ADVERTISEMENT

ತೆರೆದ ಬಾಗಿಲು: ದರ್ಶನ ನೀಡಿದ ಹಾಸನಾಂಬೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 7:50 IST
Last Updated 24 ಅಕ್ಟೋಬರ್ 2024, 7:50 IST
   

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಇಲ್ಲಿನ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ತೆರೆಯಲಾಯಿತು.

ಮಧ್ಯಾಹ್ನ 12.10 ಕ್ಕೆ ಅರಸು ವಂಶಸ್ಥ ನಂಜರಾಜೇ ಅರಸ್ ಅವರು ಬಾಳೆಗೊನೆ ಕಡಿದ ಬಳಿಕ ಬಾಗಿಲನ್ನು ತೆರೆಯಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ಎಚ್‌.ಪಿ. ಸ್ವರೂಪ್‌ಪ್ರಕಾಶ್, ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌ಪಟೇಲ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಹಾಜರಿದ್ದರು.

ADVERTISEMENT

ಇಂದಿನಿಂದ ನ.3 ರವರೆಗೆ ಹಾಸನಾಂಬೆ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಬಾರಿ 9 ದಿನ ಮಾತ್ರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನಕ್ಕೆ ಅವಕಾಶವಿದೆ. ಗರ್ಭಗುಡಿ ಬಾಗಿಲು ತೆರೆದ ವೇಳೆ ಕಳೆದ ವರ್ಷ ಹಚ್ಚಿದ್ದ ದೀಪ ಉರಿಯುತ್ತಿತ್ತು.

ಮಧ್ಯಾಹ್ನದ ನಂತರ ಗರ್ಭಗುಡಿಗೆ ಸುಣ್ಣಬಣ್ಣ ಮಾಡಲಾಗುತ್ತಿದ್ದು, ದೇವಿಗೆ ಆಭರಣ ಹಾಗೂ ಪುಷ್ಪಾಲಂಕಾರ ಮಾಡಲಾಗುತ್ತದೆ.

ಶುಕ್ರವಾರದಿಂದ ಸಾರ್ವಜನಿಕರು ದೇವಿಯ ದರ್ಶನ ಪಡೆಯಬಹುದು. ₹1 ಸಾವಿರ ಹಾಗೂ ₹300 ದರದ ವಿಶೇಷ ದರ್ಶನದ ಟಿಕೆಟ್ ಲಭ್ಯವಿದ್ದು, ಭಕ್ತರು ಆನ್ ಲೈನ್ ನಲ್ಲಿ ಟಿಕೆಟ್ ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.