಯರು: ಕೇಂದ್ರಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಬಿ.ಸಿ. ನಾಗೇಶ್, ಶಶಿಕಲಾ ಜೊಲ್ಲೆ, ಎಚ್.ಟಿ.ಸೋಮಶೇಖರ್, ಬಿ. ಶ್ರೀರಾಮುಲು, ಬೈರತಿ ಬಸವರಾಜ, ಕೆ.ಗೋಪಾಲಯ್ಯ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದರಾದ ಪ್ರತಾಪ್‌ಸಿಂಹ, ಪ್ರಜ್ವಲ್ ರೇವಣ್ಣ, ಮಾಜಿ ಪ್ರಧಾನಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಚ್.ಡಿ ರೇವಣ್ಣ,ಅನಿತಾ ಕುಮಾರಸ್ವಾಮಿ, ಪ್ರೀತಂ ಗೌಡ, ಶಿವಲಿಂಗೇಗೌಡ, ಕುಮಾರಸ್ವಾಮಿ, ನಾಗೇಂದ್ರ, ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಎ.ಮಂಜು, ಸಾಹಿತಿ ಡಾ. ಎಸ್.ಎಲ್. ಭೈರಪ್ಪ, ಸಾಲುಮರದ ತಿಮ್ಮಕ್ಕ, ಚಲನಚಿತ್ರ ಕಲಾವಿದರಾದ ಶೃತಿ, ಅನಿರುದ್ಧ, ತಾರಾ, ನಾಗತೀಹಳ್ಳಿ ಚಂದ್ರಶೇಖರ, ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ನಾಥ ಸ್ವಾಮೀಜಿ, ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಮಾಜಿ ಶಾಸಕ ವೈಎಸ್ ವಿ ದತ್ತ, ಹಲವಾರು ಗಣ್ಯರು ಹಾಸನಾಂಬ ದರ್ಶನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅರ್ಚನಾ ಎಂ.ಎಸ್., ಎಸ್ಪಿ ಹರಿರಾಂ ಶಂಕರ್, ಎಎಸ್ಪಿ ತಮ್ಮಯ್ಯ, ಉಪ ವಿಭಾಗಾಧಿಕಾರಿ ಜಗದೀಶ್, ಡಿವೈಎಸ್ಪಿ ಉದಯ ಭಾಸ್ಕರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.